ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೆರೆಕಟ್ಟೆ ಕಾಲುವೆಗಳು, ನದಿ-ನಾಲೆಗಳ ಮೇಲೆ ಮನುಷ್ಯನ ಅವ್ಯಾಹತ ದಾಳಿ ಹಾಗೂ ಅವುಗಳ ಒತ್ತುವರಿಯಿಂದಾಗಿ ಮಳೆಗಾಲದಲ್ಲಿ ಪ್ರವಾಹಗಳು ಉಂಟಾಗಿ ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ. ಇದಕ್ಕೆ ಮನುಷ್ಯನ ದುರಾಸೆಯೆ ಕಾರಣವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ಅವರು ಹೇಳಿದರು.
ಅವರು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು(ಭೈರತಿ) ಹಾಗೂ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ತುಂಬಿದ ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಪೂರ್ವಜರು ದೂರದೃಷ್ಟಿಯಿಂದ ಜಲಾಶಯಗಳಂತ ನೀರಿನ ಸಂಗ್ರಹಗಳನ್ನು ನಿರ್ಮಿಸಿದ್ದುದರ ಫಲವಾಗಿ ಇಂದು ನೀರಾವರಿ ಯೋಜನೆಗಳನ್ನು ಕೈಗೊಳ್ಳಲು ಹಾಗೂ ಕುಡಿಯುವ ನೀರನ್ನು ಬಳಸಲು ಸಾಧ್ಯವಾಗುತ್ತಿದೆ ಎಂದ ಅವರು ಇವುಗಳನ್ನು ಉಳಿಸಿ, ಸದ್ಭಳಕೆ ಮಾಡಿಕೊಳ್ಳಬೇಕಾದ ಅಗತ್ಯವಿದೆ ಎಂದರು.
ಶೇ.35ರಷ್ಟು ನೀರು ಬಳಕೆಯಾಗದೆ ವ್ಯರ್ಥವಾಗಿ ಹೋಗುತ್ತಿದೆ. ಅದನ್ನು ಸದ್ವಿನಿಯೋಗಪಡಿಸಿಕೊಳ್ಳಬೇಕು. ಅಂತೆಯೇ ಕಡಿಮೆ ನೀರನ್ನು ಬಳಸಿ ಹೆಚ್ಚಿನ ಬೆಳೆಯನ್ನು ಬೆಳೆಯಲು ಮುಂದಾಗುವಂತೆ ರೈತರಲ್ಲಿ ಮನವಿ ಮಾಡಿದ ಅವರು, ಈ ಜಲಾಶಯದಿಂದಾಗಿ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೊಳಪಡುವ 2.61ಲಕ್ಷ ಎಕರೆ ಭೂಮಿ ನೀರಾವರಿ ಕ್ಷೇತ್ರವಾಗಿದೆ. ಇದರಿಂದಾಗಿ ಅಸಂಖ್ಯಾತ ರೈತರ ಬದುಕು ಹಸನಾಗಿದೆ ಎಂದರು.
ಸರ್ಕಾರದ ಹಲವು ಯೋಜನೆಗಳಲ್ಲಿ ಲಾಭ ಪಡೆದುಕೊಳ್ಳುವ ರೈತರೂ ಕೂಡ ಸರ್ಕಾರದ ಪರ ನಿಲುವು ತಾಳಬೇಕು. ಸರ್ಕಾರದ ಯೋಜನೆಗಳಿಗೆ ಸಹಕಾರ ನೀಡಬೇಕು. ಸರ್ಕಾರವು ನೀರಾವರಿ ಯೋಜನೆಗಳಿಗಾಗಿ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಅಂತೆಯೇ ರೈತರು ತಮ್ಮ ಜಮೀನಿಗೆ ವಾರ್ಷಿಕ ಕರ ಪಾವತಿಸಬೇಕು. ಇದು ನದಿ-ನಾಲೆಗಳ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆರೆ ತುಂಬುವ ಮಹತ್ವದ 19 ಯೋಜನೆಗಳಿಗೆ 4900 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಈಗಾಗಲೇ 267 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ಈ ಯೋಜನೆಗಳಿಗಾಗಿ 680ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದರು.
ಭದ್ರಾವನ ನಿರ್ಮಾಣ :
ಕೆ.ಆರ್.ಎಸ್.ಮಾದರಿಯಲ್ಲಿ ಭದ್ರಾವನ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲು ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದಕ್ಕಾಗಿ ೨೦ಲಕ್ಷ ರೂ.ಗಳನ್ನು ಸರ್ಕಾರದಿಂದ ಬಿಡುಗಡೆ ಮಾಡಲಾಗುವುದು. ಉಳಿದಂತೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮಂಜೂರಾತಿ ನೀಡಲಾಗುವುದು ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ ಈವರೆಗೆ 4900 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಈ ಯೋಜನೆಯನ್ನು ರಾಷ್ಟೀಯ ಯೋಜನೆಯಾಗಿ ಮಾರ್ಪಡಿಸಲು ಕೇಂದ್ರ ತಾತ್ವಿಕ ಒಪ್ಪಿಗೆ ನೀಡಿದೆ. ರಾಜ್ಯದ ಹಲವು ನೀರಾವರಿ ಯೋಜನೆಗಳಿಗೆ ಇನ್ನೂ ಹೆಚ್ಚಿನ ಅನುದಾನದ ಅಗತ್ಯವಿದ್ದು, ಆರ್ಥಿಕ ಲಭ್ಯತೆಯ ಆಧಾರದ ಮೇಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದ ಅವರು, ಭದ್ರಾ ಜಲಾಶಯಕ್ಕೆ ಹೊಂದಿಕೊಂಡಂತೆ 2ಕೋಟಿ ರೂ.ಗಳ ವೆಚ್ಚದಲ್ಲಿ ವಸತಿಗೃಹವನ್ನು ನಿರ್ಮಿಸಲು ಮಂಜೂರಾತಿ ನೀಡಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಮಾತನಾಡಿ, ನೆರೆಯ ಜಿಲ್ಲೆಗಳ ಜನರ ಜೀವನಾಡಿಯಾಗಿರುವ ಭದ್ರಾ ಜಲಾಶಯವು ಕೃಷಿ ಚಟುವಟಿಕೆ ಮತ್ತು ದಾಹ ಇಂಗಿಸುವಲ್ಲಿ ಸಹಕಾರಿಯಾಗಿದೆ. ಭದ್ರಾ ಜಲಾಶಯದಿಂದ ನೀರನ್ನು ಇನ್ನು ಹೆಚ್ಚಿನ ಜಿಲ್ಲೆಗಳಿಗೆ ನೀರನ್ನು ಹರಿಸುವ ಯೋಜನೆಗಳನ್ನು ಕೈಗೊಂಡಲ್ಲಿ ಈಗಿರುವ ಜಿಲ್ಲೆಗಳ ಕೃಷಿಕರು ಹಾಗೂ ಸಾರ್ವಜನಿಕರಿಗೆ ನೀರಿನ ಅಡಚಣೆಯಾಗದಂತೆ ತುಂಗಾ ಜಲಾಶಯದಿಂದ ನೀರನ್ನು ಭದ್ರಾ ಜಲಾಶಯಕ್ಕೆ ತಲುಪಿಸಿ, ಅಲ್ಲಿಂದ ಭದ್ರಾ ಮೇಲ್ದಂಡೆ ಯೋಜನೆಗೆ ನೀರನ್ನು ಸರಬರಾಜು ಮಾಡುವಂತೆ ಅವರು ನೀರಾವರಿ ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ.ರಾಘವೇಂದ್ರ ಅವರು ಮಾತನಾಡಿ, ಸುಮಾರು 2.50ಲಕ್ಷ ಎಕರೆ ಭೂಮಿಗೆ ನೀರುಣಿಸುವ ಹಾಗೂ ಕುಡಿಯುವ ನೀರನ್ನು ಭದ್ರಾ ಜಲಾಶಯ ಪೂರೈಸುತ್ತಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ನದಿ ಮತ್ತು ಪ್ರಕೃತಿಗಳಿಗೆ ಪೂಜ್ಯಸ್ಥಾನ ನೀಡಲಾಗಿದೆ. ಕಾಡಾ ಅಧ್ಯಕ್ಷರ ಅವಿರತ ಪ್ರಯತ್ನದಿಂದಾಗಿ ಅಚ್ಚುಕಟ್ಟು ಪ್ರದೇಶದ ಕೊನೆಯ ರೈತರಿಗೂ ನೀರನ್ನು ಒದಗಿಸುವ ಪ್ರಯತ್ನ ಫಲಕಾರಿಯಾಗಿದೆ ಎಂದರು.
ಸಭೆಯಲ್ಲಿ ಸಂಸದ ಜಿ.ಎಂ.ಸಿದ್ಧೇಶ್, ರವೀಂದ್ರನಾಥ್, ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ಜಗಳೂರು ಶಾಸಕ ರಾಮಚಂದ್ರ, ಹೊನ್ನಾಳಿ ಶಾಸಕ ರೇಣುಕಾಚಾರ್ಯ, ಕೆ.ಬಿ.ಅಶೋಕನಾಯ್ಕ, ರುದ್ರೇಗೌಡರು, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ಸೇರಿದಂತೆ ಚುನಾಯಿತ ಪ್ರತಿನಿಧಿಗಳು, ನಿಗಮ-ಮಂಡಳಿಗಳ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post