ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪ್ರಸಕ್ತ ಔದ್ಯೋಗಿಕ ಕ್ಷೇತ್ರಕ್ಕೆ ಅನುವಾಗುವಂತೆ ಪ್ರಖರವಾಗಿ ಮೆಕ್ಯಾನಿಕಲ್ ಕ್ಷೇತ್ರದಲ್ಲಿ ನ್ಯಾನೋ ಟೆಕ್ನಾಲಜಿ ವಿಷಯದ ಪ್ರಸ್ತುತತೆಯು ಅಗಾಧವಾಗಿ ಬೆಳೆದಿದೆ. ಈ ನ್ಯಾನೋ ಟೆಕ್ನಾಲಜಿ ಕ್ಷೇತ್ರದ ಅತ್ಯುನ್ನತ ಕೊಡುಗೆಗಳನ್ನು ವೈಜ್ಞಾನಿಕ ಮಟ್ಟದಲ್ಲಿ ಅರ್ಥೈಸಿಕೊಂಡು ಸಾಮಾಜಿಕವಾಗಿ ಅಳವಡಿಸಿಕೊಳ್ಳುವಲ್ಲಿ ಪ್ರಯತ್ನಿಸಬೇಕೆಂದು ಪಿಇಎಸ್ಐಟಿಎಂ ನ ಪ್ರಾಂಶುಪಾಲರಾದ ಡಾ. ಚೈತನ್ಯ ಕುಮಾರ್ ನುಡಿದರು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ವಿಭಾಗ ಮತ್ತು ಶಿವಮೊಗ್ಗ ನಗರದ ಆಡ್ ನ್ಯಾನೋ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹಭಾಗಿತ್ವದಲ್ಲಿ ನ್ಯಾನೋ ಟೆಕ್ನಾಲಜಿ ಕ್ಷೇತ್ರದ ಹಲವಾರು ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳ ಭಂಡಾರವಾದ “ಪಿಇಎಸ್ಐಟಿಎಂ – ಆಡ್ ನ್ಯಾನೋ” ಸಂಶೋಧನಾತ್ಮಕ ಕೇಂದ್ರವನ್ನು ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯ ಉಪಾಧ್ಯಕ್ಷರು ಹಾಗೂ ಗ್ಲೋಬಲ್ ಆರ್ ಎಂ ಜಿ ಮುಖ್ಯಸ್ಥರಾದ ಡಾ. ಚಕ್ರವರ್ತಿ ಈ ಎಸ್ ಹಾಗೂ ಪಿಇಎಸ್ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಭಾಷ್ ಬಿ ಆರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಪ್ರಸಕ್ತ ಘನ ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರತಿಪಾದಿಸಿರುವ ಹಲವು ನಿಯಮಗಳಿಗೆ ಅನುಗುಣವಾಗಿ ತಮ್ಮ ಸಂಶೋಧನಾತ್ಮಕ ಕಾರ್ಯಕ್ಷೇತ್ರವನ್ನು ವೃದ್ಧಿಸಿಕೊಳ್ಳುವಲ್ಲಿ ಭದ್ರ ಅಡಿಪಾಯವಾಗಿ ಈ ಆಡ್ ನ್ಯಾನೋ ಸಂಶೋಧನಾತ್ಮಕ ಕೇಂದ್ರವನ್ನು ಉಪಯೋಗಿಸಿಕೊಳ್ಳುವಂತೆ ಸೂಚ್ಯವಾಗಿ ತಿಳಿಸಿದರು.
Also read: ಸುಲಲಿತ ಜೀವನ ನಿರ್ವಹಣೆ ಸಮೀಕ್ಷೆಯಲ್ಲಿ ಶಿವಮೊಗ್ಗದ ಪರವಾಗಿ ಪಾಲ್ಗೊಳ್ಳಿ: ಶಾಸಕ ಈಶ್ವರಪ್ಪ ಮನವಿ
ಪ್ರಸಕ್ತ ಔದ್ಯೋಗಿಕ ಲೋಕಕ್ಕೆ ಅನುಗುಣವಾಗಿ ದಿನನಿತ್ಯದ ಅದ್ವಿತೀಯ ಸವಾಲುಗಳನ್ನು ಪ್ರಖರವಾಗಿ ಹಿಮ್ಮೆಟ್ಟಿಸುವಲ್ಲಿ ನ್ಯಾನೋ ಟೆಕ್ನಾಲಜಿ ಕ್ಷೇತ್ರವು ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ. ಈ ಕ್ಷೇತ್ರವು ಮನುಷ್ಯ ಸಮಾಜದ ಹಲವಾರು ನವೀನ ರೀತಿಯ ಸಮಸ್ಯೆಗಳ ಮಾರ್ಗೋಪಾಯಕ್ಕೆ ಭದ್ರಬುನಾದಿಯಾಗಿ ರೂಪಗೊಂಡಿದೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಸ್ತುಗಳ ಹಲವಾರು ರೀತಿಯ ಗುಣ ವಿಶೇಷಗಳನ್ನು ಮನುಷ್ಯ ಜನಾಂಗದ ಅಗತ್ಯಗಳಿಗೆ ತಕ್ಕಂತೆ ನಿರ್ಮಿಸಿ, ಪರೀಕ್ಷಿಸುವ ಸಾಧನಗಳು ಹಾಗೂ ಪ್ರಯೋಗಗಳ ಭಂಡಾರವೇ ನ್ಯಾನೋ ಟೆಕ್ನಾಲಜಿ ಕ್ಷೇತ್ರದಲ್ಲಿ ಹುದುಗಿಕೊಂಡಿದೆ.
ಸಂಶೋಧನಾತ್ಮಕ ಕೇಂದ್ರ ಹಾಗೂ ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ ಗಿರೀಶ ಮಾತನಾಡಿ, ಆಡ್ ನ್ಯಾನೋ ಸಂಶೋಧನಾತ್ಮಕ ಕೇಂದ್ರದಲ್ಲಿ ಹಲವಾರು ಬಗೆಯ ನ್ಯಾನೋ ಟೆಕ್ನಾಲಜಿ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಬಗೆಯ ನ್ಯಾನೋ ಮೆಟೀರಿಯಲ್ಸ್ ಗಳನ್ನು ಸಂಗ್ರಹಿಸಲಾಗಿದೆ. ಈ ವಸ್ತುಗಳ ಮೇಲೆ ವಿವಿಧ ನಮೂನೆಯ ಭೌತಿಕ, ರಾಸಾಯನಿಕ, ಯಾಂತ್ರಿಕ ಗುಣಲಕ್ಷಣಗಳ ಸ್ಥಿತಿಗತಿಗಳನ್ನು ಪ್ರಯೋಗಗಳ ಮೂಲಕ ಖಚಿತಪಡಿಸಿಕೊಳ್ಳುವತ್ತ ಉಪಸ್ಥಿತವಿರುವ ಉಪಕರಣಗಳು ಉಪಯೋಗಕ್ಕೆ ಬರಲಿವೆ ಎಂದು ತಿಳಿಸಿದರು
ತತ್ಸಂಧರ್ಭದಲ್ಲಿ ಹಲವಾರು ಬಗೆಯ ಪ್ರಯೋಗಗಳನ್ನು ಕಾರ್ಯಗತರೂಪಕ್ಕೆ ತರಲು ಅನುವಾಗುವಂತೆ ಉತ್ಕೃಷ್ಟ ಹಾಗೂ ಅಂತರ್ ರಾಷ್ಟ್ರೀಯ ಮಟ್ಟದ ಪರಿಕರಗಳನ್ನು ಆಮದು ಮಾಡಿಕೊಳ್ಳಲಾಗಿದ್ದು ಅವುಗಳ ಮೂಲಕ ವಿವಿಧ ನಮೂನೆಯ ಪ್ರಯೋಗಗಳನ್ನು ನಡೆಸಲು ಸದವಕಾಶವನ್ನು ಕಲ್ಪಿಸಲಾಗಿದೆ. ಈ ಅವಕಾಶವನ್ನು ವಿದ್ಯಾರ್ಥಿ ಹಾಗೂ ಸಂಶೋಧನಾಕಾಂಕ್ಷಿಗಳು ಸದುಪಯೋಗಪಡಿಸಿಕೊಳ್ಳುವಲ್ಲಿ ಕಾರ್ಯವನ್ಮುಖರಾಗಬೇಕೆಂದರು.
ಈ ಸಂದರ್ಭದಲ್ಲಿ ಪಿಇಎಸ್ ಟ್ರಸ್ಟ್ ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ನಾಗರಾಜ ಆರ್, ಆಡ್ ನ್ಯಾನೋ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಆಸಿಫ್ ಹಾಗೂ ಮೇಘನ, ಮೆಕಾನಿಕಲ್ ವಿಭಾಗದ ಬೋಧಕ ಸಿಬ್ಬಂದಿ ಡಾ ಮಂಜುನಾಥ್ ಪಟೇಲ್ ಜಿ ಸಿ, ವಿಭಾಗದ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post