ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಡ ಪ್ರಕರಣಕ್ಕೆ #MUDA Case ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ #CM Siddaramaiah ಅವರ ವಿರುದ್ಧ ತನಿಖೆಗೆ ಆದೇಶ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಕೂಡಲೇ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಭೆ ನಡೆಸಿ ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕರು, ಮಾಜಿ ಶಾಸಕರು, ವಿವಿಧ ನಿಗಮಗಳ ಅಧ್ಯಕ್ಷರು ಇಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ರಾಜಭವನ ಅಕ್ಷರಶಃ ಬಿಜೆಪಿ ಕಚೇರಿಯಾಗಿದೆ. ರಾಜ್ಯಪಾಲರು ಕೇಂದ್ರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ. ಕಾನೂನನ್ನು ಗಾಳಿಗೆ ತೂರಿ ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದು ಪ್ರತಿಭಟನಾನಿರತರು ತಿಳಿಸಿದರು.
Also read: ಜಾನಪದ ನೃತ್ಯ ಸ್ಪರ್ಧೆ: ಡೊಳ್ಳು ಕುಣಿತದಲ್ಲಿ ಜೈನ್ ಪಬ್ಲಿಕ್ ಶಾಲೆಗೆ ಪ್ರಥಮ ಬಹುಮಾನ
ಸಂವಿಧಾನದ ಮೌಲ್ಯಗಳನ್ನೇ ಗಾಳಿಗೆ ತೂರಲಾಗಿದೆ. ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ರಾಜ್ಯಪಾಲರ ಕಚೇರಿಯು ಪಕ್ಷದ ಮಾತನ್ನು ಕೇಳುವುದಕ್ಕಾಗಿ ಇದೆ ಎಂದು ರಾಜ್ಯಪಾಲರ ನಡತೆಯಿಂದ ಗೊತ್ತಾಗಿದೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಿ ಕರ್ನಾಟಕದ ಜನರಿಗೆ ದ್ರೋಹ ಬಗೆಯುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದು ದೂರಿದರು.
ದೇಶದ ರಾಜಕೀಯ ಇತಿಹಾಸದಲ್ಲಿಯೇ ರಾಜ್ಯಪಾಲರು ಪ್ರಾಮಾಣಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬಿಜೆಪಿಯವರ ಕುತಂತ್ರಕ್ಕೆ ತಲೆ ಬಾಗಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಮುಡಾದಲ್ಲಿ ಭ್ರಷ್ಟಾಚಾರ ನಡೆದಿದ್ದು, ಮಂತ್ರಿಗಳು, ಶಾಸಕರು ಹಗರಣದಲ್ಲಿ ಪಾಲ್ಗೊಂಡಿದ್ದಾರೆ. ಅವರು ತಪ್ಪು ಮಾಡಿ ಅದನ್ನು ಈಗ ಮುಖ್ಯಮಂತ್ರಿಗಳಿಗೆ ಕಳಂಕ ತರುವ ಹಿನ್ನಲೆಯಲ್ಲಿ ರಾಜಭವನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ #H D Kumaraswamy ಸೇರಿದಂತೆ ಅನೇಕರ ವಿರುದ್ಧವೂ ತನಿಖೆಗೆ ಆಗ್ರಹಪಡಿಲಾಗಿತ್ತು. ಆದರೆ, ಹಿಂದಿನ ಬಿಜೆಪಿ ಮಂತ್ರಿಗಳ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿಲ್ಲ. ಉದ್ದೇಶ ಪೂರ್ವಕವಾಗಿಯೇ ಈಗ ರಾಜ್ಯಪಾಲರು ಈ ಕೆಲಸ ಮಾಡಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು. ರಾಜಕೀಯ ಸೇಡಿಗಾಗಿ ರಾಜ್ಯಪಾಲರ ಕಚೇರಿ ದುರುಪಯೋಗವಾಗಿದೆ. ಕೇಂದ್ರದ ಹಿತಾಸಕ್ತಿಗಳಿಗೆ ಅದು ಬಲಿಯಾಗಿದೆ. ಸೇಡಿನ ಕಚೇರಿಯಾಗಿದೆ. ಕಾನೂನು ಪ್ರಕ್ರಿಯೆಗಳ ದುರ್ಬಲಗೊಳಿಸುವ ಹುನ್ನಾರ ಇದಾಗಿದೆ. ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆಯಾಗಿದ್ದು, ಉದ್ದೇಶಪೂರಿತ ಪಿತೂರಿಯಾಗಿದೆ ಎಂದು ರಾಷ್ಟ್ರಪತಿಗಳಿಗೆ ನೀಡಿರುವ ಮನವಿಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿಗಳನ್ನು ಪದಚ್ಯುತಗೊಳಿಸುವ ಅಪ್ರಜಾಸತ್ತಾತ್ಮಕ ತೀರ್ಮಾನಗಳು ಬಿಜೆಪಿಯೇತರ ಸರ್ಕಾರಗಳು ಆಡಳಿತದಲ್ಲಿರುವ ರಾಜ್ಯಗಳಲ್ಲಿ ನಡೆಯುತ್ತಿದೆ. ಉತ್ತರಾಖಂಡ್, ಜಾರ್ಖಂಡ್, ದೆಹಲಿ, ಇದೀಗ ಕರ್ನಾಟಕ ರಾಜ್ಯಗಳಲ್ಲಿ ಈ ರೀತಿಯ ಪಿತೂರಿಗಳು ನಡೆಯುತ್ತಿವೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯ ತರುವ ಕೆಲಸವಾಗಿದೆ. ಕೂಡಲೇ ರಾಷ್ಟ್ರಪತಿಗಳು ಮಧ್ಯಪ್ರವೇಶ ಮಾಡಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ತಕ್ಷಣವೇ ವಾಪಸ್ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಲ್ಕೀಶ್ ಬಾನು, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಆರ್.ಎಂ. ಮಂಜುನಾಥ ಗೌಡ, ಆಯನೂರು ಮಂಜುನಾಥ್, ಕಿಮ್ಮನೆ ರತ್ನಾಕರ್, ಹೆಚ್.ಎಸ್. ಸುಂದರೇಶ್, ಕಲಗೋಡು ರತ್ನಾಕರ್, ಎನ್. ರಮೇಶ್, ಶ್ರೀನಿವಾಸ್ ಕರಿಯಣ್ಣ, ಕಲೀಂ ಪಾಶಾ, ಪಲ್ಲವಿ, ಎಂ. ಶ್ರೀಕಾಂತ್, ಅನಿತಾಕುಮಾರಿ, ಎಸ್.ಪಿ. ಶೇಷಾದ್ರಿ, ಇಸ್ಮಾಯಿಲ್ ಖಾನ್, ಇಕ್ಕೇರಿ ರಮೇಶ್, ಜಿ.ಡಿ. ಮಂಜುನಾಥ್, ವೈ.ಹೆಚ್. ನಾಗರಾಜ್. ಎಸ್.ಕೆ. ಮರಿಯಪ್ಪ, ಶರತ್ ಮರಿಯಪ್ಪ, ಮೋಹನ್ ಭದ್ರಾವತಿ, ಸ್ಟೆಲಾ ಮಾರ್ಟಿನ್, ಸುವರ್ಣಾ ನಾಗರಾಜ್, ನಾಜೀಮಾ, ಜಯಂತಿ, ರೇಖಾ ರಂಗನಾಥ್, ಹೆಚ್.ಪಿ. ಗಿರೀಶ್, ಸಿ.ಜಿ. ಮಧುಸೂದನ್, ವಿಜಯ್, ವಿಜಯಲಕ್ಷ್ಮಿ ಪಾಟೀಲ್, ಹೆಚ್.ಎಂ. ಮಧು, ರವಿಕುಮಾರ್, ಗೋಣಿ ಮಾಲತೇಶ್, ನಗರದ ಮಹದೇವಪ್ಪ, ಎಸ್.ಟಿ. ಚಂದ್ರಶೇಖರ್, ಕೆ. ರಂಗನಾಥ್, ಶಿವು ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post