ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹಾನಗರ ಪಾಲಿಕೆಯ ಭ್ರಷ್ಟಾಚಾರಗಳು #Corruption ಕೊನೆಗೊಳ್ಳಬೇಕು ಪಾಲಿಕೆ ಸಾರ್ವಜನಿಕ ಸ್ನೇಹಿಯಾಗಬೇಕು ಎಂದು ಪಾಲಿಕೆಯ ಮಾಜಿ ಸದಸ್ಯ ಹಾಗೂ ರಾಷ್ಟ್ರಭಕ್ತ ಬಳಗದ ಮುಖಂಡ ಈ. ವಿಶ್ವಾಸ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಇತ್ತೀಚೆಗೆ ಲೋಕಾಯುಕ್ತ ದಾಳಿ ನಡೆದಿದ್ದು ಮತ್ತು ಶಶಿಧರ್ ಎಂಬಾತನ ವಿರುದ್ಧ ದೂರು ದಾಖಲಿದ್ದು, ಈ ಹಿಂದೆ ಕೃಷ್ಣಪ್ಪ ಅವರು ಕೂಡ ಲೋಕಾಯುಕ್ತರ ಬಲೆಗೆ ಬಿದ್ದಿದ್ದು ಸಾಕ್ಷಿಯಾಗಿದೆ. ಸಾರ್ವಜನಿಕರ ಕೆಲಸಗಳು ನಡೆಯುತ್ತಲೇ ಇಲ್ಲ. ತಮ್ಮ ದುಡಿಮೆಯನ್ನು ಬಿಟ್ಟು ಹಣ ಖರ್ಚು ಮಾಡಿಕೊಂಡು ಪಾಲಿಕೆ ಮೆಟ್ಟಿಲು ಹತ್ತಿದರೆ ಅಲ್ಲಿನ ಅಧಿಕಾರಿಗಳು ಸಬೂಬು ಹೇಳುತ್ತಾರೆ. ಇಲ್ಲ ಲಂಚ ಕೇಳುತ್ತಾರೆ. ಸಾರ್ವಜನಿಕರ ಯಾವ ಕೆಲಸಗಳೂ ಆಗುತ್ತಿಲ್ಲ. ಅದರಲ್ಲೂ ಇ-ಖಾತೆ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಿದೆ ಎಂದು ಆರೋಪಿಸಿದರು.
ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಸುಮಾರು 3600 ಮನೆಗಳಿವೆ. ಇವತ್ತಿಗೂ ಆಶ್ರಯ ನಿವಾಸಿಗಳು ಎನ್‌ಓಸಿಗೆ, ಖಾತೆಗೆ ಮತ್ತು ವಿವಿಧ ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಇವರೆಲ್ಲಾ ಕೂಲಿ ಕಾರ್ಮಿಕರು ಅವರು ಒಂದು ದಿನದ ಕೂಲಿ ಬಿಟ್ಟು ಆಟೋ ಹಿಡಿದು ಬಂದರೆ ಸಾವಿರ ರೂ. ಖರ್ಚಾಗುತ್ತದೆ ಆದರೂ ಕೆಲಸ ಆಗುವುದಿಲ್ಲ. ಈಗ ಸಸ್ಪೆಂಡ್ ಆಗಿರುವ ಶಶಿಧರ್ ಎಂಬ ಅಧಿಕಾರಿಗೆ ಈ ಹಿಂದೆಯೇ ನಾವು ಹೇಳಿದ್ದೆವು. ಆದರೂ ಸ್ಪಂದನೆ ನೀಡಿರಲಿಲ್ಲ. ಪಾಲಿಕೆಯಲ್ಲಿ ಚುನಾವಣೆ ಆಗದೆ ಹಲವು ದಿನಗಳಾಗಿವೆ. ಜನಪ್ರತಿನಿಧಿಗಳು ಇಲ್ಲ. ಅಧಿಕಾರಿಗಳು ಆಡಿದ್ದೇ ಆಟವಾಗಿದೆ. ಕೂಡಲೇ ಪಾಲಿಕೆಗೆ ಚುನಾವಣೆ ನಡೆಸಬೇಕು ಆಯುಕ್ತರು ಭ್ರಷ್ಟಾಚಾರ ತಡೆಗೆ ಮತ್ತು ನಗರದ ಅವ್ಯವಸ್ಥೆಗೆ ಗಮನಹರಿಸಬೇಕು ಎಂದರು.
ರಾಷ್ಟ್ರಭಕ್ತ ಬಳಗದ ಮತ್ತೋರ್ವ ಮುಖಂಡ ವಕೀಲ ವಾಗೀಶ್ ಮಾತನಾಡಿ, ಡಿಸಿ ಕಛೇರಿ ಎದುರು ಇರುವ ಆಟದ ಮೈದಾನದ ವಿವಾದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ಸೂಚಿಸಿತ್ತು. ಎಂಟು ವಾರದೊಳಗೆ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಆದರೆ ಅವಧಿ ಮುಗಿದು ಒಂದು ತಿಂಗಳಾಗಿದೆ ಆಯುಕ್ತರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಜಾಗ ಪಾಲಿಕೆಯದು ಎಂದು ಹೇಳಿಲ್ಲ. ಆದ್ದರಿಂದ ರಾಷ್ಟçಭಕ್ತ ಬಳಗದಿಂದ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕೇಸು ದಾಖಲಿಸಲಾಗುವುದು ಮತ್ತು ವಾರದೊಳಗೆ ತೀರ್ಮಾನ ಕೈಗೊಳ್ಳದಿದ್ದರೆ ಅವರ ವಿರುದ್ಧ ಹೋರಾಟ ಮಾಡಲಾಗುವುದು ಎಂದರು.
ಇನ್ನೋರ್ವ ಮುಖಂಡ ಶ್ರೀಕಾಂತ್ ಮಾತನಾಡಿ, ಧರ್ಮಸ್ಥಳದ ನಾಟಕ ಕೊನೆಗೊಂಡಿದೆ. ಧರ್ಮವೇ ಗೆದ್ದಿದೆ. ಧರ್ಮಸ್ಥಳದ ಪರವಾಗಿ ಮೊದಲ ಹೋರಾಟ ರೂಪಿಸಿದವರೇ ರಾಷ್ಟ್ರಭಕ್ತ ಬಳಗ. ಅದರ ಪ್ರತಿಫಲ ಈಗ ಸಿಕ್ಕಿದೆ. ಧರ್ಮಸ್ಥಳಕ್ಕೆ ಇದ್ದ ಕಳಂಕ ಕಳಚಿದೆ ಈ ಹಿನ್ನಲೆಯಲ್ಲಿ ಕೆ.ಈ. ಕಾಂತೇಶ್‌ರವರ ನೇತೃತ್ವದಲ್ಲಿ ಸೆ.2ರ ಬೆಳಿಗ್ಗೆ 8 ಗಂಟೆಗೆ ರಾಷ್ಟçಭಕ್ತ ಬಳಗದ ಸಂಚಾಲಕ ಈಶ್ವರಪ್ಪ ಅವರ ನಿವಾಸದಿಂದ ಧರ್ಮಸ್ಥಳಕ್ಕೆ ಸುಮಾರು 300 ವಾಹನಗಳಲ್ಲಿ ರಾಷ್ಟçಭಕ್ತ ಬಳಗದ ಸದಸ್ಯರು ಹಾಗೂ ಧರ್ಮಸ್ಥಳ ಭಕ್ತರು ತೆರಳಿ ವಿಶೇಷ ಪೂಜೆ ಧರ್ಮಸ್ಥಳದಲ್ಲಿ ಸಲ್ಲಿಸಲಾಗುವುದು. ಜೊತೆಗೆ ತರಕಾರಿ ಹಾಗೂ ಅಕ್ಕಿಯನ್ನು ಸಮರ್ಪಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್ ಜಾದವ್, ಬೇಲೂರು ರವಿ, ಜಿ.ಪಿ. ಶ್ರೀಕಾಂತ್, ಕುಬೇರಪ್ಪ, ಟಿ. ನಾಯಕ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post