ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ಶೆಟ್ಟಿಹಳ್ಳಿ ಪರಿಸರ ಸೂಕ್ಷ್ಮವಲಯಕ್ಕೆ ಹೊಂದಿಕೊಂಡಂತೆ 10ಕಿಮೀ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಕಲ್ಲುಗಣಿಗಾರಿಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಹೇಳಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಟಾಸ್ಕ್‌ಫೋರ್ಸ್(ಗಣಿ) ಸಮಿತಿ, ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಪರವಾನಿಗೆ ಮತ್ತು ನಿಯಂತ್ರಣ ಪ್ರಾಧಿಕಾರ ಹಾಗೂ ಜಿಲ್ಲಾ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶೆಟ್ಟಿಹಳ್ಳಿ ಸೂಕ್ಷ್ಮ ಪ್ರದೇಶಕ್ಕೆ ಹೊಂದಿಕೊಂಡಂತೆ ಗುತ್ತಿಗೆದಾರರು ನಡೆಸಲಾಗುತ್ತಿರುವ ಗಣಿಗಾರಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾಖಲಾಗಿರುವ ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಆದೇಶ ಹೊರಡಿಸಿದೆ. ಅದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕಲ್ಲು ಮತ್ತು ಮರಳು ಗಣಿಗಾರಿಕೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಸರ್ಕಾರದ ಅದೇಶಗಳನ್ನು ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಗಾಜನೂರು ಜಲಾಶಯದ ಹಿನ್ನೀರಿನ ಪ್ರದೇಶದ ನಾಗರೀಕರು ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಪ್ರಮಾಣದ ಹೂಳು, ಮರಳು ತುಂಬಿಕೊಂಡಿರುವ ಕಾರಣದಿಂದ ಜಲಾಶಯದಲ್ಲಿ ಸಂಗ್ರಹವಾದ ನಂತರ ಹೆಚ್ಚಿನ ನೀರು ಜನವಸತಿ ಪ್ರದೇಶಗಳಿಗೆ ನುಗ್ಗುವಂತಾಗಿದೆ. ಕೆಲವೊಮ್ಮೆ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾಳಾಗುವುದು ಮಾತ್ರವಲ್ಲ ಜಮೀನಿನಲ್ಲಿ ಮರಳು ಸಂಗ್ರಹಗೊಂಡು ಕೃಷಿ ಚಟುವಟಿಕೆಗೆ ಅಡಚಣೆ ಉಂಟು ಮಾಡುತ್ತಿದೆ ಎಂಬ ಬಗ್ಗೆ ದೂರುಗಳು ಬರುತ್ತಿವೆ. ಆದ್ದರಿಂದ ಸಂಬಂಧಿತ ಇಲಾಖಾ ಅಧಿಕಾರಿಗಳು ಕ.ನೀ.ನಿಗಮ, ತುಂಗಾ ಮೇಲ್ದಂಡೆ ಯೋಜನೆ ಮತ್ತು ಅರಣ್ಯ ಇಲಾಖಾ ಅಧಿಕಾರಿಗಳಿಂದ ಅಭಿಪ್ರಾಯ ಪಡೆದು ಅಗತ್ಯ ಕ್ರಮ ವಹಿಸಬೇಕು. ಇದರಿಂದಾಗಿ ಜಲಾಶಯದಲ್ಲಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಳವಾಗಲಿದೆ ಎಂದರು.
ಸಾಗರದ ಪಂಚಾಯತ್‌ರಾಜ್ ಇಲಾಖೆಯ ಸುಪರ್ದಿಗೆ ವಹಿಸಿಕೊಡಲಾಗಿದ್ದ ಮರಳು ಗಣಿಗಳ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸಂಬಂಧಿಸಿದ ಇಲಾಖಾಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಜವಾಭ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿರುವುದಾಗಿ ತಿಳಿಸಿದ ಅವರು, ಸರ್ಕಾರಿ ಯೋಜನೆಗಳಿಗಾಗಿ ಕಾಯ್ದಿರಿಸಿದ ಗಣಿಗಳನ್ನು ಉದ್ದೇಶಿತ ಸರ್ಕಾರದ ಆಶಯಗಳಿಗೆ ಪೂರಕವಾಗಿ ಕನಿಷ್ಟ ದರದಲ್ಲಿ ಮರಳು ವಿಲೇವಾರಿಯಾಗುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ನಡೆಯುವ ಅಕ್ರಮ ಗಣಿಗಾರಿಕೆ, ಸಾಗಾಣಿಕೆಗೆ ಸಂಬಂಧಿಸಿದಂತೆ ಸಂಬಂಧಿತ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪ್ರಕರಣಗಳನ್ನು ದಾಖಲಿಸಬೇಕು ಹಾಗೂ ದಂಡ ವಸೂಲಿ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕಲ್ಲಗಂಗೂರು, ಗೆಜ್ಜೇನಹಳ್ಳಿ ವ್ಯಾಪ್ತಿಯಲ್ಲಿನ ಕ್ರಷರ್, ಗಣಿಗಾರಿಕೆಯಿಂದ ಪರಿಸರದ ಮೇಲಾಗಿರುವ ಪರಿಣಾಮಗಳ ಕುರಿತು ತಜ್ಞರಿಂದ ಅಧ್ಯಯನ ನಡೆಸಿ, ವರದಿ ನೀಡುವುದಕ್ಕೆ ಸಂಬಂಧಿಸಿದಂತೆ 15ಲಕ್ಷ ರೂ.ಗಳನ್ನು ಮಂಜೂರು ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.
ತೀರ್ಥಹಳ್ಳಿ ತಾಲೂಕು ಮೇಲಿನ ಕುರುವಳ್ಳಿ ಹಾಗೂ ಬುಕ್ಲಾಪುರ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು, ಮೊಕದ್ದಮೆಗಳನ್ನು ದಾಖಲಿಸಿ, ಸಂಪರ್ಕ ರಸ್ತೆ ಕಡಿತಗೊಳಿಸಿದ ಹೊರತಾಗಿಯೂ ಪುನಃ ಸಂಪರ್ಕ ಕಲ್ಪಿಸಿಕೊಂಡು ಅಕ್ರಮ ಗಣಿಗಾರಿಕೆ ಮುಂದುವರೆಸಿರುವ ಬಗ್ಗೆ ದೂರುಗಳಿದ್ದು, ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರ ತಂಡ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ. ಶೇಖರ್ ಹೆಚ್. ತೆಕ್ಕಣ್ಣನವರ್, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ಭೂವಿಜ್ಞಾನಿ ಚಂದ್ರಶೇಖರ್ ಹೊಸಮನಿ ಸೇರಿದಂತೆ ಸಂಬಂಧಿತ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post