ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗ್ರಾಮ ಪಂಚಾಯಿತಿ ಅಧ್ಯಕ್ಷರು, ಮಾಜಿ ಅಧ್ಯಕ್ಷರನ್ನು ಒಳಗೊಂಡಂತೆ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಾಧಕರ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳುವಂತೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಉಪ ಮುಖ್ಯ ಚುನಾವಣಾಧಿಕಾರಿ ಬಿ.ವಿ.ಲಕ್ಷ್ಮೀಶ್ವರ್ ಅವರು ತಹಶೀಲ್ದಾರರಿಗೆ ಸೂಚಿಸಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣಾ ಸಂಬಂಧಿತ ವಿಷಯಗಳ ಪ್ರಗತಿ ಪರಿಶೀಲನೆಗಾಗಿ ಏರ್ಪಡಿಸಲಾಗಿದ್ದ ತಹಶೀಲ್ದಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಹೊಸ ಮತದಾರರ ಗುರುತಿನ ಚೀಟಿಗಳನ್ನು ಸಕಾಲದಲ್ಲಿ ವಿತರಿಸಿ. ಚುನಾವಣಾ ಕಾರ್ಯಗಳಿಗಾಗಿ ಬಿಡುಗಡೆಯಾಗಿರುವ ಅನುದಾನ ಬಳಸಿ ವರದಿ ನೀಡುವಂತೆಯೂ ಅವರು ಹೇಳಿದರು.
ಮತದಾರರ ಪಟ್ಟಿಯಲ್ಲಿ ಅನೇಕ ಕಾರಣಗಳಿಗಾಗಿ ಮತದಾರರ ಸಂಖ್ಯೆ ಹೆಚ್ಚು ಅಥವಾ ಕಡಿಮೆ ಆಗಿರಬಹುದು. ಅದಕ್ಕೆ ಸೂಕ್ತ ಕಾರಣಗಳನ್ನು ಗುರುತಿಸಿ ಪಟ್ಟಿಯನ್ನು ಸರಿಪಡಿಸಬೇಕು. ಅದಕ್ಕಾಗಿ ಪೂರಕ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ ಎಂದ ಅವರು, ಕೆಲವು ಮತಗಟ್ಟೆಗಳಲ್ಲಿ ನಿಗಧಿಪಡಿಸಿದ ಮತದಾರರಿಗಿಂತ ಹೆಚ್ಚಿನ ಹೆಸರುಗಳು ಇರುವುದು ಗಮನಕ್ಕೆ ಬಂದಿದೆ. ವಿವಾಹಿತರು, ಮರಣ ಹೊಂದಿದವರ ಹೆಸರುಗಳನ್ನು ಗುರುತಿಸಿ ಮತದಾರರ ಪಟ್ಟಿಯಿಂದ ಕೈಬಿಟ್ಟು, ಆಕ್ಷೇಪಣೆಗಳಿಗೆ ಅವಕಾಶವಿಲ್ಲದಂತೆ ಪಟ್ಟಿ ಸರಿಯಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಅವರು ತಿಳಿಸಿದರು.
ಚುನಾವಣೆಯ ಜವಾಬ್ದಾರಿಯುತ ಹುದ್ದೆಗಳಲ್ಲಿದ್ದು ಕಾರ್ಯನಿರ್ವಹಿಸುತ್ತಿರುವವರು ಚುನಾವಣಾ ಆಯೋಗವು ಪ್ರಕಟಿಸಿರುವ ಕೈಪಿಡಿಯನ್ನು ಓದಿಕೊಂಡಿರಬೇಕು. ಚುನಾವಣಾಧಿಕಾರಿಗಳು ಚುನಾವಣೆಗೆ ಸಂಬಂಧಿಸಿದ ನಮೂನೆಗಳ ಅರಿವು ಹೊಂದಿರಬೇಕು. ಕಾಲಕಾಲಕ್ಕೆ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ, ಮರಣ ಹೊಂದಿದವರ ಹೆಸರನ್ನು ಕೈಬಿಡಬೇಕು. ಮತದಾರರ ಪಟ್ಟಿಗೆ ಹೆಸರನ್ನು ಸೇರ್ಪಡೆಗೊಳಿಸಿ ಬರುವ ಅರ್ಜಿಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿ, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ. ಅಪೂರ್ಣವಾಗಿರುವ ಅರ್ಜಿಗಳನ್ನು ಯಾವುದೋ ಒತ್ತಡಕ್ಕೆ, ಮುಲಾಜಿಗೆ ಅಂಗೀಕರಿಸಬೇಡಿ. ವಿಲೇವಾರಿಯಾಗದೇ ಬಾಕಿ ಉಳಿದಿರುವ ಅರ್ಜಿಯನ್ನು ಮಾರ್ಚ್ ೨೦ರೊಳಗಾಗಿ ವಿಲೇ ಮಾಡಿ ಮಾಹಿತಿ ನೀಡುವಂತೆ ಅವರು ಸೂಚಿಸಿದರು.
ಚುನಾವಣಾಧಿಕಾರಿಗಳು ಕಾಲಕಾಲಕ್ಕೆ ಬೇಕಾಗುವ ಮಾಹಿತಿಗಾಗಿ ಮತಗಟ್ಟೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿರುವುದು ಅಗತ್ಯ. ಚುನಾವಣಾಧಿಕಾರಿಗಳು ಮತಗಟ್ಟೆಗಳನ್ನು ವಿಸ್ತರಿಸುವ, ಕಡಿತಗೊಳಿಸುವ ಮುನ್ನ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು. ಚುನಾವಣೆಗಳು ಘೋಷಣೆಯಾಗುವ ಪೂರ್ವದಲ್ಲಿ ಮತದಾರರ ಪಟ್ಟಿಯನ್ನು ಸಕ್ಷಮ ಅಧಿಕಾರಿಗಳು ಪರಿಷ್ಕರಿಸುವ ಅಗತ್ಯವಿದೆ. ವಿಶೇಷವಾಗಿ ಪುರುಷ ಮತ್ತು ಮಹಿಳಾ ಮತದಾರರ ಲಿಂಗಾನುಪಾತವನ್ನು ಸೂಕ್ಷ್ಮವಾಗಿ ಗಮನಿಸುವಂತೆಯೂ ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪ ಮುಖ್ಯ ಚುನಾವಣಾಧಿಕಾರಿ ಹೆಚ್.ಎಸ್. ದಿನೇಶ್‌ಚಂದ್ರ, ಚುನಾವಣಾ ತಹಶೀಲ್ದಾರ್ ನಾಗರಾಜ್ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post