ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹಲವು ವರ್ಷಗಳಿಂದ ಇದ್ದ ಭಿನ್ನಾಭಿಪ್ರಾಯಗಳನ್ನು ಮರೆತು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಟ್ರಸ್ಟ್ ಒಂದಾಗಿರುವ ಸ್ವಾಗತಾರ್ಹ ಬೆಳವಣಿಗೆ ನಡೆದಿದೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹೇಳಿಕೆ ನೀಡಿದೆ.
ಈ ಕುರಿತಂತೆ ನಡೆದ ಮಹತ್ವದ ಸಭೆಯಲ್ಲಿ, ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪರಸ್ಪರ ಸಮನ್ವಯತೆಯಿಂದ ಒಟ್ಟಾಗಿ ಮುನ್ನಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.
ಈ ಮೂಲಕ ಈ ಎರಡೂ ಸಂಘಟನೆಗಳ ನಡುವೆ ಇದ್ದ ಸುದೀರ್ಘ ಕಾಲದ ಅಂತರ ಪರಿಹಾರವಾದಂತಾಗಿದೆ. ಈ ನಿಟ್ಟಿನಲ್ಲಿ ಮುಕ್ತ ಮನಸ್ಸಿನಿಂದ ಕೈ ಜೋಡಿಸಿದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಎನ್. ಮಂಜುನಾಥ್ ಹಾಗೂ ಎಲ್ಲ ಪದಾಧಿಕಾರಿಗಳು, ನಿರ್ದೇಶಕರು, ಸದಸ್ಯರುಗಳಿಗೆ ಸಂಘವು ಅಭಾರಿಯಾಗಿದೆ ಎಂದಿದೆ.
ಸಂಘದ ಸಂಕಷ್ಟದ ಸಮಯದಲ್ಲಿ ಆಸರೆಯಾಗಿ ನಿಂತು, ಬಲ ತುಂಬಿದ ಜಿಲ್ಲೆಯ ಎಲ್ಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪದಾಧಿಕಾರಿಗಳು, ನಗರದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಎಲ್ಲ ಸದಸ್ಯರಿಗೆ ಸಂಘವು ಸದಾ ಚಿರಋಣಿಯಾಗಿದ್ದೇವೆ. ಇದೇ ರೀತಿಯ ಬೆಂಬಲ, ಪ್ರೋತ್ಸಾಹ ಸದಾ ಇರಲಿ ಎಂದು ಕೋರಿದೆ.
ಮುಂದಿನ ದಿನಗಳಲ್ಲಿ ನಮ್ಮ ಎಲ್ಲ ಕಾರ್ಯಕ್ರಮಗಳು, ಪ್ರೆಸ್ ಟ್ರಸ್ಟ್ ಸಹಭಾಗಿತ್ವದಲ್ಲಿ ಪತ್ರಿಕಾ ಭವನದಲ್ಲಿ ಮುಂದುವರಿಯಲಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪರಸ್ಪರ ಒಂದಾಗಿ, ಮುಂದಿನ ದಿನಗಳಲ್ಲಿ ಕಾರ್ಯ ನಿರ್ಹಿಸಲು, ಕಾರ್ಯಕ್ರಮಗಳನ್ನು ಸಂಘಟಿಸಲು ಹಾಗೂ ಮುಖ್ಯವಾಗಿ ಕಾರ್ಯನಿರತ ಪತ್ರಕರ್ತರ ಹಿತ ಕಾಯುವಲ್ಲಿ ಶ್ರಮಿಸಲು ಚಿಂತಿಸಲಾಗಿದೆ ಎನ್ನಲಾಗಿದೆ.
ಈ ನಿಟ್ಟಿನಲ್ಲಿ ಸಹಕರಿಸಿದ ಸಂಸದ ಬಿ.ವೈ. ರಾಘವೇಂದ್ರ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರಿಗೆ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವೈದ್ಯ ಹಾಗೂ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್ ಧನ್ಯವಾದ ಅರ್ಪಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post