ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ #National Herald Case ಪಕ್ಷದ ರಾಷ್ಟ್ರೀಯ ನಾಯಕರ ಮೇಲೆ ಇಡಿ ಮೇಲೆ ಪ್ರಭಾವ ಬೀರಿ ಅನಗತ್ಯ ಆರೋಪ ಸೃಷ್ಟಿಸಿರುವುದು ಹಾಗೂ ಮನ್ರೇಗಾ ಹೆಸರು ಬದಲಾವಣೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೆಳಗ್ಗೆ ಬಿಜೆಪಿ ಕಛೇರಿಗೆ ಮುತ್ತಿಗೆ ಹಾಕಲು ಯತ್ನಿಸಿ ಬಂಧನಕ್ಕೆ ಒಳಗಾದರು.
ಪತ್ರಿಭಟನಾಕಾರರು ಜೈಲ್ ಸರ್ಕಲ್ (ದೈವಜ್ಞ ಸರ್ಕಲ್)ನಲ್ಲಿ ಪ್ರತಿಭಟನೆ ನಡೆಸಿ ಬಳಿಕ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಬಂಧಿಸಿದರು.

ಎಎಸ್‍ಐ ಅಮೃತಾಬಾಯಿ ಅವರ ಮಾಂಗಲ್ಯಸರ ನಾಪತ್ತೆ
ಕಾಂಗ್ರೆಸ್ ಪ್ರತಿಭಟನೆಯ ಸಂದರ್ಭದಲ್ಲಿ ಬಂದೋಬಸ್ತಿಗೆ ನೂರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಇದರಲ್ಲಿ ಮಹಿಳಾ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಕೋಟೆ ಠಾಣೆಯ ಎಎಸ್‍ಐ ಅಮೃತಾಬಾಯಿಯವರ ಸುಮಾರು 60 ಗ್ರಾಂ ತೂಕದ 7 ಲಕ್ಷ ರೂ. ಮೌಲ್ಯದ ಮಾಂಗಲ್ಯಸರ ಕಳೆದು ಹೋಗಿದ್ದು, ಆತಂಕಕ್ಕೆ ಕಾರಣವಾಯಿತು. ಮಾಂಗಲ್ಯಸರ ಕಳೆದುಕೊಂಡ ಅಮೃತಾಬಾಯಿ ಕಣ್ಣೀರು ಹಾಕಿದರು. ಸರ ಕಳುವಾಗಿದೆಯಾ ಅಥವಾ ಕಳೆದು ಹೋಗಿದೆಯಾ ಎಂಬುದು ತನಿಖೆಯ ಬಳಕವಷ್ಟೇ ಗೊತ್ತಾಗಬೇಕಿದೆ. ಪೊಲೀಸರು ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಪ್ರತಿಭಟನೆಯ ನೂಕುನುಗ್ಗಲಿನಲ್ಲಿ ಸರ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಇದೊಂದು ಗಂಭೀರ ಪ್ರಕರಣವಾಗಿದೆ. ಪೊಲೀಸರ ಸರವನ್ನೇ ಅಪಹರಿಸುತ್ತಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದರು. ಅಮೃತ ಬಾಯಿಯವರು ಈ ಬಗ್ಗೆ ದೂರು ಕೊಡುವುದಾಗಿ ತಿಳಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್‍ಗಾಂಧಿ ವಿರುದ್ಧ ಇಡಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆಯ ದೂರು ಸ್ವೀಕರಿಸಲು ದೆಹಲಿಯ ನ್ಯಾಯಾಲಯವೇ ನಿರಾಕರಿಸಿದೆ. ಇದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕಾಗಿ ನಮ್ಮ ನಾಯಕರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಬಿಜೆಪಿ ಉದ್ದೇಶಪೂರ್ವಕವಾಗಿ ಗಾಂಧಿಕುಟುಂಬಕ್ಕೆ ಕಿರುಕುಳ ನೀಡುವುದು ಮತ್ತು ವಿಪಕ್ಷಗಳನ್ನು ಗುರಿಯಾಗಿಸುವುದು ಇದು ಸೇಡಿನ ಪ್ರಕರಣವಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷಗಳನ್ನು ನಿರಂತರವಾಗಿ ಗುರಿಯನ್ನಾಗಿಸಿಕೊಳ್ಳುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ನಮ್ಮ ಆಕ್ರೋಶವಿದ್ದು ಇದನ್ನು ನಾವು ಬಯಲು ಮಾಡುತ್ತೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಅಲ್ಲದೆ ನರೇಗಾ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಲು ಹೊರಟಿರುವುದು ಸರಿಯಲ್ಲ, ಇದು ಮಹಾತ್ಮಾಗಾಂಧೀಜಿಯವರ ಬಗೆಗಿನ ತಮ್ಮ ದ್ವೇಷವನ್ನು ತಾವೇ ಬಯಲು ಮಾಡಿಕೊಂಡಂತೆ ಆಗುತ್ತದೆ. ಯಾವುದೇ ಕಾರಣಕ್ಕೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಮತ್ತು ಸ್ವರೂಪವನ್ನು ಬದಲಾಯಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥ್‍ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಉಪಾಧ್ಯಕ್ಷ ಎಸ್.ಟಿ. ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂಪಾಷಾ, ಶಿವಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ರಾಜ್ಯ ಸಂಚಾಲಕ ಜಿ.ಡಿ. ಮಂಜುನಾಥ್, ಜವಳಿ ನಿಗಮದ ಅಧ್ಯಕ್ಷ ಚೇತನ್, ಆಪ್‍ಕಾಪ್ಸ್ ಅಧ್ಯಕ್ಷ ವಿಜಯಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್, ಪ್ರಮುಖರಾದ ಆರ್. ರಾಜಶೇಖರ್, ದೇವೇಂದ್ರಪ್ಪ, ವಿಜಯಲಕ್ಷ್ಮೀ ಸಿ. ಪಾಟೀಲ್, ಇಸ್ಮಾಯಿಲ್ ಖಾನ್, ಎಸ್.ಪಿ. ಶೇಷಾದ್ರಿ, ಮಧುಸೂದನ್, ಕೆ. ರಂಗನಾಥ್, ಹೆಚ್.ಸಿ. ಯೋಗೀಶ್, ಹರ್ಷಿತ್‍ಗೌಡ, ಹೆಚ್.ಪಿ. ಗಿರೀಶ್, ವಿಶ್ವನಾಥ್‍ಕಾಶೀ, ನಾಗರಾಜ್ ಕಂಕಾರಿ, ಪಾಲಾಕ್ಷಿ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















