ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿವಮೊಗ್ಗ ವೈದ್ಯಕೀಯ ಸಂಸ್ಥೆಯಲ್ಲಿ ಹಾಸಿಗೆ ವ್ಯವಸ್ಥೆಯ ಉನ್ನತೀಕರಣ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ತಿಳಿಸಿದರು.
ಶಿವಮೊಗ್ಗ ವೈದ್ಯಕೀಯ ಸಂಸ್ಥೆಯಲ್ಲಿ ಜನಪ್ರತಿನಿಧಿಗಳ ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕೋವಿಡ್ ನಿರ್ವಹಣೆಗೆ ಕೈಗೊಳ್ಳಲಾಗಿರುವ ಕ್ರಮಗಳ ಪರಿಶೀಲನೆ ನಡೆಸಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರಸ್ತುತ ಕೋವಿಡ್ ಚಿಕಿತ್ಸೆಗೆ 650 ಹಾಸಿಗೆ ವ್ಯವಸ್ಥೆಯಿದ್ದು, ಅದನ್ನು ಹಂತ ಹಂತವಾಗಿ 1400ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ 70 ವೆಂಟಿಲೇಟರ್‍ಗಳಿದ್ದು, ಇನ್ನೂ 23 ವೆಂಟಿಲೇಟರ್‍ಗಳು ವಾರದ ಒಳಗಾಗಿ ಲಭಿಸಲಿದೆ. ಇದರ ನಿರ್ವಹಣೆಗೆ ಹೆಚ್ಚುವರಿಯಾಗಿ ಅಗತ್ಯವಿರುವ 10 ಫಿಜಿಶಿಯನ್‍ಗಳು ಮತ್ತು 8 ಅರವಳಿಕೆ ತಜ್ಞರನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು. ನರ್ಸ್‍ಗಳ ಹಾಗೂ ಡಿ ಗ್ರೂಪ್ ನೌಕರರ ಅಂಕಿ ಅಂಶಗಳ ಕುರಿತು ಸ್ಪಷ್ಟ ಮಾಹಿತಿಯನ್ನು ಒದಗಿಸಬೇಕು. ಪ್ರಸ್ತುತ ಮೆಗ್ಗಾನ್ ಆವರಣದಲ್ಲಿ ವಿವಿಧ ಭಾಗಗಳಲ್ಲಿ ವೆಂಟಿಲೇಟರ್ ವ್ಯವಸ್ಥೆಯಿದ್ದು, ಅದನ್ನು ಒಂದೇ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಅವರು ಸೂಚನೆ ನೀಡಿದರು.
ಶಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಅವರು ಸಂಸ್ಥೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಮಾಹಿತಿಯನ್ನು ಒದಗಿಸಿದರು. ಮೆಗ್ಗಾನ್‍ನಲ್ಲಿ ಒಟ್ಟು 1443 ಹಾಸಿಗೆ ವ್ಯವಸ್ಥೆಯಿದ್ದು, ಇದರಲ್ಲಿ 1095 ಆಕ್ಸಿಜನ್ ಬೆಡ್‍ಗಳು ಹಾಗೂ 202 ಐಸಿಯು ಬೆಡ್‍ಗಳಿವೆ. 16 ಫಿಜಿಷಿಯನ್, 15 ಅರವಳಿಕೆ ತಜ್ಞರು, 4 ಪಲ್ಮನಾಲಿಜಿಸ್ಟ್, 4 ರೇಡಿಯಾಲಜಿಸ್ಟ್, 15 ಕೋವಿಡ್ ಡ್ಯೂಟಿ ಡಾಕ್ಟರ್ ಮತ್ತು 11 ಗೃಹ ವೈದ್ಯರಿದ್ದಾರೆ. 334 ನರ್ಸಿಂಗ್ ಅಧಿಕಾರಿಗಳಿದ್ದಾರೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಅವರು ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ ನಿಗದಿಪಡಿಸಲಾಗಿರುವ ಸರ್ಕಾರಿ ಕೋಟಾದ ಹಾಸಿಗೆ ಮತ್ತು ವೆಂಟಿಲೇಟರ್‍ಗಳ ಸೌಲಭ್ಯ ಪಡೆದುಕೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳ 10 ವೆಂಟಿಲೇಟರ್‍ಗಳನ್ನು ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ ಒದಗಿಸಲಾಗಿದೆ. ಲಸಿಕೆ ನೀಡುವ ಕಾರ್ಯಕ್ರಮ ನಿಗದಿತ ಮಾರ್ಗಸೂಚಿಯಂತೆ ಕೈಗೊಳ್ಳಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀಪ್ರಸಾದ್, ದತ್ತಾತ್ರೇಯ, ಡಿ.ಎಸ್.ಅರುಣ್, ಶಿಮ್ಸ್ ಆಡಳಿತ ಮಂಡಳಿ ಸದಸ್ಯರಾದ ದಿವಾಕರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post