ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ಮೂಲದ ಸಹನಾ ಎಂಬುವವರು ತಮ್ಮ ಕುಟುಂಬದೊಂದಿಗೆ ಮೂಡಿಗೆರೆಯಲ್ಲಿ ಪ್ರಯಾಣ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬಸ್ ಅಪಘಾತಕ್ಕೊಳಗಾಗಿ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಘನನ್ಯಾಯಾಲಯದಲ್ಲಿ ದಾಖಲಾದ ಪ್ರಕರಣವನ್ನು ಇಂದಿನ ಲೋಕ ಅದಾಲತ್‌ನಲ್ಲಿ ದೂರುದಾರರು ಹಾಗೂ ವಿಮಾ ಕಂಪನಿಗಳ ಮುಖ್ಯಸ್ಥರನ್ನು ಕರೆದು ನ್ಯಾಯಾಧೀಶರು ವಿಚಾರಣೆ ನಡೆಸಿದ್ದರ ಫಲವಾಗಿ ವಿಮಾ ಕಂಪನಿಯು 80 ಲಕ್ಷ ರೂ. ಗಳ ಪರಿಹಾರ ಧನವನ್ನು ನೀಡಲು ನ್ಯಾಯಾಲಯವು ಆದೇಶ ಹೊರಡಿಸಿದೆ.
ಇಂದಿನ ಲೋಕ ಅದಾಲತ್‌ಗೆ ಸಂಬಂಧಿಸಿದಂತೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮುಸ್ತಫಾ ಹುಸೇನ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಅತಿ ಹೆಚ್ಚು ಮೊತ್ತ ಘೋಷಿಸಿದ ರಾಜ್ಯದಲ್ಲಿಯೇ ವಿಶೇಷ ಪ್ರಕರಣ ಇದಾಗಿದೆ. ಸದರಿ ಪ್ರಕರಣದಲ್ಲಿ ದೂರುದಾರರು ಇನ್ಶೂರೆನ್ಸ್ ಕಂಪನಿಯವರಿಂದ 1.20ಕೋಟಿ ರೂ.ಗಳ ಪರಿಹಾರ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಬಾರಿಯ ಲೋಕ ಅದಾಲತ್‌ನಲ್ಲಿ ಮೋಟಾರು ವಾಹನಗಳ ಒಟ್ಟು 1800 ಪ್ರಕರಣಗಳಲ್ಲಿ 595 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಅವುಗಳಲ್ಲಿ ಸುಮಾರು 125ಕ್ಕೂ ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಳ್ಳಲಿವೆ ಎಂದರು.
ಅಲ್ಲದೇ ನ್ಯಾಯಾಲಯದ ವಿವಿಧ ಶಾಖೆಗಳಲ್ಲಿ ಈವರೆಗೆ ದಾಖಲಾಗಿರುವ ಮೊಕದ್ದಮೆಗಳಲ್ಲಿ ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಬಹುದಾದವುಗಳನ್ನು ಗುರುತಿಸಿ ಅಂತಹ ಮೊಕದ್ದಮೆಗಳನ್ನು ಕೈಗೆತ್ತಿಕೊಂಡು ಲೋಕ ಅದಾಲತ್‌ನಲ್ಲಿ ಉಭಯ ಪಕ್ಷಗಳ ಕಕ್ಷಿದಾರರ ಅಪೇಕ್ಷೆಯಂತೆ ಇತ್ಯರ್ಥಪಡಿಸಲಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಕರಣಗಳನ್ನು ಕೈಗೆತ್ತಿಕೊಂಡು ನ್ಯಾಯವಾದಿಗಳು ಹಾಗೂ ನ್ಯಾಯಾಧೀಶರ ಸಹಕಾರದೊಂದಿಗೆ ಇತ್ಯರ್ಥಪಡಿಸುವ ಆಶಯ ತಮಗಿರುವುದಾಗಿ ಅವರು ತಿಳಿಸಿದರು.
ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಸಾಗಿದ್ದ ನ್ಯಾಯಾಲಯದ ಚಟುವಟಿಕೆಗಳು ದಿನೇದಿನೇ ಚುರುಕುಗೊಳ್ಳುತ್ತಿವೆ. ಆದಾಗ್ಯೂ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಸಾಕಷ್ಟು ಪ್ರಮಾಣದ ಮೊಕದ್ದಮೆಗಳು ದಾಖಲಾಗಿವೆ. ನ್ಯಾಯಾಲಯಕ್ಕೆ ದಾಖಲಾಗುವ ಸಿವಿಲ್ ಮತ್ತು ಕ್ರಿಮಿನಲ್ ಸೇರಿದಂತೆ ವಿವಿಧ ಮಾದರಿಯ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸುವ ಸದುದ್ದೇಶದಿಂದ ಸರ್ವೋಚ್ಚ ನ್ಯಾಯಾಲಯದ ಮಾರ್ಗದರ್ಶನದಂತೆ ಕಾಲಕಾಲಕ್ಕೆ ಲೋಕ ಅದಾಲತ್‌ನ್ನು ಏರ್ಪಡಿಸಿ, ತ್ವರಿತ ಹಾಗೂ ಶೀಘ್ರಗತಿಯ ನ್ಯಾಯದಾನ ನೀಡಲು ಹಾಗೂ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ವಕೀಲರು ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಮೊಕದ್ದಮೆಯನ್ನು ನ್ಯಾಯಾಲಯಕ್ಕೆ ದಾಖಲು ಮಾಡುವ ಮುನ್ನ ರಾಜೀಸಂಧಾನದ ಮೂಲಕವೂ ಇತ್ಯರ್ಥಪಡಿಸಲು ಮುಂದಾಗಬೇಕು. ಇದರಿಂದಾಗಿ ಜನಮಾನಸದಲ್ಲಿ ನ್ಯಾಯಲಯ ಮತ್ತು ವಕೀಲರ ಬಗ್ಗೆ ಉತ್ತಮ ಅಭಿಪ್ರಾಯ ಮೂಡಲಿದೆ ಅಲ್ಲದೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಕಕ್ಷಿದಾರರಿಗೆ ಸಕಾಲದಲ್ಲಿ ನ್ಯಾಯೋಚಿತ ತೀರ್ಮಾನ ಕೊಡಿಸುವಲ್ಲಿ ನ್ಯಾಯವಾದಿಗಳು ಸಹಕರಿಸಬೇಕಾದ ಅಗತ್ಯವಿದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್. ಸರಸ್ವತಿ, ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರು ಹಾಗೂ ಕಕ್ಷಿದಾರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post