ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳಗಳನ್ನು ಸಂಪರ್ಕಿಸುವ ಹಾಗೂ ಇನ್ನಿತರ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ 27.68 ಕೋಟಿ ರೂ. ಮಂಜೂರು ಮಾಡಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ತಿಳಿಸಿದ್ದಾರೆ.
ತಾಲೂಕು ಸಿದ್ದಮ್ಮಾಜಿ ಹೊಸೂರು ಗ್ರಾಮದಿಂದ ಉಂಬ್ಳೇಬೈಲು ಗ್ರಾಮದವರೆಗೆ ರಸ್ತೆಯ ಮರು ನಿರ್ಮಾಣ ಕಾಮಗಾರಿಗೆ 5.60ಕೋಟಿ ರೂ., ಭದ್ರಾವತಿ ತಾಲೂಕು ಲಕ್ಕಿನಕೊಪ್ಪ ಗೇಟಿನಿಂದ ಲಕ್ಕವಳ್ಳಿ ಡ್ಯಾಂವರೆಗೆ 6.20ಕೋಟಿ ರೂ., ಭದ್ರಾವತಿ ತಾಲೂಕು ಬೊಮ್ಮನಕಟ್ಟೆಯಿಂದ ಬೈಪಾಸ್ವರೆಗೆ, ಭದ್ರಾವತಿ ರೈಲ್ವೆ ಕೆಳಸೇತುವೆಯಿಂದ ಹಳೆ ಸೇತುವೆವರೆಗೆ, ರಾಮನಗರದಿಂದ ಅರಳಿಹಳ್ಳಿಯವರೆಗೆ, ಅರಬಿಳಚಿ ಕ್ಯಾಂಪಿನಿಂದ ಕಲ್ಲಾಪುರದವರೆಗೆ 5.88ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಶಿವಮೊಗ್ಗದಿಂದ ಸೋಮಿನಕೊಪ್ಪ-ಗೆಜ್ಜೇನಹಳ್ಳಿ-ತ್ಯಾಜವಳ್ಳಿ-ಯಡವಾಲ-ಹಿಟ್ಟೂರು ಕ್ರಾಸ್-ನಾರಾಯಣಪುರ ಮೂಲಕ ಸೂರಗೊಂಡನಕೊಪ್ಪ ಕ್ರಾಸ್-ಚಿನ್ನಿಕಟ್ಟೆ ಹತ್ತಿರ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 10ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ರಸ್ತೆಗಳು ಜಿಲ್ಲೆಯ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ರಸ್ತೆಗಳಾಗಿವೆ. ಶಿವಮೊಗ್ಗದಿಂದ ಇತರ ಜಿಲ್ಲಾ ಸಂಚಾರಕ್ಕೆ ಪ್ರಮುಖ ಸಂಪರ್ಕ ರಸ್ತೆಗಳಾಗಿವೆ. ಬಹುದಿನಗಳ ಜನರ ಬೇಡಿಕೆಯಂತೆ ಈ ರಸ್ತೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸನುದಾನ ಒದಗಿಸಿದೆ. ಇದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post