ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ 7ನೇಯ ಶರಣ ಸಾಹಿತ್ಯ ಸಮ್ಮೇಳನವನ್ನು ಮಾ. 24 ಮತ್ತು 25ರಂದು ಕುವೆಂಪು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಬಾರಿ ಸಮ್ಮೇಳನಾಧ್ಯಕ್ಷರನ್ನಾಗಿ ಬೆಕ್ಕಿನ ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರು ಘರಾಜೇಂದ್ರ ಮಹಾಸ್ವಾಮಿಗಳನ್ನು ಆಯ್ಕೆ ಮಾಡಲಾಗಿದ್ದು, ಇಂದು ಪರಿಷತ್‌ನಿಂದ ಅದಿಕೃತವಾಗಿ ಸಮ್ಮೇಳನಕ್ಕೆ ಶ್ರೀಗಳನ್ನು ಆಹ್ವಾನಿಸಲಾಯಿತು.
ನಂತರ ಸುದ್ದಿಗೋಷ್ಟಿಯಲ್ಲಿ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಹೆಚ್.ಎನ್. ಮಹಾರುದ್ರ ಅವರು, ವಚನ ಗಾಯನ, ಉಪನ್ಯಾಸ, ಸಂವಾದ, ವಚನ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಗಳನ್ನು ಸಮ್ಮೇಳನ ಒಳಗೊಂಡಿದೆ ಎಂದರು.
ಮಾ. 24ರ ಬೆಳಿಗ್ಗೆ 6:30ಕ್ಕೆ ವಚನ ಗಾನಯಾನ ಸಾಮೂಹಿಕ ವಚನಾನುಸಂಧಾನವು ಶೃಂಗೇರಿ ನಾಗರಾಜ್ ನಿರ್ದೇಶನದಲ್ಲಿ, ಜಡೆ ಸಂಸ್ಥಾನ ಮಠದ ಡಾ. ಶಿರ ಮಹಾಂತ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವುದು.
ಅಂದು ಬೆಳಿಗ್ಗೆ 8:30ಕ್ಕೆ ಧ್ವಜಾರೋಹಣ. 9 ಗಂಟೆಗೆ ಉಡುತಡಿಯಿಂದ ಆಗಮಿಸುವ ಅಕ್ಕಮಹಾದೇವಿ ಜೋತಿಯನ್ನು ಸ್ವಾಗತಿಸಲಾಗುವುದು. ಬೆಳಿಗ್ಗೆ 9:30ರಿಂದ ಕೆ.ಯುವರಾಜ್‌ರಿಂದ ವಜನ ಗಾಯನ ಇರುವರುದು.
ಉದ್ಘಾಟನೆ: ಅಂದು ಬೆಳಿಗ್ಗೆ 10 ಗಂಟೆಗೆ ಸತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾ ಸ್ವಾಮಿಗಳ ಉಪಸ್ಥಿತಿಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಸಮ್ಮೇಳನಕ್ಕೆ ಚಾಲನೆ ನೀಡುವರು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರುದ್ರೇಗೌಡ ಅಧ್ಯಕ್ಷತೆ ವಹಿಸುವುದಾಗಿ ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ಸಚಿವ ಮಧು ಬಂಗಾರಪ್ಪ, ಶಾಸಕ ಚನ್ನಬಸಪ್ಪ ಸೇರಿದಂತೆ ಜಿಲ್ಲೆಯ ಜನ ಪ್ರತಿನಿದಿಗಳು ಅತಿಥಿಗಳಾಗಿ ಭಾಗವಹಿಸುವರು.
ಅಂದು ಮಧ್ಯಾಹ್ನ 12::30ಕ್ಕೆ ವಚನ- ನ್ಯಾಯ ವಿಷಯ ಕುರಿತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಉಪನ್ಯಾಸ ನೀಡುವರು. 2:15ಕ್ಕೆ ಹಿರಿಯ ಪತ್ರಕರ್ತ ಗೌರಿಶ್ ಅಕ್ಕಿ ಉಪಸ್ಥಿತಿಯಲ್ಲಿ ಮಾಧ್ಯಮ ಕುರಿತು ಸಂವಾದ ಗೋಷ್ಠಿ ನಡೆಯುವುದು.
ಸಂಜೆ 4 ಗಂಟೆಗೆ ರಾಜಕೀಯ ವಿಷಯ ಕುರಿತು ಸಂವಾದ ಗೋಷ್ಠಿ ನಡೆಯಲಿದ್ದು, ಮಾಜಿ ಸಂಸದ ಆಯನೂರು ಮಂಜುನಾಥ್, ಶಾಸಕ ಧನಂಜಯ ಸರ್ಜಿ, ಬಲ್ಕೀಶ್ ಭಾನು, ಮಾಜಿ ಶಾಸಕ ಆರ್.ಕೆ. ಸಿದ್ದರಾಮಣ್ಣ ಭಾಗವಹಿಸುವರು. ಹೆಚ್.ಸಿ. ಯೋಗೀಶ್ ನಿರ್ವಹಣೆ ಮಾಡುವರು.
ಅಂದು ಸಂಜೆ 6 ಗಂಟೆಗೆ ಡಾ. ಶ್ರೀ ಮಲ್ಲಿಕಾರ್ಜುನ ಮರುಘರಾಜೇಂದ್ರ ಸ್ವಾಮಿಗಳ 75ನೇ ವರ್ಷದ ವಿಶೇಷ ಕಾರ್ಯಕ್ರಮ ಅಮೃತ ಜಂಗಮ ನಡೆಯುವುದು. ನಂತರ 7 ಗಂಟೆಗೆ ಸಾಂಸ್ಕೃತಿಕ ಸಂಜೆ, ವಚನ ನೃತ್ಯ ಕಾರ್ಯಕ್ರಮ ನಡೆಯುವುದು.
ಮಾ.25ರ ಬೆಳಿಗ್ಗೆ 6:30ಕ್ಕೆ ವಚನ ಗಾನಯಾನ ಸಾಮೂಹಿಕ ವಚನಾನುಸಂದಾನವು ಟಿ.ಜೆ. ನಾಗರತ್ನ ನಿರ್ದೇಶನದಲ್ಲಿ ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವುದು. 9:30ಕ್ಕೆ ಅಕ್ಕನ ಬಳಗ ಹಾಗೂ ಕದಳಿ ಮಹಿಳಾ ವೇದಿಕೆಯಿಂದ ವಚನ ಗಾಯನ ಇರುವುದು.
ಅಂದು ಬೆಳಿಗ್ಗೆ 10 ಗಂಟೆಗೆ ಶಿಕ್ಷಣ ಸಂವಾದಗೋಷ್ಠಿ, 11:45ಕ್ಕೆ ಆಡಳಿತ ಕುರಿತು ಸಂವಾದಗೋಷ್ಠಿಯು ಜಿಲ್ಲಾದಿಕಾರಿಗಳ ನೇತೃತ್ವದಲ್ಲಿ ನಡೆಯುವುದು. ಮಧ್ಯಾಹ್ನ 2:15ಕ್ಕೆ ಧರ್ಮ ಕುರಿತು ಡಾ. ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ ಸಂವಾದ ನಡೆಯುವುದು.
ಸಮಾರೋಪ: ಸಂಜೆ 4 ಗಂಟೆಗೆ ನಿಡಸೋಸಿಯ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯುವುದು. ಡಾ. ಎಂ.ಎಸ್. ಆಶಾದೇವಿ ಸಮಾರೋಪ ಭಾಷಣ ಮಾಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಪಿ. ರುದ್ರೇಶ್, ಜಿ. ಬೆನಕಪ್ಪ, ಲವಕುಮಾರ್, ತಿಮ್ಮಪ್ಪ, ಗಾಯತ್ರಿ ಪಾಟೀಲ್, ಮಮತಾ ಮತ್ತಿತರರಿದ್ದರು.


















