ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಕಲ್ಪಿಸುವ ಮೂಲಕ ಸಿದ್ಧರಾಮಯ್ಯ #Siddaramaiah ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿ ಕೊಟ್ಟ ಮಾತನ್ನು ಈಡೇರಿಸದೇ ಹೋದರೆ ರಾಜ್ಯಾದ್ಯಂತ ಮಾದಿಗ ಸಮುದಾಯದ ಉಗ್ರಹೋರಾಟ ಎದುರಿಸಬೇಕಾಗುತ್ತದೆ ಎಂದು ಮಾದಾರ ಮಹಾಸಭಾ ಜಿಲ್ಲಾ ಸಮಿತಿ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಶಿವಾಜಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ತಲತಲಾಂತರಗಳಿಂದ ಶೋಷಣೆಗೊಳಗಾಗುತ್ತಾ ಅವಕಾಶ ವಂಚಿತಗೊಂಡಿರುವ ಮಾದಿಗ ಸಮುದಾಯ ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ #internal reservation ಕಲ್ಪಿಸುವಂತೆ ಕಳೆದ 35ವರ್ಷಗಳಿಂದ ನಡೆಸಿದ ಹೋರಾಟಕ್ಕೆ ಸುಪ್ರೀಂಕೋರ್ಟ್ #Supreme Court ಮನ್ನಣೆ ನೀಡಿದೆ. ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಿಗಳಿಗೆ ಇದೆ ಎಂದು ಆಗಸ್ಟ್ 1ರ 2024ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪುನೀಡಿ ಒಂದೂವರೆ ವರ್ಷಗಳೇ ಕಳೆದಿದ್ದರೂ ರಾಜ್ಯದಲ್ಲಿ ಒಳಮೀಸಲಾತಿ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಮೀನಾಮೇಷಾ ಎಣಿಸುತ್ತಿದೆ. ಜಸ್ಟೀಸ್ ನಾಗಮೋಹನ್‌ದಾಸ್ ವರದಿಯನ್ನು ಮಾರ್ಪಾಡು ಮಾಡಿಯೂ ಶೇ.17 ಮೀಸಲಾತಿ ಏರಿಕೆಯ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದು ಹಾಲಿ ಪರಿಶಿಷ್ಟ ಜಾತಿಗಳಿಗಿರುವ ಶೇ.15ರಷ್ಟು ಮೀಸಲಾತಿಯಲ್ಲಿ ಒಳಮೀಸಲಾತಿ ಅಳವಡಿಸಲು ಯಾವುದೇ ಕಾನೂನು ಅಡೆತಡೆಗಳಿಲ್ಲ.
ಆದರೆ ರಾಜ್ಯಸರ್ಕಾರ ಒಳಮೀಸಲಾತಿ ಇಲ್ಲದೆ 56,342 ಸರ್ಕಾರಿ ಹುದ್ದೆಗಳನ್ನು ಭರ್ತಿಮಾಡಲು ಮುಂದಾಗಿದ್ದು, ಅಸ್ಪೃಶ್ಯ ಜಾತಿಗಳ ಪಾಲಿಗೆ ಸಾಮಾಜಿಕ ನ್ಯಾಯದ ಮಹಾ ವಂಚನೆಯಾಗಲಿದೆ, ಸರ್ಕಾರದ ಈ ಧೋರಣೆಯನ್ನು ಮಾದಿಗ ಮಹಾಸಭಾ ತೀವ್ರವಾಗಿ ಖಂಡಿಸುತ್ತಿದ್ದು, ಅಹಿಂದ ನಾಯಕ ಸಿದ್ದರಾಮಯ್ಯನವರು ನಮಗೆ ಒಳ ಮೀಸಲಾತಿ ಕೊಡದೆ ಹುದ್ದೆ ಭರ್ತಿಮಾಡಿದರೆ ಮಾ.16ರಂದು ಬೆಳಿಗ್ಗೆ 10:30ಕ್ಕೆ ಮಹಾನಗರ ಪಾಲಿಕೆಯ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾರಹಾಕಿ ಅಲ್ಲಿಂದ ಡಿಸಿ ಕಛೇರಿಯವರೆಗೆ ಸಮುದಾಯದ ಸಾವಿರಾರು ಜನರೊಂದಿಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾ ತೇಜಸ್ ಆರ್., ಎಂ. ಶಿವಲಿಂಗಪ್ಪ, ಅಣ್ಣಪ್ಪ, ಪ್ರಭು ಹೆಚ್.ಎನ್., ಅಣ್ಣಪ್ಪ ಪಿ., ಅಣ್ಣಪ್ಪ ಕೆ., ನೀಲಪ್ಪ, ಮೈಲಾರಪ್ಪ, ಗಾಜನೂರು ನಾಗರಾಜ್, ಸುರೇಶ್, ಮಂಜುನಾಥ್, ರಮೇಶ್ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















