ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ದ್ರವ ರೂಪದ ಬಂಗಾರದಷ್ಟು ಮಹತ್ವದ್ದಾಗಿದ್ದು, ಮಗುವಿನ ಸಮಗ್ರ ಆರೋಗ್ಯಾಭಿವೃದ್ಧಿಗೆ ಇದೇ ಮೂಲಾಧಾರ ಎಂದು ಖ್ಯಾತ ಮಕ್ಕಳ ಹಿರಿಯ ವೈದ್ಯೆ ಡಾ. ಆಶಾ ಬೆನಕಪ್ಪ Dr. Asha Benakappa ಕರೆ ನೀಡಿದರು.
ಸುಬ್ಬಯ್ಯ ವೈದ್ಯಕೀಯ ಕಾಲೇಜಿನ Subbaiah Medical College ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಹೆರಿಗೆ ಆದ ಒಂದು ಗಂಟೆಯ ಒಳಗಾಗಿ ಶಿಶುವಿಗೆ ತಾಯಿ ಎದೆ ಹಾಲು Breast Milk ಕುಡಿಸಲು ಆರಂಭಿಸಬೇಕು. ತಾಯಿಯ ಎದೆಹಾಲು ಎನ್ನುವುದು ಶಿಶುವಿಗೆ ದೇವರು ನೀಡಿರುವ ಒಂದು ವರ ಎನ್ನುವುದನ್ನು ಪ್ರತಿ ಪೋಷಕರೂ ಅರಿಯಬೇಕು ಎಂದರು.
ಸಾಮಾನ್ಯವಾಗಿ ಗಂಡು ಮಗು ಜನಿಸಿದರೆ, ಹೆಣ್ಣು ಮಗು ಜನಿಸಿದರೆ ಹಾಗೂ ಅವಳಿ ಮಕ್ಕಳು ಜನಿಸಿದರೆ ತಾಯಿಯ ಎದೆಯಲ್ಲಿ ಉತ್ಪಾದನೆಯಾಗುವ ಹಾಲಿನ ವೈಶಿಷ್ಠ್ಯ ಬೇರೆಯದೇ ಆಗಿರುತ್ತದೆ. ಜನಿಸುವ ಶಿಶುವಿನ ಲಿಂಗಕ್ಕೆ ತಕ್ಕಂತೆ ಹಾಲು ಉತ್ಪಾದನೆಯಾಗುವುದು ಪ್ರಕೃತಿ ನೀಡಿರುವ ವರ. ಮಾತ್ರವಲ್ಲ ಇದೊಂದು ಅದ್ಬುತ ರಹಸ್ಯವಾಗಿದೆ. ಇದು ವಿಜ್ಞಾನಕ್ಕೆ ಮೀರಿದ ರೀತಿಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ದೇಹದ ರಚನೆಯಾಗಿದೆ ಎಂದರು.
ಮಗುವಿನ ಬಾಯಿ ತಾಯಿಯ ನಿಪ್ಪಲ್’ಗೆ ಸ್ಪರ್ಶವಾದಾಗ ದೇಹದಲ್ಲಿ ಆಕ್ಸಿಟೋಸಿನ್ ಉತ್ಪಾದನೆಯಾಗುತ್ತದೆ. ಬಹಳಷ್ಟು ಮಂದಿ ಮಗುವಿನ ಕ್ಯಾಪ್ ಹಾಕುತ್ತಾರೆ. ಆದರೆ, ಅದನ್ನೆಲ್ಲಾ ಹಾಕಬಾರದು. ತಾಯಿ ಹಾಗೂ ಶಿಶುವಿನ ಚರ್ಮ ಸ್ಫರ್ಶದಿಂದ ಬಾಂಧವ್ಯ ಬೆಳೆದು, ಉತ್ತಮ ಆರೋಗ್ಯಕ್ಕೆ ಪೂರಕವಾಗುತ್ತದೆ. ಮೊದಲ ದಿನ 5 ಎಂಎಲ್, ಎರಡನೆಯ ದಿನ 10 ಎಂಎಲ್’ನಂತೆ ಐದನೆಯ ದಿನಕ್ಕೆ 55 ಎಂಎಲ್ ಹಾಲನ್ನು ಕುಡಿಸಬೇಕು ಎಂದರು.
Also read: ಡಿ.24ರಂದು ಭದ್ರಾವತಿ ಪೇಪರ್ ಟೌನ್ ಠಾಣೆಯಲ್ಲಿ ರಕ್ತದಾನ ಶಿಬಿರ
ಶಿಶುವಿಗೆ ಹಾಲುಣಿಸುವುದರಿಂದ ತಾಯಿಗೆ ಹಲವಾರು ಪ್ರಯೋಜನಗಳಿವೆ. ತಾಯಿಗೆ ಹೆರಿಗೆಯ ನಂತರ ರಕ್ತಸ್ರಾವ ಮತ್ತು ರಕ್ತಹೀನತೆಯ ಅಪಾಯ ಕಡಿಮೆಯಾಗುತ್ತದೆ. ಸ್ತನ್ಯಪಾನವು ಗರ್ಭಧಾರಣೆಯ ಪೂರ್ವ ದೇಹದ ತೂಕವನ್ನು ಮೊದಲೇ ಮರಳಿ ಪಡೆಯಲು ಸಹಾಯ ಮಾಡುತ್ತದೆ. ಸ್ತನಗಳ ಆಕಾರಕ್ಕೆ ಸಂಬಂಧಿಸಿದಂತೆ, ತಾಯಿ ಎದೆಹಾಲು ಅಥವಾ ಬಾಟಲ್ ಫೀಡ್ ತನ್ನ ಮಗುವಿಗೆ ಯಾವುದೇ ವ್ಯತ್ಯಾಸವಿಲ್ಲ ಎಂದರು.
ತಾಯಿಯಲ್ಲಿ ಸ್ತನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಮತ್ತು ಆಸ್ಟಿಯೊಪೊರೋಸಿಸ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದರು.
ಅದೇ ರೀತಿ, ಎದೆಹಾಲು ಕುಡಿಯುವ ಶಿಶುವಿನಲ್ಲಿ ಕಿವಿಯ ಉರಿಯೂತ ಮಾಧ್ಯಮ, ಗ್ಯಾಸ್ಟ್ರೋಎಂಟರೈಟಿಸ್, ನ್ಯುಮೋನಿಯಾದಂತಹ ಸೋಂಕುಗಳ ಸಂಭವ ಕಡಿಮೆಯಾಗಿದೆ. ಅತಿಸಾರದಿಂದ ಸಾವಿನ ಅಪಾಯವನ್ನು 14 ಪಟ್ಟು ಮತ್ತು ತೀವ್ರವಾದ ಉಸಿರಾಟದ ಸೋಂಕಿನಿಂದ 4 ಪಟ್ಟು ಕಡಿಮೆ ಮಾಡುತ್ತದೆ ಎಂದರು.
ಪ್ರಮುಖವಾಗಿ, ಶಿಶುವಿನ ಎಲ್ಲಾ 5 ವಿಶೇಷ ಇಂದ್ರಿಯಗಳನ್ನು ಅಂದರೆ ಸ್ಪರ್ಶ, ದೃಷ್ಟಿ, ವಾಸನೆ, ಶ್ರವಣ ಮತ್ತು ರುಚಿಯನ್ನು ಉತ್ತೇಜಿಸುತ್ತದೆ. ಶಿಶುಗಳಲ್ಲಿ ಕ್ಷಯ ಹಲ್ಲು, ಮಧುಮೇಹ ಮೆಲ್ಲಿಟಸ್, ಬೊಜ್ಜು, ಅಧಿಕ ರಕ್ತದೊತ್ತಡ, ಹೃದಯಾಘಾತ ಮತ್ತು ವಯಸ್ಕ ಜೀವನದಲ್ಲಿ ಕೆಲವು ಕ್ಯಾನ್ಸರ್’ಗಳಿಂದ ಬಳಲುತ್ತಿರುವ ಸಾಧ್ಯತೆ ಕಡಿಮೆ ಎಂದರು.
ನವಜಾತ ಶಿಶುವಿಗೆ ಹಾಲುಣಿಸುವ ಸರಿಯಾದ ಕ್ರಮ, ಹಾಲುಣಿಸುವ ವೇಳೆ ಮಗುವನ್ನು ಹಿಡಿದುಕೊಳ್ಳಬೇಕಾದ ರೀತಿ, ಎಷ್ಟು ಸಮಯ ಹಾಲು ಕುಡಿಸಬೇಕು ಎಂಬೆಲ್ಲ ಕುರಿತಾಗಿ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು.
ಕಾರ್ಯಾಗಾರದಲ್ಲಿ ಕಾಲೇಜಿನ ವೈದ್ಯಕೀಯ ನಿರ್ದೇಶಕರಾದ ಡಾ. ನಾಗೇಂದ್ರ, ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಲತಾ ನಾಗೇಂದ್ರ, ಎಂಎಸ್ ಡಾ.ವಿನಾಯಕ್, ಮಕ್ಕಳ ಚಿಕಿತ್ಸಾ ವಿಭಾಗದ ಎಚ್’ಒಡಿ ಡಾ.ವಿಕ್ರಂ, ಹಿರಿಯ ಪ್ರಾಧ್ಯಾಪಕರಾದ ಡಾ. ಮಂಜುನಾಥ ಸ್ವಾಮಿ, ಸಿಮ್ಸ್ ಸಹಾಯಕ ಪ್ರಾಧ್ಯಾಪಕರಾದ ಡಾ.ಸುನಿತಾ, ಮಕ್ಕಳ ಚಿಕಿತ್ಸೆ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















