ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ಸುಳ್ಳು ಮಾಹಿತಿಯನ್ನು ನೀಡುತ್ತ ಜನರನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಕೆ.ಬಿ. ಪ್ರಸನ್ನ ಕುಮಾರ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್. ಈಶ್ವರಪ್ಪನವರ ನೇತೃತ್ವದಲ್ಲಿ ಸಮೀಪದ ಹೊಸೂಡಿ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಸಭೆ ನಡೆದಿದ್ದು, ಸಭೆಯಲ್ಲಿ ಪಿಡಿಒ ಅವರು ಕೊರೋನಾ ನಿಯಂತ್ರಣಕ್ಕೆ ಮನೆಮನೆಗೆ ತೆರಳಿ ಸನಿಟೈಸೇಶನ್ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ. ಆದರೆ ಸ್ಥಳದಲ್ಲಿದ್ದ ಗ್ರಾಮದ ಮಹಿಳೆ ಮೀನಮ್ಮ ಎಂಬುವವರು ಅಧಿಕಾರಿ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಸಚಿವರ ಎದುರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಸಚಿವರ ಎದುರೇ ಪಿಡಿಒ ರನ್ನು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಿಳೆಯನ್ನು ಸಚಿವರು ಸಮಾಧಾನ ಪಡಿಸಲು ಪ್ರಯತ್ನಿಸಿದ್ದು, ಸಚಿವರ ಮಾತಿಗೆ ಬಗ್ಗದ ಮಹಿಳೆಯನ್ನು ಪೊಲೀಸರ ನೆರವಿನಿಂದ ಸಭೆಯಿಂದಲೇ ಹೊರಹಾಕುವ ಮೂಲಕ ನ್ಯಾಯ ಕೇಳುವುದೇ ತಪ್ಪು ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಕೊರೋನಾ ಸಂಕಷ್ಟದಿಂದಾಗಿ ಜನತೆ ನೆಮ್ಮದಿ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ, ಸಚಿವರುಗಳು ಜನರ ಪರವಾಗಿ ಕೆಲಸ ಮಾಡಬೇಕು. ಅಲ್ಲದೆ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಿಳಿಸಿ ಹೇಳಬೇಕು. ಅದನ್ನು ಬಿಟ್ಟು ಮತ ನೀಡಿದ ಜನರನ್ನೇ ತಿರಸ್ಕರಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಕೂಡ ಸಚಿವರಾದಂತಹ ಕೆ.ಎಸ್. ಈಶ್ವರಪ್ಪ ಅವರು ಕಾರಟಗಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸುಳ್ಳಿನ ಪಾಠ ಬೋಧನೆ ಮಾಡಿದ್ದರು. ರಾಜಕಾರಣಿಯಾದವರು ಜನರ ಬಳಿ ಮಾತನಾಡುವಾಗ ತಮಗೆ ಏನು ಗೊತ್ತಿಲ್ಲ ಅಂದುಕೊಳ್ಳಬಾರದು. ಒಂದು ವೇಳೆ ವಿಷಯ ಗೊತ್ತಿಲ್ಲದಿದ್ದರೂ ಸುಳ್ಳುಪಳ್ಳು ಹೇಳಿ ಅಲ್ಲಿಂದ ಬಂದು ಬಿಡಬೇಕು ಎಂದು ಕಾರ್ಯಕರ್ತರಿಗೆ ಸುಳ್ಳಿನ ಪಾಠ ಬೋಧನೆ ಮಾಡುವುದರ ಮೂಲಕ ಬಿಜೆಪಿ ಸಂಸ್ಕೃತಿ ಏನೆಂಬುದನ್ನು ಸಾರಿ ಹೇಳಿದ್ದಾರೆ ಎಂದು ಕೆ.ಬಿ. ಪ್ರಸನ್ನ ಕುಮಾರ್ ಲೇವಡಿ ಮಾಡಿದ್ದಾರೆ.
ಬಿಜೆಪಿ ಹಾಗೂ ಸಚಿವರುಗಳು ಇಂತಹ ದುಸ್ಥಿತಿಗೆ ಇಳಿಯಬಾರದಿತ್ತು. ಕಾರಟಗಿಯಲ್ಲಿ ಸಚಿವರೇ ಸುಳ್ಳಿನ ಪಾಠ ಬೋಧನೆ ಮಾಡಿದ್ದರೆ, ಹೊಸೂಡಿ ಗ್ರಾಮ ಪಂಚಾಯತ್ ಸಭೆಯಲ್ಲಿ ಅಧಿಕಾರಿಗಳಿಂದಲೇ ಸುಳ್ಳು ಹೇಳಿಸಿದ್ದಾರೆ. ಆ ಮೂಲಕ ಸುಳ್ಳಿನ ಸರದಾರ ತಾವು ಎಂಬುದನ್ನು ಕೆ.ಎಸ್. ಈಶ್ವರಪ್ಪ ರವರು ಸಾಬೀತುಪಡಿಸಿದ್ದಾರೆ ಎಂದು ಕೆಬಿ ಪ್ರಸನ್ನ ಕುಮಾರ್ ಲೇವಡಿ ಮಾಡಿದ್ದಾರೆ.
ಸಚಿವರಾದಂತಹ ಕೆ.ಎಸ್. ಈಶ್ವರಪ್ಪ ರವರೇ ಸೋಲಿನ ಪಾಠ ಬೋಧನೆ ಮಾಡುತ್ತಿರುವುದರಿಂದ ಜನರು ಅವರಿಂದ ಹೆಚ್ಚಿನ ನಿರೀಕ್ಷೆ ಮಾಡಲಾಗದು. ಹೀಗಾಗಿ ಜಿಲ್ಲಾಧಿಕಾರಿಗಳು ತಮ್ಮ ಕೈಕೆಳಗಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಸರಿಯಾಗಿ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಬೇಕು. ಸುಳ್ಳು ಮಾಹಿತಿ ನೀಡುವ ಸರ್ಕಾರಿ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೆ.ಬಿ. ಪ್ರಸನ್ನ ಕುಮಾರ್ ಒತ್ತಾಯಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post