ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವ ಸಮೂಹ ಮಾದಕ ವ್ಯಸನಗಳ #Drug Addiction ಅಡಿಯಾಳಾಗದೆ ವ್ಯಸನ ಮುಕ್ತ ಸುಸ್ಥಿರ ದೇಶ ನಿರ್ಮಾಣ ಮಾಡಲು ಕಂಕಣ ಬದ್ದರಾಗೋಣ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಕರೆ ನೀಡಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ವತಿಯಿಂದ ಐಕ್ಯೂಎಸಿ, ಎನ್ಎಸ್ಎಸ್ ಹಾಗೂ ರೆಡ್ ಕ್ರಾಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಚಂದನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಯುವ ದಿನ ಅಂಗವಾಗಿ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಇಲಾಖೆ ಒಂದೇ ಎಲ್ಲವನ್ನು ಸರಿ ಪಡಿಸುತ್ತದೆ ಎಂಬ ಯೋಚನೆಗಿಂತ, ಸಮಾಜದ ಪ್ರಜೆಗಳಾಗಿ ಸುಸ್ಥಿರ ವಾತಾವರಣ ನಿರ್ಮಾಣ ಮಾಡಲು ಏನೆಲ್ಲಾ ಕೊಡುಗೆ ನೀಡಬಹುದು ಎಂಬುದನ್ನು ಸೂಕ್ಷ್ಮವಾಗಿ ಯೋಜಿಸಿ. ಅಮೂಲ್ಯವಾದ ಬದುಕನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಿ. ಹೆಲ್ಮೆಟ್, ಸೀಟ್ ಬೆಲ್ಟ್ ನಂತಹ ಸೂಕ್ಷ್ಮ ವಿಚಾರಗಳ ಬಗೆಗಿನ ಅಸಡ್ಡೆ ದೊಡ್ಡ ಅನಾಹುತಗಳಿಗೆ ಕಾರಣವಾಗುತ್ತಿದ್ದು, ಸುರಕ್ಷಿತವಾಗಿ ವಾಹನಗಳನ್ನು ಚಲಾಯಿಸಿ ಎಂದು ಸಲಹೆ ನೀಡಿದರು.

ಅದೇ ರೀತಿಯಲ್ಲಿ ದೇಹದ ಪ್ರಕೃತಿಗೆ ಸಮಸ್ಯೆಯಾದಾಗ ಅದು ಕೂಡ ಪ್ರಕೃತಿಯ ಹಾಗೆಯೇ ಸ್ವಯಂ ನಿಯಂತ್ರಿಸಿಕೊಳ್ಳಲು ಪ್ರಯತ್ನಿಸುತ್ತದೆ. ಮಾದಕ ದ್ರವ್ಯವು ದೇಹದ ಪ್ರಕೃತಿಯಲ್ಲಿ ಅಸಹಜ ಬೆಳವಣಿಗೆಗೆ ಕಾರಣವಾಗಿ, ಸಮತೋಲನ ತಪ್ಪಲು ಕಾರಣವಾಗುತ್ತದೆ. ಒಮ್ಮೆ ಶುರುವಾದ ವ್ಯಸನದಿಂದ ಹೊರಬರುವ ದಾರಿಯೇ ಕಾಣದಾಗುತ್ತದೆ. ಮನಸ್ಸಿನ ಭಾವನೆಗಳ ನಿಯಂತ್ರಣ ಮತ್ತು ಜಾಗೃತಿಯೇ ಇದಕ್ಕಿರುವ ಔಷಧವೇ ವಿನಃ ಬೇರೆ ಯಾವ ಔಷಧೀಯು ಇಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಶುಭಾ ಮರುವಂತೆ, ಗೃಹ ರಕ್ಷಕದಳದ ನಿಕಟಪೂರ್ವ ಜಿಲ್ಲಾ ಸಮಾದೇಷ್ಟರಾದ ಚಂದನ್ ಪಟೇಲ್, ಎನ್ಎಸ್ಎಸ್ ಘಟಕ ಅಧಿಕಾರಿ ಮಂಜುನಾಥ್.ಎನ್, ಪ್ರವೀಣ್.ಬಿ.ಎನ್, ಗಾಯತ್ರಿ.ಟಿ, ಯುವ ರೆಡ್ ಕ್ರಾಸ್ ವಿಭಾಗ ಸಂಚಾಲಕಿ ಸೌಪರ್ಣಿಕ ಉಮೇಶ್, ಶೃತಿ.ಕೆ, ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ.ಫ್ರಾನ್ಸಿಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post