ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಮಾಜದಲ್ಲಿರುವ ತೊಡಕುಗಳನ್ನು ವಾಸ್ತವವಾಗಿ ವಿಮರ್ಶಿಸಿ ಅರ್ಥೈಸಿಕೊಳ್ಳುವ ಜವಾಬ್ದಾರಿ ಯುವ ಸಮೂಹಕ್ಕೆ ಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅಭಿಪ್ರಾಯಪಟ್ಟರು.
ಜಿಲ್ಲಾ ಪೊಲೀಸ್ ಇಲಾಖೆ, ಕೋಟೆ ಪೊಲೀಸ್ ಠಾಣೆ, ರಾಷ್ಟ್ರೀಯ ಶಿಕ್ಷಣ ಸಮಿತಿ, ಎಸ್.ಆರ್.ನಾಗಪ್ಪಶೆಟ್ಟಿ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜು ಹಾಗೂ ಕಮಲಾ ನೆಹರು ಮಹಿಳಾ ಕಾಲೇಜಿನ ವತಿಯಿಂದ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಆರಕ್ಷಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಎಳೆಯ ಮನಸ್ಸುಗಳು ಡ್ರಗ್ಸ್ ನಂತಹ ಮಾಧಕ ವ್ಯಸನಕ್ಕೆ ಮುಗಿಬೀಳುತ್ತಿರುವುದು ಬೇಸರದ ಸಂಗತಿ. ಉತ್ತಮ ಸ್ನೇಹಿತರನ್ನು ನಿರ್ಮಿಸಿಕೊಳ್ಳಿ. ವ್ಯಸನಿಗಳಾದ ಮಕ್ಕಳನ್ನು ಕಂಡ ಪೋಷಕರ ರೋಧನೆ ಯಾವ ಶತ್ರುಗಳಿಗೂ ಬೇಡ. ಬಹುತೇಕ ಪ್ರಕರಣಗಳು ಸ್ನೇಹಿತರ ಬಲವಂತದಿಂದ ಶುರುವಾದ ಮಾಧಕ ವ್ಯಸನವೆಂಬ ಕಾಯಿಲೆ ಸಾವಿನಿಂದ ಕೊನೆಯದಾಗಿದೆ. ಮಕ್ಕಳನ್ನು ನಂಬಿದ ಕುಟುಂಬದ ಗತಿಯೇನು ಎಂಬ ಸಣ್ಣ ಜಾಗೃತಿ ನಿಮ್ಮ ಬದುಕನ್ನೇ ಉನ್ನತಿಯೆಡೆಗೆ ಬದಲಾಯಿಸಲಿದೆ. ಜ್ಞಾನದ ಕೋಟೆಯನ್ನು ಕಟ್ಟಿಕೊಳ್ಳಿ. ಅದನ್ನು ಯಾರು ಕಸಿದುಕೊಳ್ಳಲಾಗದು.
ಸ್ಪೊಕನ್ ಇಂಗ್ಲಿಷ್ ನಲ್ಲಿ ಹಿಂದುಳಿಯ ಬೇಡಿ. ತಪ್ಪಾದರು ಪರವಾಗಿಲ್ಲ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವಿದ್ವತ್ತನ್ನು ಬೆಳೆಸಿಕೊಳ್ಳಿ. ವಿದ್ಯಾರ್ಥಿಗಳಿಂದ ಸಮಾಜದಲ್ಲಿ ಅದ್ಭುತ ಬದಲಾವಣೆ ಸಾಧ್ಯ. ಅಂತಹ ಅಂತಃಶಕ್ತಿಯನ್ನು ಸಮಾಜಕ್ಕೆ ಪೂರಕವಾಗಿ ಬಳಸಿಕೊಳ್ಳಿ. ಹಿಂದಿ, ಇಂಗ್ಲೀಷ್ ನಲ್ಲಿ ಬರುವ ಯಾವುದೇ ಅನಪೇಕ್ಷಿತ ಕರೆಗಳಿಗೆ ನಿಮ್ಮ ಶೈಲಿಯ ಕನ್ನಡದಲ್ಲಿಯೇ ಉತ್ತರಿಸಿ. ಅದರಿಂದ ಬಹುತೇಕ ವಂಚನೆಗೆ ಒಳಗಾಗುವ ಸಂದರ್ಭ ಕಡಿಮೆಯಾಗುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಪರಿಚಯ ನಿಜವಾದ ಸ್ನೇಹವಾಗಿರುವುದಿಲ್ಲ. ಪೋಕ್ಸೊದಂತಹ ಪ್ರಕರಣಗಳಲ್ಲಿ ಯಾರೇ ತಪ್ಪು ಮಾಡಿದರು, ಗಂಡು ಮಕ್ಕಳೇ ಜೈಲಿಗೆ ಹೋಗುವುದು. ಸಾಮಾಜಿಕ ಜಾಲತಾಣಗಳಲ್ಲಿ ನಾವು ಬಳಸಿಕೊಂಡ ಪ್ರತಿಯೊಂದು ಮಾಹಿತಿ ಫೋಟೊಗಳು ಸುರಕ್ಷಿತವಲ್ಲ. ಆನ್ಲೈನ್ ಮೂಲಕ ನಡೆಯುವ ಟ್ರೇಡಿಂಗ್ ಹೆಸರಿನ ಆಕರ್ಷಣೆಗಳಿಗೆ ಒಳಗಾಗಬೇಡಿ. ಜಿಲ್ಲೆಯಲ್ಲಿ ಕಳೆದ ವರ್ಷ, ಕೊಲೆಗಿಂತ ರಸ್ತೆ ಅಪಘಾತಗಳಲ್ಲಿ ಸತ್ತವರ ಸಂಖ್ಯೆಯೆ ಹೆಚ್ಚು ಎಂದು ತಿಳಿಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಕಾನೂನು ಪಾಲನೆ ಪ್ರತಿಯೊಬ್ಬ ನಾಗರೀಕರ ಕರ್ತವ್ಯ. ಈ ಹಿನ್ನಲೆಯಲ್ಲಿ ಯುವ ಮನಸ್ಸುಗಳಲ್ಲಿ ಸಾಮಾಜಿಕ ಬದ್ದತೆ ಹಾಗೂ ಕಾನೂನಿನ ಅರಿವನ್ನು ಬಿತ್ತಲು ಆರಕ್ಷಕ ದಿನ ಸಾಕಾರಿಯಾಗಿದೆ. ಕಾನೂನು ಎಂಬುದು ನಮ್ಮನ್ನು ರಕ್ಷಿಸಲು ಇರುವ ಶಕ್ತಿ. ಸಂಚಾರಿ ನಿಯಮಗಳನ್ನು ನಿರ್ಲಕ್ಷಿಸಿದ್ದೇವೆ ಎಂಬುದು ದೊಡ್ಡ ಸಾಧನೆಯಲ್ಲ. ನಮಗೆ ಗೊತ್ತಿಲ್ಲದ ಹಾಗೆ ನಡೆದ ಸಣ್ಣ ನಿರ್ಲಕ್ಷ್ಯವು, ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಜವಾಬ್ದಾರಿಯುತ ನಡೆ ನಿಮ್ಮದಾಗಲಿ ಎಂದು ಹೇಳಿದರು.
ಎನ್ಇಎಸ್ ಸಹಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿದರು. ಎಸ್.ಆರ್.ಎನ್.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಕೋಟೆ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್, ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಬಾಗೋಜಿ ಉಪಸ್ಥಿತರಿದ್ದರು. ಉಪನ್ಯಾಸಕ ಸುಬ್ರಹ್ಮಣ್ಯ ಪ್ರಾರ್ಥಿಸಿ, ಡಾ.ಲಕ್ಷ್ಮಣ್ ಸ್ವಾಗತಿಸಿ, ಎನ್ಇಎಸ್ ಪಿ.ಆರ್.ಓ ಸಿ.ಎಂ.ನೃಪತುಂಗ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















