ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಸಹಕಾರಿ ಸಂಘಗಳು ಇನ್ನಷ್ಟು ಬಲಗೊಳ್ಳಬೇಕಾದ ಅಗತ್ಯವಿದ್ದು, ಇದಕ್ಕೆ ಪೂರಕವಾಗಿ ಅನುಭವಿಗಳೊಂದಿಗೆ ಯುವಕರು ಜವಾಬ್ದಾರಿ ಹೊರಬೇಕು ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಅಭಿಪ್ರಾಯಪಟ್ಟರು.
ಶ್ರೀಪಾಂಡುರಂಗಸ್ವಾಮಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್, ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 67ನೇ ಸಹಕಾರ ಸಪ್ತಾಹ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಸಂಘಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಬೇಕು. ಈ ನಿಟ್ಟಿನಲ್ಲಿ ಸಹಕಾರಿ ಬಂಧುಗಳು ಹೆಚ್ಚಿನ ಗಮನ ನೀಡಬೇಕು ಎಂದರು.
ಪ್ರಸ್ತುತ ಸಮಾಜದಲ್ಲಿ ಸಹಕಾರ ಸಂಘಗಳ ಕಡೆ ಹೆಚ್ಚಿನ ಒಲವು ಕಂಡು ಬರುತ್ತಿದ್ದು, ಸಾಮಾನ್ಯರು, ಕೃಷಿಕರು, ಕೂಲಿಕಾರ್ಮಿಕರು, ಕಡು ಬಡವರಿಗೆ ಸಹಕಾರಿ ಸಂಘಗಳು ಹೆಚ್ಚು ಸಹಕಾರಿಯಾಗಿವೆ. ಸುಲಭವಾಗಿ ತಕ್ಷಣ ಆರ್ಥಿಕ ಸೌಲಭ್ಯಗಳು ಪಡೆದುಕೊಳ್ಳಲು ಸಹಕಾರಿಗಳಿಂದ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಖಾಸಗಿ ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳ ಮೇಲಿನ ವ್ಯಾಮೋಹ ಕಡಿಮೆಯಾಗುತ್ತಿದೆ ಎಂದರು.
ಯಾವುದೇ ಕೆಲಸವಿರಲಿ ಪರಸ್ಪರರ ನಡುವೆ ಸಹಕಾರವಿದ್ದಾಗ ಅಭಿವೃದ್ಧಿ ಸಾಧ್ಯ. ಈ ಹಿನ್ನಲೆಯಲ್ಲಿ ನಮ್ಮ ಹಿರಿಯರು ಹುಟ್ಟು ಹಾಕಿರುವ ಸಹಕಾರ ಸಂಘಗಳು ಇನ್ನೂ ಹೆಚ್ಚು ಬೆಳವಣಿಗೆ ಹೊಂದಬೇಕು. ಅನುಭವಿಗಳು, ಪ್ರಗತಿ ಚಿಂತಕರು, ವಿದ್ಯಾವಂತರು, ಯುವಕರು ಸಹಕಾರಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಹೊಂದಬೇಕು ಎಂದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನೂತನ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಮಾತನಾಡಿ, ಏಷ್ಯಾಖಂಡದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಸಹಕಾರ ಸಂಘ ಉದಯಿಸುವ ಮೂಲಕ ಪ್ರಸ್ತುತ ಸಹಕಾರ ಸಂಘಗಳು ಹೆಮ್ಮರವಾಗಿ ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರವಾಗಿದೆ. ಸಹಕಾರ ಸಂಘಗಳಿಂದ ಮಾತ್ರ ಆರ್ಥಿಕ ಸೌಲಭ್ಯಗಳು ಹಾಗು ಅಭಿವೃದ್ಧಿಗಳನ್ನು ನಿರೀಕ್ಷಿಸಲು ಸಾಧ್ಯ. ಜಿಲ್ಲೆಯಲ್ಲಿ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಭದ್ರಾವತಿ ತಾಲೂಕು ಜಿಲ್ಲೆಯಲ್ಲಿ ಮಾದರಿಯಾಗಿ ಗುರುತಿಸಿಕೊಂಡಿದೆ. ಅತಿಹೆಚ್ಚಿನ ಸಹಕಾರ ಸಂಘಗಳನ್ನು ಹೊಂದುವ ಜೊತೆಗೆ ಅತಿಹೆಚ್ಚಿನ ಸಾಲಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿರುವುದು ಹಾಗು ಸಹಕಾರ ಸಂಘಗಳು ಹೆಮ್ಮರವಾಗಿ ಬೆಳೆದು ನಿಂತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಅರಕೆರೆ ಎಚ್.ಎಲ್. ಷಡಾಕ್ಷರಿ, ಗೊಂದಿ ಜಯರಾಮ್, ಎಚ್.ಎಸ್. ಸಂಜೀವಕುಮಾರ್, ಟಿ.ಎಸ್. ದುಗ್ಗೇಶ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕೃಷ್ಣಪ್ಪ, ರ್ಯಾಮ್ಕೋಸ್ ಅಧ್ಯಕ್ಷ ಸಿ. ಮಲ್ಲೇಶಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಲೋಕೇಶ್, ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ಒಕ್ಕೂಟದ ಅಧ್ಯಕ್ಷ ಜಿ.ಎಂ. ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post