ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿವಿ 2019-20ನೇ ಸಾಲಿನ ದೂರ ಶಿಕ್ಷಣ ವಿದ್ಯಾರ್ಥಿಗಳ ಪ್ರಥಮ ವರ್ಷದ ಪದವಿ ಪರೀಕ್ಷೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕುವೆಂಪು ವಿವಿ ಕುಲಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಕುವೆಂಪು ವಿಶ್ವವಿದ್ಯಾಲಯ ವತಿಯಿಂದ ಪ್ರಕಟಿಸಿರುವ 2019-20ನೇ ಸಾಲಿನ ದೂರ ಶಿಕ್ಷಣ ವಿದ್ಯಾರ್ಥಿಗಳ ಪ್ರಥಮ ವರ್ಷದ ಪರೀಕ್ಷೆ ರದ್ದುಪಡಿಸಬೇಕು. ಕೂಡಲೇ ವಿದ್ಯಾರ್ಥಿಗಳಿಗೆ ಆಗುವ ಸಮಸ್ಯೆಯನ್ನು ವಿಶ್ವವಿದ್ಯಾಲಯವು ಬಗೆಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

2019-20ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ದೂರಶಿಕ್ಷಣ ವಿಭಾಗದಲ್ಲಿ ಪ್ರಥಮ ವರ್ಷದ ಪದವಿಗೆ ನೂರಾರು ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ಕೊರೋನಾ ಕಾರಣದಿಂದ ದೂರ ಶಿಕ್ಷಣ ವಿದ್ಯಾರ್ಥಿಗಳಿಗೆ ಎರಡು ವರ್ಷ ಪರೀಕ್ಷೆ ನಡೆಸಲು ಸಾಧ್ಯವಾಗಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

2019-20ನೇ ಸಾಲಿನಲ್ಲಿ ದೂರ ಶಿಕ್ಷಣ ವಿಭಾಗದಲ್ಲಿ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಲಾಗಿದೆ ಎಂದು ತಿಳಿಸುವ ಜತೆಯಲ್ಲಿ 2021-22ನೇ ಸಾಲಿನಲ್ಲಿಅದೇ ವಿದ್ಯಾರ್ಥಿಗಳನ್ನು ದ್ವಿತೀಯ ವರ್ಷದ ಪದವಿ ತರಗತಿಗಳಿಗೆ ಪ್ರವೇಶಾತಿ ಮಾಡಿಕೊಳ್ಳಲಾಗಿದೆ. ಇದೀಗ ಏಕಾಏಕಿ ಪ್ರಥಮ ವರ್ಷದ ಪರೀಕ್ಷೆ ಬರೆಯುವಂತೆ ಸೂಚಿಸಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮೋಟ್ ನೀಡಿ ದ್ವಿತೀಯ ವರ್ಷದ ಪದವಿ ಪ್ರವೇಶಾತಿ ನೀಡಿರುವುದರಿಂದ ಪ್ರಥಮ ವರ್ಷದ ಪರೀಕ್ಷೆ ಬರೆಯುವಂತೆ ಸೂಚನೆ ನೀಡಿರುವುದು ಎಷ್ಟರಮಟ್ಟಿಗೆ ಸರಿ. ಕೂಡಲೇ ಕುವೆಂಪು ವಿವಿ ಹೊರಡಿಸಿರುವ ಪ್ರಥಮ ವರ್ಷದ ಪರೀಕ್ಷೆ ಬರೆಯುವಸೂಚನೆ ರದ್ದುಪಡಿಸಬೇಕು. ದ್ವಿತೀಯ ವರ್ಷದ ಪಠ್ಯಕ್ರಮಕ್ಕನುಗುಣವಾಗಿ ಮುಂದಿನ ಪರೀಕ್ಷೆಗಳನ್ನು ನಡೆಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಕುವೆಂಪು ವಿ.ವಿ ಘಟಕದ ಅಧ್ಯಕ್ಷ ಮುರುಗೇಶ್, ನಗರ ಅಧ್ಯಕ್ಷ ವಿಜಯ್, ಜಿಲ್ಲಾ ಕಾರ್ಯಾಧ್ಯಕ್ಷ ರವಿ, ಚಂದ್ರೋಜಿರಾವ್, ರವಿ, ಆಕಾಶ್, ಅರ್ಪಿತ ಹಾಗೂ ನೂರಾರು ಜನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















