ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಾಗರದ ಹಿರಿಯ ಪತ್ರಕರ್ತ, ಸಮಾಜಮುಖಿ ಚಿಂತಿಕ ಮೃತ್ಯುಂಜಯ ಚಿಲುಮೆ ಮಠರವರ ನಿಧನಕ್ಕೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ ಪ್ರಸ್‌ಟ್ರಸ್ಟ್ ತೀವ್ರ ಸಂತಾಪ ಸೂಚಿಸಿದೆ.
35 ವರ್ಷಗಳಿಂದ ಸಾಗರ ತಾಲ್ಲೂಕಿನ ಪತ್ರಿಕಾರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸಿ, ವಿಶಿಷ್ಟ ಛಾಪು ಮೂಡಿಸಿದ್ದರು ಎಂದು ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್ ಹೇಳಿದ್ದಾರೆ.
ಕಳೆದ 32 ವರ್ಷಗಳಿಂದ ಸಾಗರದ ಪ್ರತಿಷ್ಟಿತ ಸಾಗರ ಸಂದೇಶ ದಿನ ಪತ್ರಿಕೆಯಲ್ಲಿ ಸುಮಾರು 22 ವರ್ಷಗಳ ಕಾಲ ವರದಿಗಾರರಾಗಿ, ಕಳೆದ 10 ವರ್ಷಗಳಿಂದ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಚಿಲುಮೆ ಮಠ, ಅಪರೂಪದ ಬರಹಗಾರರಾಗಿದ್ದರು ಎಂದ ಅವರು, ಮೃತುಂಜಯರವರು, ಒಂದು ಅವಧಿಗೆ ಉಳ್ಳೂರು ಮಂಡಲ ಪಂಚಾಯ್ತಿ ಸದಸ್ಯರಾಗಿ, ನಂತರ ಭೀಮನಕೋಣೆ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಸಹ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಸಾಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾಗಿ, ಕಾರ್ಯದರ್ಶಿಯಾಗಿ ಕೆಲಸ ಮಾಡಿ, ಹಾಲಿ ಸಂಘದ ವಿಶೇಷ ಆಹ್ವಾನಿತರಾಗಿ ಕಾರ್ಯನಿರ್ವಹಿಸಿ ಸಂಘಟನೆಗೆ ಬಲ ತುಂಬಿದವರು ಎಂದು ಸ್ಮರಿಸಿದ್ದಾರೆ.
ಪರಿಹಾರ ನಿಧಿಗೆ ಮನವಿ:
ಮೃತುಂಜಯ ಚಿಲುಮೆಮಠರವರ ನಿಧನ ಪತ್ರಿಕಾ ಕ್ಷೇತ್ರಕ್ಕೆ, ಸಂಘಟನೆಗೆ ನಿಜ ಅರ್ಥದಲ್ಲಿ ತುಂಬಲಾರದ ನಷ್ಟವಾಗಿದ್ದು, ಅವರ ಈ ಅಕಾಲಿಕ ನಿಧನ ಚಿಲುಮೆಮಠರವರ ಕುಟುಂಬವನ್ನು ಅತಂತ್ರಗೊಳಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಅವರ ಕುಟುಂಬಕ್ಕೆ ಆರ್ಥಿಕ ನೆರವು ದೊರಕಿಸಿಕೊಡುವಂತೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಸದ ಬಿ. ವೈ. ರಾಘವೇಂದ್ರ ಅವರಲ್ಲಿ ಮನವಿ ಮಾಡಿದೆ.
ಮನವಿ ಸ್ವೀಕರಿಸಿದ ಸಂಸದ ಬಿ. ವೈ. ರಾಘವೇಂದ್ರ ಅಗತ್ಯ ನೆರವು ಒದಗಿಸಿ ಕೊಡುವ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ, ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ಪ್ರಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಪ್ರಮುಖರಾದ ವೈ. ಕೆ. ಸೂರ್ಯನಾರಾಯಣ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post