ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಪರಿಸರ ಹಾಗೂ ಕಾಡುಗಳಲ್ಲಿ ಅಳಿವಿನಂಚಿನಲ್ಲಿರುವ ಜೀವ ಪ್ರಭೇದಗಳನ್ನು ರಕ್ಷಿಸುವ ತುರ್ತು ಅಗತ್ಯವಿದೆ ಎಂದು ಜೆಎನ್’ಎನ್ ಇಂಜಿನಿಯರಿಂಗ್ ಕಾಲೇಜಿನ ವಿಶ್ರಾಂತ ಉಪಪ್ರಾಂಶುಪಾಲರಾದ ಡಾ.ಎಲ್.ಕೆ. ಶ್ರೀಪತಿ ಕರೆ ನೀಡಿದರು.
ಮಾನಸ ಟ್ರಸ್ಟ್, ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ ಪರಿಸರ ಅಧ್ಯಯನ ಕೇಂದ್ರ, ಕಿಡ್ಸ್ ಸಂಸ್ಥೆ, ಪರ್ಯಾವರಣ ಟ್ರಸ್ಟ್, ಐಕ್ಯೂಎಸಿ ಘಟಕ, ಸಮಾಜಕಾರ್ಯ ವಿಭಾಗ, ಎನ್’ಎಸ್’ಎಸ್ ಘಟಕ, ಬಯೋ ಸ್ಪೆಕ್ಟ್ರಂಮ್ ಸಹಯೋಗದಲ್ಲಿ ನಾಡಿನ ಹೆಸರಾಂತ ಲೇಖಕರಾದ ಶ್ರೀ ಪೂರ್ಣಚಂದ್ರ ತೇಜಸ್ವಿ ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಾಗೂ ಪ್ರಖ್ಯಾತ ಕಾದಂಬರಿ ಕರವಾಲೋ ಪ್ರಕಟವಾಗಿ 50 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಆಯೋಜಿಸಲಾಗಿದ್ದ 42ನೇ ಸಹ್ಯಾದ್ರಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಪಶ್ಚಿಮ ಘಟ್ಟವು ಜಗತ್ತಿನ ಎಂಟು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಸಾವಿರಾರು ಪ್ರಭೇದಗಳ ಪ್ರಾಣಿ-ಪಕ್ಷಿ ಸಂಕುಲಗಳು ಒಟ್ಟಾಗಿ ಜೀವಿಸುತ್ತಿವೆ. ಸರ್ಕಾರದ ಹಲವಾರು ಕಾರ್ಯ ಯೋಜನೆಗಳು ಯಾವುದೇ ಪೂರ್ವಸಿದ್ಧತೆ ಇಲ್ಲದೆ ರೂಪಿಸಿ, ಈ ಜೀವ ಪ್ರಭೇದಗಳು ಅಳಿವಿನ ಅಂಚಿನಲ್ಲಿವೆ. ಆ ಮೂಲಕ ಜೀವವೈವಿಧ್ಯತೆಯ ಅಸಮತೋಲನ ಸೃಷ್ಠಿ ಆಗುತ್ತಿದೆ. ಇದರಿಂದ ಪರಿಸರದ ಅಳಿವು ಹಾಗೂ ವೈಪರೀತ್ಯದಿಂದ ಹಲವಾರು ತೊಂದರೆಗಳಾಗುತ್ತಿವೆ. ಆದ್ದರಿಂದ ಈ ಪಶ್ಚಿಮ ಘಟ್ಟವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸರ್ಕಾರದ ಯೋಜನೆ ರೂಪಿಸುವವರು ಪಶ್ಚಿಮ ಘಟ್ಟಗಳ ಬಗ್ಗೆ ಅರಿವನ್ನು ಹೊಂದಿರುವವರು ಆಗಿರಬೇಕಾಗುತ್ತದೆ. ಯಾವುದೇ ಅಧ್ಯಯನ ಇಲ್ಲದೇ ಪಶ್ಚಿಮ ಘಟ್ಟಗಳಲ್ಲಿ ಸರ್ಕಾರ ಯೋಜನೆಗಳನ್ನು ಮಾಡುವುದರಿಂದ ಪರಿಸರ ನಾಶವಾಗುತ್ತದೆ. ಅಪೂರ್ವವಾದ ಪ್ರಾಣಿ-ಪಕ್ಷಿ ಸಂಕುಲಗಳು ನಾಶವಾಗುತ್ತವೆ. ಆದುದರಿಂದ ಸಂಘ-ಸಂಸ್ಥೆಗಳು, ಕಾಲೇಜುಗಳು ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸಬೇಕಾಗುತ್ತದೆ. ಆ ಮೂಲಕ ಅಳಿವಿನಂಚಿನಲ್ಲಿರುವ ಅನೇಕ ಪ್ರಾಣಿ-ಪಕ್ಷಿ ಪ್ರಭೇದಗಳನ್ನು ಅಪೂರ್ವವಾದ ಸಸ್ಯ-ಸಂಕುಲಗಳನ್ನು ಉಳಿಸಿಕೊಳ್ಳುವ ಕಾರ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾಕಾವೇರಿ ಮಾತನಾಡಿ, ಮಲೆನಾಡು ಹಾಗೂ ಪಶ್ಚಿಮ ಘಟ್ಟದ ಪರಿಸರದ ಅರಿವನ್ನು ಹೊಂದಿರುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ನಮ್ಮ ಸುತ್ತ-ಮುತ್ತಲಿನ ಪರಿಸರದ ಬಗ್ಗೆ ಕಾಳಜಿಯನ್ನು ಹೊಂದಿರಬೇಕು. ಇತರರಲ್ಲೂ ಕಾಳಜಿ ಮತ್ತು ಅರಿವನ್ನು ಮೂಡಿಸಬೇಕು. ಪರಿಸರ ಮತ್ತು ಅರಣ್ಯ ಸಂಪತ್ತನ್ನು ಕಾಪಾಡಬೇಕು ಹಾಗೂ ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿ ಪಾತ್ರವನ್ನು ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿ ಮಾತನಾಡಿ, ಪರಿಸರ ಸಂರಕ್ಷಣೆ ನಮಗೆಲ್ಲಾ ಆದ್ಯತೆಯಾಗಬೇಕಿದ್ದು, ಈ ಮೂಲಕ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯೂ ಸಹ ಸಂರಕ್ಷಿಸಲ್ಪಸಬೇಕು ಎಂದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆ.ಆರ್. ಮಾಧುರಿ ವಂದಿಸಿ, ತೃತೀಯ ಸಮಾಜಕಾರ್ಯ ವಿಭಾಗದ ಸ್ಪೂರ್ತಿ ನಿರೂಪಿಸಿದರು.
ಕಾಲೇಜಿನ ಆಡಳಿತಾ ಮಂಡಳಿ ನಿರ್ದೇಶಕರಾದ ಡಾ.ರಜನಿ ಎ. ಪೈ, ಆಡಳಿತಾಧಿಕಾರಿಗಳಾದ ಪ್ರೊ. ರಾಮಚಂದ್ರ ಬಾಳಿಗ ಹಾಗೂ ಐ ಕ್ಯೂ ಎ ಸಿ ಸಂಯೋಜಕರಾದ ಡಾ.ಅರ್ಚನಾ ಭಟ್, ಉಪಸ್ಥಿತರಿದ್ದರು. ತನ್ಮಯಿ ಮತ್ತು ಸಂಗಡಿಗರು ಪ್ರಾರ್ಥಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















