ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಒಂದು ಪುಸ್ತಕ ಬರೆಯುವ ಮುನ್ನವೇ ದಿನಾಂಕ ನಿಗದಿಪಡಿಸುತ್ತಿದ್ದ ಏಕಮಾತ್ರ ಲೇಖಕರೆಂದರೆ ಅದು ರವಿ ಬೆಳಗೆರೆ ಮಾತ್ರ ಎಂದು ಹಿರಿಯ ಪತ್ರಕರ್ತ ಶೃಂಗೇಶ್ ಅಭಿಪ್ರಾಯಪಟ್ಟರು.
ಇತ್ತೀಚೆಗೆ ಅಗಲಿದ ದಿ.ರವಿ ಬೆಳಗೆರೆಯವರಿಗೆ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಲಿಟರರಿ ಕ್ಲಬ್ ವತಿಯಿಂದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಕೆಲಸವನ್ನು ಮಾಡಿದರು ಶ್ರದ್ಧೆಯಿಂದ ಮಾಡುತ್ತಿದ್ದವರು ರವಿ ಬೆಳಗೆರೆ. ಎರಡು ಪುಸ್ತಕದ ಬಿಡುಗಡೆಗೆಂದು ಬೆಂಗಳೂರಿಗೆ ಹೋದಾಗ ಎರಡು ಪುಸ್ತಗಳು ಬಿಡುಗಡೆಗೆ ಸಿದ್ಧವಾಗಿದ್ದವು. ಇನ್ನು ಬಿಡುಗಡೆಗೆ 48 ಗಂಟೆ ಸಮಯ ಬಾಕಿ ಇದೆ ಎಂದು ಹೇಳಿದ ಅವರು ಅಮ್ಮ ಸಿಕ್ಕಿದಳು ಎಂಬ ಕಿರುಹೊತ್ತಿಗೆಯನ್ನು ಬರೆದು ಮುದ್ರಣ ಮಾಡಿಸಿ ಎರಡು ಪುಸ್ತಕರ ಜೊತೆ ಬಿಡುಗಡೆಗೊಳಿಸಿದರು ಎಂದು ನೆನಪಿಸಿಕೊಂಡರು.
ಲಂಕೇಶ್ ಪತ್ರಿಕೆಯ ಓದುಗರಾಗಿದ್ದವರು ಹಾಗೂ ಲಂಕೇಶ್ ಪತ್ರಿಕೆಯ ತಂಡದವರೊಂದಿಗೆ ಒಡನಾಟ ಇಟ್ಟುಕೊಂಡವರು ನಾವು. ಸತ್ಯಮೂರ್ತಿ, ಆನಂದರೊಟ್ಟಿಗೆ ರವಿ ಬೆಳಗೆರೆಯವರ ಬಳಿ ಹೋಗಿದ್ದು ಹಾಯ್ ಬೆಂಗಳೂರು ಪತ್ರಿಕೆಯ ಏಜೆನ್ಸಿ ಕೊಡಿ ಎಂದು. ಆದರೆ ಶಿವಮೊಗ್ಗ ವರದಿಗಾರನಾಗಿ ಕಾರ್ಯನಿರ್ವಹಿಸುವಂತೆ ಅವರು ಸೂಚಿಸಿದರು. ಹಾಯ್ ಬೆಂಗಳೂರು ಪತ್ರಿಕೆಯ ಮೊದಲ ವಾರ್ಷಿಕೋತ್ಸವ ಟೌನ್ ಹಾಲ್‌ನಲ್ಲಿ ನಡೆದಾಗ ಗೆಳೆಯರೊಂದಿಗೆ ಕಾರ್ಯದಲ್ಲಿ ಭಾಗವಹಿಸಿದ್ದೆವು. ವರದಿಗಾರನಾಗಿ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಕೇವಲ ವರದಿಗಾರನಾಗಿ ಮಾತ್ರವಲ್ಲ ಬೆಳಗೆರೆಯರೊಟ್ಟಿಗೆ ಇಡೀ ಕರ್ನಾಟಕವನ್ನು ಸುತ್ತಿದ್ದೇನೆ ಎಂದು ರವಿ ಅವರೊಂದಿಗಿನ ತಮ್ಮ ಒಡನಾಟವನ್ನು ನೆನೆದರು.
ರವಿ ಬೆಳಗೆರೆಯವರು ಇನ್ನಿಲ್ಲವೆಂದಾಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧಗಳ ಚರ್ಚೆಗಳು ಮತ್ತು ಪ್ರತಿಕ್ರಿಯೆಗಳು ದೊಡ್ಡಮಟ್ಟದಲ್ಲಿ ನಡೆಯಿತು. ವರದಿಗಾರನಾಗಿ ಒಂದು ಪತ್ರಿಕೆಗೆ ವರದಿಗೆ ಸಿದ್ಧಪಡಿಸಬೇಕು, ಅ ಪತ್ರಿಕೆಯ ಓದುಗರು ಹೇಗೆಲ್ಲ ಇರುತ್ತಾರೆ, ಯಾವ ರೀತಿಯ ವಿಷಯಗಳು ವರದಿಯಾಗಬೇಕು, ವರದಿಗಾರನ ಬದ್ದತೆ ಎಷ್ಟಿರಬೇಕು ಎನ್ನುವುದನ್ನು ರವಿ ಬೆಳಗೆರೆಯವರು ಹೇಳಿಕೊಟ್ಟರು. ನಂತರದಲ್ಲಿ ಸ್ಥಳೀಯ ಪತ್ರಿಕೆ ಮಾಡಿದೆ. ಪ್ರಿಂಟಿಂಗ್ ಪ್ರೆಸ್ ಮಾಡಿದೆ, ಹೀಗೆ ಅನೇಕ ಕಡೆ ಬೆಳವಣಿಗೆ ಕಂಡಿದ್ದೇನೆ. ಆದರೆ ಮೂಲಭೂತವಾಗಿ ಎಲ್ಲವನ್ನು ಮಾಡುವ ಮೊದಲು ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕಲಿತ ಅನುಭವವೇ ಬುನಾದಿ ಆಯಿತು ಎಂದರು.
ರವಿ ಬೆಳಗೆರೆಯವರು ಬರವಣಿಗೆಗೆ ಕುಳಿತರೆ ಅವರ ಬರಹ ಮುತ್ತಿನಂತಹ ಅಕ್ಷರಗಳಿಂದ ಕೂಡಿರುತ್ತಿತ್ತು. ನೂರು ಪುಟ ಬರೆದರೂ ಒಂದೇ ಒಂದು ಚಿತ್ತು-ಕಾಟು ಇಲ್ಲದೆ ಬರೆಯುತ್ತಿದ್ದರು. ಅಂದರೆ ಮಾನಸಿಕವಾಗಿ ಬರೆಯುವ ವಿಷಯದ ಕುರಿತು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿರುತ್ತಿದ್ದರು. ಒಂದು ಪುಸ್ತಕ ಬರೆಯುವುದಕ್ಕೆ ಕನ್ನಡ ಕಾದಂಬರಿಕಾರರಲ್ಲಿ ಎಸ್.ಎಲ್. ಬೈರಪ್ಪ ಮತ್ತು ರವಿ ಬೆಳಗೆರೆ ಮಾತ್ರ ಪೂರಕ ತಯಾರಿ ಮಾಡಿಕೊಳ್ಳುತ್ತಾರೆ ಅನಿಸುತ್ತದೆ. ಕ್ರೆûಂ ಸ್ಟೋರಿಗಳನ್ನು ವಿಸ್ಕೃತವಾಗಿ ಅಧ್ಯಯನ ನಡೆಸಲು ಎಫ್’ಐಆರ್’ಗಳನ್ನು ತರಿಸಿಕೊಂಡು ಸಂಬಂಧಪಟ್ಟ ಮಾಹಿತಿ ಕಲೆ ಹಾಕುತ್ತಿದ್ದರು ಎಂದರು.
ರವಿ ಬೆಳಗೆರೆಯವರ ಪತ್ರಿಕೆಯಲ್ಲಿ ಯಾವೊಂದು ಪುಟವೂ ಓದಲಿಕ್ಕೆ ಆಗುವುದಿಲ್ಲ ಎಂದು ಇರಲೇಯಿಲ್ಲ. ಪುಟ ತುಂಬಿಸಬೇಕು ಎಂದು ಕಸ ತುಂಬಿಟ್ಟು ಪತ್ರಿಕೆಯನ್ನು ಮಾರುಕಟ್ಟೆಗೆ ಬಿಡುತ್ತಿರಲಿಲ್ಲ. ಅವರು ಆರೋಗ್ಯದಿಂದ ಇರುವಷ್ಟು ದಿನ ಪ್ರತಿ ಪುಟದ ಒಂದೊಂದು ಅಕ್ಷರವನ್ನು ಗಮನಿಸಿ ಮುದ್ರಣಕ್ಕೆ ಕಳಿಸುತ್ತಿರುವಷ್ಟು ಬದ್ದತೆ ಅವರಲ್ಲಿತ್ತು. ಎಷ್ಟೇ ಆತ್ಮೀಯರಿರಲಿ ಬರೆದಿರುವ ಲೇಖನ ಓದುವಂತೆ ಇಲ್ಲವಾದರೆ ಯಾವುದೇ ಮುಲಾಜಿಲ್ಲದೇ ಕಸದ ಪುಟ್ಟಿ ಹಾಕಿಬಿಡುತ್ತಿದ್ದರು ಎಂದರು.
ಪತ್ರಿಕೆ ಮಾಡುವುದರಲ್ಲಿ, ಪುಸ್ತಕ ಬರೆಯುದರಲ್ಲಿ ಅವರು ಒಂದು ಶ್ರದ್ಧೆ ಇಟ್ಟು ಕೊಂಡಿರುತ್ತಿದ್ದರು. ಶ್ರದ್ದೆಯ ಜೊತೆಗೆ ಅಳವಾದ ಅಧ್ಯಯನ ನಡೆಸುತ್ತಿದ್ದರೇ ಹೊರತು ಕಾಟಾಚಾರಕ್ಕೆ ಎಂದಿಗೂ ಲೇಖನವನ್ನು ಪ್ರಕಟಿಸುತ್ತಿರಲಿಲ್ಲ. ಅಲ್ಲದೇ, ಯಾವ ವರದಿಗಾರನಿಂದ ಏನೆಲ್ಲ ಕೆಲಸ ಮಾಡಿಸಬಹುದು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಆಯಾ ವಾರಕ್ಕೆ ಏನೆಲ್ಲ ವಿಷಯ ಸಂಗ್ರಣೆ ಮಾಡಬೇಕು ಎಂಬುದು ಅವರ ಮನಸ್ಸಿನಲ್ಲಿ ಮೊದಲೇ ಮುದ್ರಣವಾಗಿರುತ್ತಿತ್ತು. ಯಾವ ಪತ್ರಿಕೆಯ ವರದಿಗಾರನಿಗೂ ಸ್ವತಂತ್ರವಾಗಿ ವರದಿ ಮಾಡುವ ಕಾಲ ಹೋಗಿ ತುಂಬ ವರ್ಷಗಳು ಕಳೆದಿವೆ. ಅ ಪತ್ರಿಕೆಯ ಮಾಲಿಕ ವರ್ಗ ಹೇಳಿದ್ದನ್ನು ಮಾತ್ರ ವರದಿ ಮಾಡಬೇಕಿದೆ. ಆದರೆ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಎಂದೂ ವರದಿಗಾರರು ಸಿದ್ಧಪಡಿಸಿದ ಸಮಂಜಸ ವರದಿಗಳನ್ನು ಪ್ರಟಿಸದೇ ಬಿಟ್ಟಿಲ್ಲ ಅಂದರೆ ಅಷ್ಟು ಸ್ವಾತಂತ್ರ್ಯ ಸಹೋದ್ಯೋಗಿಗಳಿಗೆ ನೀಡಿದ್ದರು ಎಂದು ನೆನೆದರು.
ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಆರ್.ಪಿ. ಪೈ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು ಹಿಪೋಕ್ರೆಟಿಕ್ ಒಥ್ ಜೊತೆಗೆ ಸಾಹಿತ್ಯದ ಕುರಿತ ವಿಷಯಗಳನ್ನು ವೈದ್ಯರಾದವರು ತಿಳಿದುಕೊಂಡಿರಬೇಕು. ಕೋವಿಡ್ ನಂತಹ ಸಮಯದಲ್ಲಿ ವೈದ್ಯರು ಮನುಷ್ಯರಾದ ಕಾರಣ ಅವರನ್ನು ರಕ್ಷಿಸಿಕೊಂಡು ರೋಗಿಯ ಕಾಯಿಲೆ ನಿವಾರಣೆ ಮಾಡುವುದು ನಿಜಕ್ಕೂ ವೈದ್ಯಲೋಕಕ್ಕೆ ತುಂಬ ಕಷ್ಟದ ಪರಿಸ್ಥಿತಿಯಾಗಿತ್ತು. ವೈದ್ಯರು ಸಹ ಸಾಹಿತ್ಯದ ಅಭಿರುಚಿ ಹೊಂದಿದರೇ ವೈದ್ಯಕೀಯ ವೈಪರೀತ್ಯಗಳನ್ನು ನಿಭಾಯಿಸಲು ಸಹಕಾರಿಯಾಗುತ್ತದೆ. ರವಿ ಬೆಳಗೆರೆಯವರ ಸಾಹಿತ್ಯವು ವೈದ್ಯಕೀಯ ವಿಚಾರಗಳಲ್ಲಿ ಅನೇಕ ಉಪಾಯ ಕೌಶಲ್ಯಗಳನ್ನು ಒಳಗೊಂಡಿದೆ ಎಂದರು.
ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವಿನಯಾ ಶ್ರೀನಿವಾಸ್, ಪ್ರಾಂಶುಪಾಲರಾದ ಡಾ.ಎಸ್.ಎಂ. ಕಟ್ಟಿ, ಡಾ.ಸಿದ್ಧಲಿಂಗಪ್ಪ, ಡಾ.ಸುಜಿತ್ ಹಾಲಪ್ಪ ಹಾಗೂ ಮೊದಲಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post