ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಿನ್ನಾಭರಣ ಪಾಲಿಶ್ ಮಾಡಿ ಕೊಡುವ ನೆಪದಲ್ಲಿ ಲಕ್ಷಾಂತರ ರೂ. ಮೌಲ್ಯದ ಒಡವೆ ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಘಟನೆ ಹಿನ್ನೆಲೆ
ಶಿವಮೊಗ್ಗದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಫೆ.20ರಂದು ಬೆಳಗ್ಗೆ 11.30ರ ಸುಮಾರಿಗೆ ಬೈಕಿನಲ್ಲಿ ಬಂದ ಇಬ್ಬರು ಯುವಕರು, ತಾವು ಕಂಪನಿಯಿಂದ ಬಂದಿರುವುದಾಗಿ ತಿಳಿಸಿ, ಬಿಳಿ ಬಣ್ಣದ ಪೌಡರ್ ಹೊರ ತೆಗೆದು ಇದರಿಂದ ಆಭರಣ ಫಳಫಳ ಹೊಳೆಯುವಂತೆ ಮಾಡುತ್ತೇವೆ ಎಂದು ಮಹಿಳೆ ಕೈಯಲ್ಲಿದ್ದ ಬಳೆಗೆ ಉಜ್ಜಿ, ಹೊಳಪು ಬರುವಂತೆ ಮಾಡಿ ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ. ಬಳಿಕ ನಿಮ್ಮ ಕೈಯಲ್ಲಿರುವ ಬಳೆ, ಉಂಗುರಗಳನ್ನು ಬಿಚ್ಚಿ ಒಂದು ಕುಕ್ಕರ್ ನಲ್ಲಿ ಹಾಕಿ ಕೊಡಿ ಎಂದು ಯುವಕರು ತಿಳಿಸಿದ್ದಾರೆ. ಅವರು ಹೇಳಿದಂತೆಯೇ ಮಹಿಳೆ ಮಾಡಿದ್ದಾರೆ. ಕುಕ್ಕರ್ ನಲ್ಲಿ ಚಿನ್ನಾಭರಣ ಇಟ್ಟು, ಯುವಕರು ಬಿಳಿ ಮತ್ತು ಹಳದಿ ಪೌಡರ್ ಸುರಿದಿದ್ದಾರೆ. ಸ್ವಲ್ಪ ನೀರು ಬೇಕು ಎಂದು ಕೇಳಿದ್ದರಿಂದ ಮಹಿಳೆ ಮನೆಯೊಳಗೆ ಹೋಗಿ ನೀರು ತಂದಿದ್ದಾರೆ. ಯುವಕರು ನೀರನ್ನು ಕುಕ್ಕರ್‌ಗೆ ಹಾಕಿ ಮಹಿಳೆಯ ಕೈಗಿಟ್ಟಿದ್ದಾರೆ. ಕುಕ್ಕರ್ ಅನ್ನು ಅರ್ಧ ಗಂಟೆ ಒಲೆ ಮೇಲಿಟ್ಟು ಕುದಿಸಿ ತೆಗೆಯಿರಿ. ಅದರೊಳಗೆ ಇರುವ ಚಿನ್ನಾಭರಣ ಹೊಳೆಯುತ್ತದೆ ಎಂದು ಯುವಕರು ತಿಳಿಸಿ ಹೋಗಿದ್ದಾರೆ. ಅದರಂತೆ ಮಹಿಳೆ ಮಾಡಿದ್ದಾರೆ. ಅರ್ಧ ಗಂಟೆಯ ಬಳಿಕ ಕುಕ್ಕರ್ ತೆಗೆದಾಗ ಬಳೆ, ಉಂಗುರಗಳು ಇರಲಿಲ್ಲ. ಆತಂಕಕ್ಕೀಡಾಗಿ ಮಹಿಳೆ ತಮ್ಮ ಕುಟುಂಬದವರಿಗೆ ವಿಚಾರ ತಿಳಿಸಿ, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Also read: ಭದ್ರಾವತಿ: ರೈಲಿಗೆ ಸಿಲುಕಿ ವ್ಯಕ್ತಿ ಸಾವು


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















