ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾನವ ಜನಾಂಗದ ಜೀವನಮಟ್ಟವು ಸುಧಾರಿಸುವಲ್ಲಿ ಸಂಘಟನಾ ಮನೋಭಾವನೆಯಲ್ಲಿ ಇಂಜಿನಿಯರಿಂಗ್ ಕ್ಷೇತ್ರದ ಎಲ್ಲಾ ವಿಭಾಗಗಳ ಪದವೀಧರರು ಶ್ರಮಿಸಬೇಕು ಎಂದು ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪೆನಿಯ ಉಪಾಧ್ಯಕ್ಷ ಹಾಗೂ ಪ್ರಾದೇಶಿಕ ಆರ್’ಎಂಜಿ ಮುಖ್ಯಸ್ಥರಾದ ಇ.ಎಸ್. ಚಕ್ರವರ್ತಿ ಕರೆ ನೀಡಿದರು.
ಪಿಇಎಸ್ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಇಂಜಿನಿಯರಿಂಗ್ ಪದವಿಯ 16 ನೆಯ ಬ್ಯಾಚ್’ನ ಶಿಷ್ಯೋಪನಯನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂಜಿನಿಯರಿಂಗ್ ಶಿಕ್ಷಣದ ಮೂಲಭೂತ ಉದ್ದೇಶಗಳಲ್ಲಿ, ಉದ್ಭವಿಸುವ ವಿವಿಧ ನಮೂನೆಯ ಸಮಸ್ಯೆಗಳಿಗೆ ಪರಿಹಾರಾತ್ಮಕ ಮಾರ್ಗೋಪಾಯಗಳನ್ನು ಕಂಡುಹಿಡಿದು ಪ್ರಾಯೋಗಿಕವಾಗಿ ತಾರ್ಕಿಕ ಮಟ್ಟದಲ್ಲಿ ಅವುಗಳ ಅಳವಡಿಕೆ ಪ್ರಮುಖವಾಗಿದೆ. ಈ ಮೂಲಕ ದೇಶದ ಸರ್ವತೋಮುಖ – ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಹಾಗೂ ವಿವಿಧ ವಿಭಾಗಗಳಲ್ಲಿ ನಡೆಯುವ ಆವಿಷ್ಕಾರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೈಗೆಟುಕುವ ಮಟ್ಟದಲ್ಲಿ ಪಡೆಯುತ್ತ, ಅಸಾಧಾರಣವಾದದ್ದನ್ನು ಸಮಾಜದ ಉನ್ನತಿಗೆ ಪ್ರಾಯೋಗಿಕ ಮಟ್ಟದಲ್ಲಿ ಅಳವಡಿಸುವುದು ಅತ್ಯವಶ್ಯಕವಾಗಿದೆ. ಮಾನವ ಜನಾಂಗದ ಜೀವನಮಟ್ಟವು ಸುಧಾರಿಸುವಲ್ಲಿ ಸಂಘಟನಾ ಮನೋಭಾವನೆಯಲ್ಲಿ ಇಂಜಿನಿಯರಿಂಗ್ ಕ್ಷೇತ್ರದ ಎಲ್ಲಾ ವಿಭಾಗಗಳ ಪದವೀಧರರು ಶ್ರಮಿಸಬೇಕು ಎಂದು ತಿಳಿಸಿದರು.
ಪ್ರಸ್ತುತ ಕಾಲಮಾನದಲ್ಲಿ ಇಂಜಿನಿಯರಿಂಗ್ ಕ್ಷೇತ್ರದ ಒಂದಕ್ಕಿಿಂತ ಹೆಚ್ಚು ವಿಭಾಗಗಳು ಒಟ್ಟುಗೂಡಿ ತಮ್ಮ ತಂತ್ರಜ್ಞಾನ ನೈಪುಣ್ಯವನ್ನು ಒರೆಗೆ ಹಚ್ಚುವ ಮೂಲಕ ವಿಶಿಷ್ಟವಾದದ್ದನ್ನು ಸಂಶೋಧಿಸುವಲ್ಲಿ ಪ್ರಯತ್ನಗಳು ಸಾಗುತ್ತಿದ್ದು, ಇಂಜಿನಿಯರಿಂಗ್ ಶಿಕ್ಷಣದ ಎಲ್ಲಾ ಬ್ರಾಂಚ್’ಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿವೆ.
-ಇ.ಎಸ್. ಚಕ್ರವರ್ತಿ
ಸದಾಕಾಲ ಹೊಸತನ್ನು ಹಾಗೂ ನಾವಿನ್ಯವನ್ನು ಅಳವಡಿಸಿಕೊಳ್ಳುತ್ತಾ, ಅನೂಹ್ಯವಾದದ್ದನ್ನು ಮಾನವ ಸಮಾಜದ ಸಾರ್ವಕಾಲಿಕ ಅಭಿವೃದ್ಧಿಗೆ ಅನುಕೂಲಕರವಾಗುವಂತೆ ಮತ್ತು ಪ್ರಾಯೋಗಿಕ ಸಂಶೋಧನೆಗಳ ಫಲಶ್ರುತಿಗೆ ತನ್ನನ್ನು ತಾನು ಒಡ್ಡಿಕೊಳ್ಳುವ ಮುಕ್ತ ಮನಸ್ಸಿನ ಮನೋವಾಂಛೆಯನ್ನು ಹೊಂದಿರಬೇಕು. ಔದ್ಯೋಗಿಕ ಕ್ಷೇತ್ರದ ಬಗ್ಗೆ ಕುತೂಹಲ ಭರಿತ ಆಸಕ್ತಿಯನ್ನು ಹೊಂದುವಂತೆ ವಿದ್ಯಾರ್ಥಿಗಳನ್ನು ಕೆಲವು ಉದಾಹರಣೆಗಳೊಂದಿಗೆ ಚಕ್ರವರ್ತಿಯವರು ಹುರಿದುಂಬಿಸಿದರು.
ಕಾಲಮಾನಕ್ಕೆ ತಕ್ಕಂತೆ ಕಂಪ್ಯೂಟರ್ ಕ್ಷೇತ್ರ ವಿಭಾಗ, ಎಲೆಕ್ಟ್ರಾನಿಕ್ಸ್ ಕ್ಷೇತ್ರ ವಿಭಾಗ, ಮೆಕಾನಿಕಲ್ ಕ್ಷೇತ್ರ ವಿಭಾಗ ಎಲೆಕ್ಟ್ರಿಕಲ್ ಹಾಗೂ ಸಿವಿಲ್ ಕ್ಷೇತ್ರ ವಿಭಾಗಗಳ ಇಂಜಿನಿಯರಿಂಗ್ ತಂತ್ರಜ್ಞರೆಲ್ಲರೂ ಒಟ್ಟುಗೂಡಿ ಸಾಮಾಜಿಕ ಮಟ್ಟದಲ್ಲಿ ವಿಶಿಷ್ಟವಾದದ್ದನ್ನು ಸಂಶೋಧಿಸಿ ಎಲ್ಲಾ ಸ್ಥರದ ಜನರ ಜೀವನ ಮಟ್ಟವು ಸುಧಾರಿಸುವಲ್ಲಿ ಶ್ರಮಿಸುವಂತೆ ತಿಳಿಸಿದರು.
ಶಿಕ್ಷಕರು ಪ್ರತಿಯೊಂದು ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಗಮನಹರಿಸುವಿಕೆಯನ್ನು ಅಳವಡಿಸಿಕೊಂಡು ತನ್ಮೂಲಕ ಅವರುಗಳಲ್ಲಿ ಹುದುಗಿರುವ ನೈಪುಣ್ಯತೆಯನ್ನು ಗುರುತಿಸಿ ಅತ್ಯುತ್ತಮವಾದದನ್ನು ಸಾಧಿಸುವಲ್ಲಿ ಪ್ರೇರೇಪಿಸುವ ಕಡೆಗೆ ಗಮನಹರಿಸಬೇಕೆಂದು ಮನಮುಟ್ಟುವಂತೆ ನುಡಿದರು.
ವಿದ್ಯಾರ್ಥಿಗಳಲ್ಲಿ ಅಡಗಿರುವ ತಾರ್ಕಿಕ ಮನೋಭಾವನೆಯನ್ನು ವೃದ್ಧಿಸುವಲ್ಲಿ ಪ್ರಾಯೋಗಿಕ ಮಟ್ಟದ ಪ್ರಾತ್ಯಕ್ಷಿಕೆಗಳನ್ನು ತಯಾರಿಸುವಲ್ಲಿ ಅನುಕೂಲವಾಗುವ ಪ್ರಾಜೆಕ್ಟ್ ಎಕ್ಸಿಬಿಷನ್’ಗಳು, ಗ್ರೂಪ್ ಡಿಸ್ಕಶನ್, ರಸಪ್ರಶ್ನೆ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಅತ್ಯುತ್ತಮ ಇಂಜಿನಿಯರಿಂಗ್ ಪದವೀಧರರಾಗಿ ಹೊರಹೊಮ್ಮುವಲ್ಲಿ ಕಾರ್ಯತತ್ಪರರಾಗುವಂತೆ ಕರೆ ನೀಡಿದರು.
ಪಿಇಎಸ್’ಐಟಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ವಿ. ಚೈತನ್ಯ ಕುಮಾರ್ ಮಾತನಾಡಿ, ಇಂಜಿನಿಯರಿಂಗ್ ಶಿಕ್ಷಣವು ಪ್ರಸ್ತುತ ಕಾಲಮಾನದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ಹಾಗೂ ಪಾವಿತ್ರವನ್ನು ಪಡೆದಿದೆ. ತನ್ಮೂಲಕ ಅಸಾಧಾರಣ ಪ್ರಾಯೋಗಿಕ ಸಂಶೋಧನೆಗಳನ್ನು ನಡೆಸುವ ಮೂಲಕ ಮಾನವ ಸಮಾಜದ ಮೂಲಭೂತ ಮಟ್ಟವನ್ನು ಸುಧಾರಿಸಿ ಅದ್ವಿತೀಯ ಕೊಡುಗೆಗಳನ್ನು ಸಮಾಜಕ್ಕೆ ನೀಡುವ ಮೂಲಕ ಸಮಾಜಮುಖಿ ಧೋರಣೆಯನ್ನು ವ್ಯಕ್ತಪಡಿಸುವಲ್ಲಿ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚಿಸಿದರು.
ದಿನನಿತ್ಯದ ಜೀವನದಲ್ಲಿ ಎಲ್ಲಾ ಕೆಲಸಗಳ ಜೊತೆಗೆ ನಿಯಮಿತ ನಿದ್ರಾ ಕ್ರಮವೂ ವಿಷಯಗಳ ಮನವರಿಕೆ, ಅಧ್ಯಯನ ಲಹರಿ ಹಾಗೂ ಅವುಗಳ ಪ್ರಾಯೋಗಿಕ ಅಳವಡಿಕೆಗಳಲ್ಲಿ ಒಂದು ಪ್ರಮುಖ ಸಾಧನವಾಗಿ ಅವತರಿಸಲ್ಪಟ್ಟು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ತಾರ್ಕಿಕ ಚಾಕಚಕ್ಯತೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ. ಆರ್. ನಾಗರಾಜ ಮಾತನಾಡಿ, ಪಿಇಎಸ್ ಶಿಕ್ಷಣ ಸಂಸ್ಥೆಯ ಹಲವಾರು ಸಾಧನೆಗಳ ಪಕ್ಷಿ ನೋಟವನ್ನು ಆಮೂಲಾಗ್ರವಾಗಿ ನೀಡಿದರು. ರಾಜ್ಯದ ಮಲೆನಾಡಿನ ವಿಭಾಗದ ವಿದ್ಯಾರ್ಥಿ ವೃಂದಕ್ಕೆ ಗುಣಾತ್ಮಕ ಶಿಕ್ಷಣವನ್ನು ನೀಡುವುದರ ಜೊತೆ ಜೊತೆಗೆ ಸಮಾಜಮುಖಿ ಸ್ವಾವಲಂಬಿ ಪ್ರಜೆಗಳನ್ನಾಗಿ ರೂಪಿಸುವಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.
ಪಿಇಎಸ್’ಐಟಿಎಂ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮಲ್ಲೇಶ್ ಕುಮಾರ್ ಮಾತನಾಡಿ, ಪಿಇಎಸ್ ಶಿಕ್ಷಣ ಸಂಸ್ಥೆಯು ಅತ್ಯಂತ ಕಡಿಮೆ ಕಾಲಮಾನದಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿದೆ. ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರಕ್ಕೆ ಅತ್ಯವಶ್ಯವಿರುವ ನೈಪುಣ್ಯವನ್ನು ಸಂಪಾದಿಸುವಲ್ಲಿ ಜರುಗುವ ಅನೇಕ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳುವಲ್ಲಿ ಕಾರ್ಯತತ್ಪರರಾಗಬೇಕೆಂದು ಮನಮುಟ್ಟುವಂತೆ ತಿಳಿಸಿದರು.
ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸಲು ಅನುಕೂಲಕರವಾಗುವಂತಹ ತಾರ್ಕಿಕ ಪ್ರಾಯೋಗಿಕ ಚಾಕಚಕ್ಯತೆಯನ್ನು ಸಂಪಾದಿಸುವಲ್ಲಿ ಜ್ಞಾನಾರ್ಜನೆ ಒಳಗೊಂಡಂತೆ ಬೌದ್ಧಿಕ ಹಾಗೂ ಆಧ್ಯಾತ್ಮಿಕ ಅಂಶಗಳನ್ನು ಮೈಗೂಡಿಸಿಕೊಂಡು ವೈಯಕ್ತಿಕ ಹಾಗೂ ವೃತ್ತಿಪರ ಜೀವನದಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡುಬೇಕು.
-ಡಾ.ಆರ್. ನಾಗರಾಜ್, ಪಿಇಎಸ್ ಟ್ರಸ್ಟ್ ಮುಖ್ಯ ಆಡಳಿತ ಸಂಯೋಜನಾಧಿಕಾರಿ
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್’ನ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ಫಲಶ್ರುತಿಯಾಗಿ ಶೈಕ್ಷಣಿಕ ವೈಶಿಷ್ಟಯುಳ್ಳ ಮೂರು ಪ್ರಾಯೋಗಿಕ ಸಂಶೋಧನಾತ್ಮಕ ಕೇಂದ್ರಗಳನ್ನು ಚಕ್ರವರ್ತಿಯವರು ಹಾಗೂ ಪಿಇಎಸ್ ಟ್ರಸ್ಟ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಸುಭಾಷ್ ಉದ್ಘಾಟಿಸಿದರು.
ಪಿಇಎಸ್’ಐಟಿಎಂ ಮೆಕಾನಿಕಲ್ ವಿಭಾಗದ ನ್ಯಾನೋ ಟೆಕ್ನಾಲಜಿ ಕ್ಷೇತ್ರದ ಸಂಶೋಧನಾತ್ಮಕ ಕೇಂದ್ರವಾದ ಆಡ್ ನ್ಯಾನೋ; ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ಡೇಟಾ ಸೈನ್ಸ್ ಕ್ಷೇತ್ರದ ಉತ್ಕೃಷ್ಟತಾ ಕೇಂದ್ರ ಮತ್ತು ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಹಾಗೂ ಮಿಷಿನ್ ಲರ್ನಿಂಗ್ ವಿಭಾಗದ ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ರೋಬೋಟಿಕ್ಸ್ ಕ್ಷೇತ್ರದ ವಿಕಸನ ಕೇಂದ್ರಗಳನ್ನು ಈ ಸಮಾರಂಭದ ಒಂದು ಭಾಗವಾಗಿ ಲೋಕಾರ್ಪಣೆ ಮಾಡಲಾಯಿತು.
ಎಂಬಿಎ ವಿಭಾಗ ಹಾಗೂ ಕೆರಿಯರ್ ಡೆವಲಪ್ಮೆಂಟ್ ಸೆಂಟರ್ ಮುಖ್ಯಸ್ಥರಾದ ಡಾ. ಟಿ.ಎಂ. ಪ್ರಸನ್ನ ಕುಮಾರ್ ಸ್ವಾಗತಿಸಿ, ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ.ಎಚ್.ಆರ್. ಪ್ರಸನ್ನಕುಮಾರ್ ವಂದಿಸಿದರು. ಆರ್ಟಿಫಿಶಿಯಲ್ ಇಂಟಿಲಿಜನ್ಸ್ ಮತ್ತು ಮಷೀನ್ ಲರ್ನಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಲೈಕ್ವಿನ್ ಥಾಮಸ್ ನಿರೂಪಿಸಿದರು. ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ಪ್ರಥಮ ವರ್ಷದ ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಸಿವಿಲ್, ಎಐಎಂಎಲ್, ಕಂಪ್ಯೂಟರ್ ಸೈನ್ಸ್ ಇನ್ ಡಿಸೈನ್, ಕಂಪ್ಯೂಟರ್ ಸೈನ್ಸ್ ಇನ್ ಡೇಟಾ ಸೈನ್ಸ್ ವಿಭಾಗಗಳ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post