ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಫೆ.24ರಿಂದ 28ರವರೆಗೆ ನಡೆಯಲಿರುವ ಶ್ರೀ ಕೋಟೆ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದ #Shri Kote Marikamba Temple ಮೊದಲ ದಿನದ ಪ್ರಥಮ ಪೂಜಾ ಕೈಂಕರ್ಯವನ್ನು ಗಾಂಧಿ ಬಜಾರಿನ ಶ್ರೀ ಹರಕೆರೆ ಕಾಳಿಕಾಂಬ ದೇವಸ್ಥಾನದ ಸಮಿತಿ ವತಿಯಿಂದ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಎಂ.ಶ್ರೀನಿವಾಸ ಮೂರ್ತಿ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇವಿಯ ಜಾತ್ರೆಯ ಮೊದಲ ದಿನದ ಪೂಜಾ ಕೈಂಕರ್ಯವನ್ನು ನೂರಾರು ವರ್ಷಗಳಿಂದ ವಿಶ್ವ ಬ್ರಾಹ್ಮಣ, ವಿಶ್ವಕರ್ಮ ಸಮಾಜದ ವತಿಯಿಂದ ಸಾಂಪ್ರದಾಯದಂತೆ ಅನುಚಿತವಾಗಿ ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯೂ ಸಹ ಫೆ.24ರ ಮಂಗಳವಾರ ಬೆಳಗಿನ ಜಾವ 3ಗಂಟೆಯಿಂದ ಗಾಂಧಿ ಬಜಾರಿನಲ್ಲಿರುವ ಹರಕೆರೆ ಕಾಳಿಕಾಂಬ ದೇವಿ ಮಂದಿರದ ತವರು ಮನೆಯಲ್ಲಿ ಮೊದಲನೇ ದಿವಸದ ಪೂಜಾ ವಿಧಿವಿಧಾನಗಳು ಗುರುಮೂರ್ತಿ ಆಚಾರ್ ಮತ್ತು ತಂಡದವರಿಂದ ನಡೆಯಲಿದೆ ಎಂದರು.
ಬ್ರಾಹ್ಮೀ ಮುಹೂರ್ತದಲ್ಲಿ ಮಹಾಗಣಪತಿ ಪ್ರಾರ್ಥನೆ, ಸಂಕಲ್ಪ ಹಾಗೂ ಗಣಪತಿ ಪೂಜೆ ಗಂಗಾಪೂಜೆ-ಸ್ವಸ್ತಿ ಪುಣ್ಯಾವಾಚನ, ರಾಮಣ್ಣಶ್ರೇಷ್ಟಿ ಪಾರ್ಕ್‍ನಲ್ಲಿರುವ ಗಣಪತಿ ದೇವಸ್ಥಾನದಿಂದ ಮೊದಲಿಗೆ ವಿಶ್ವ ಬ್ರಾಹ್ಮಣ ಸಮಾಜದಿಂದ ಶ್ರೀ ಮಾರಿಕಾಂಬ ಅಮ್ಮನವರನ್ನು ಗಂಗಾಪೂಜೆ ಸಲ್ಲಿಸಿ ಕಳಸದಲ್ಲಿ ಆವಾಹನೆ ಮಾಡಿ ಮಂಗಳವಾದ್ಯದೊಂದಿಗೆ ಗಾಂಧಿ ಬಜಾರ್‍ನಲ್ಲಿರುವ ತವರು ಮನೆಗೆ ತರಲಾಗುವುದು ಎಂದರು.
ನಂತರ ಪೂಜಾ ವಿಧಿವಿಧಾನಗಳು ನಡೆಯಲಿದೆ. ಈ ಪೂಜಾ ಕಾರ್ಯದಲ್ಲಿ ವಿಶ್ವ ಬ್ರಾಹ್ಮಣ, ವಿಶ್ವಕರ್ಮ ಸಮಾಜಬಾಂಧವರು ಬೆಳಿಗ್ಗೆ ಪೂಜಾ ಆರಂಭಿಕ ಸಮಯದಲ್ಲೇ ಹಾಜರಾಗಿ ಪೂಜಾ ಕಾರ್ಯ ಯಶಸ್ವಿಗೊಳಿಸುವಂತೆ ಮನವಿ ಮಾಡಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಕೆ.ಮೌನೇಶ್ವರಾಚಾರ್, ಎ.ಎಸ್.ಲಕ್ಷ್ಮೀನಾರಾಯಣ, ಎಸ್.ಜಗನ್ನಾಥ್, ಹೆಚ್.ಬಿ.ರಾಘವೇಂದ್ರಾಚಾರ್, ನಾಗರಾಜಪ್ಪ ಅರ್ಕಾಚಾರ್, ಡಿ.ಸಿ.ಹನುಮಂತಾಚಾರ್, ಎ.ಅನಂತಾಚಾರ್, ಎಸ್.ಪ್ರಕಾಶ್, ಜಿ.ಎಸ್. ಮಾಲತೇಶ್, ಬಿ.ಎಸ್.ದೇವರಾಜ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















