ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಒಂಬತ್ತು ದಿನಗಳ ಕಾಲ ನಡೆದ ಭದ್ರಾವತಿ ದಸರಾಗೆ ಇಂದು ವಿಧಿವತ್ತಾಗಿ ತೆರೆ ಬಿದ್ದುದ್ದು, ಕೋವಿಡ್19 ನಿಯಮದನ್ವಯವೇ ಎಲ್ಲವನ್ನೂ ನಡೆಸುವಲ್ಲಿ ನಗರಸಭೆ ಯಶಸ್ವಿಯಾಗಿದೆ.
ನವರಾತ್ರಿಯ ಕೊನೆಯ ದಿನವಾದ ಇಂದು ವಿಜಯದಶಮಿಯ ಅಂಗವಾಗಿ ಉಪವಿಭಾಗಾಧಿಕಾರಿ ಪ್ರಕಾಶ್ ಅವರು ಸಾಂಪ್ರದಾಯಿಕವಾಗಿ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಭೇಟಿ ನೀಡಿ ಕಂಕಣ ಕಟ್ಟಿಕೊಂಡರು.
ಸಂಜೆ ಗ್ರಾಮ ದೇವತೆ ಹಳದಮ್ಮ ದೇವಾಲಯದಿಂದ ದೇವರುಗಳ ಮೆರವಣಿಗೆ ಹೊರಟಿತು. ಚಾಮುಂಡೇಶ್ವರಿ, ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ, ಹಳದಮ್ಮ, ಕರೆ ಕೋಡಮ್ಮ, ಕೆಂಚಮ್ಮ, ಕಾಳಿಕಾ ಮಾತೆ ಹಾಗೂ ಪ್ರಧಾನವಾಗಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯವರ ಅಲಂಕೃತ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿದ್ದವು. ಕಂಚಿ ಬಾಗಿಲು, ವೀರಭದ್ರ ದೇವಾಲಯದ ಮೂಲಕ ಮೆರವಣಿಗೆ ಕನಕ ಮಂಟಪ ತಲುಪಿತು.
ಉಪವಿಭಾಗಾಧಿಕಾರಿ ಪ್ರಕಾಶ್ ಅವರನ್ನು ಅಲಂಕೃತ ಕುದುರೆಯ ಮೇಲೆ ಸಾಂಪ್ರದಾಯಿಕವಾಗಿ ಕರೆದುಕೊಂಡು ಬರಲಾಯಿತು.
ಉಪವಿಭಾಗಾಧಿಕಾರಿಗಳು ಬನ್ನಿ ವೃಕ್ಷಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ, ಅಂಬು ಕಡಿಯುವ ಮೂಲಕ ನವರಾತ್ರಿ ಹಬ್ಬಕ್ಕೆ ಅಧಿಕೃತ ತೆರೆ ಎಳೆದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಕೆ. ಸಂಗಮೇಶ್ವರ್, ಪ್ರತಿ ವರ್ಷದ ಈ ಹಬ್ಬವನ್ನು ವಿಜೃಂಭಣೆಯಿಂದ ಮಾಡುತ್ತಿದ್ದೆವು. ಆದರೆ, ಈ ಬಾರಿ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಗಿದೆ. ಹೀಗಾಗಿ, ಯಾರೂ ನೊಂದುಕೊಳ್ಳಬೇಡಿ. ಮುಂದಿನ ಬಾರಿ ವೈಭವಯುತವಾಗಿ ಎಲ್ಲರೂ ಒಟ್ಟಾಗಿ ಸೇರಿ ಹಬ್ಬ ಆಚರಿಸುವಂತೆ ಆಗಲಿ ಎಂದು ಪ್ರಾರ್ಥಿಸೋಣ ಎಂದರು.
ಉಪವಿಭಾಗಾಧಿಕಾರಿ ಪ್ರಕಾಶ್ ಮಾತನಾಡಿ, ಸಂಕಷ್ಟದ ದಿನಗಳನ್ನು ಧೈರ್ಯದಿಂದ ಎದುರಿಸಬೇಕು. ಕೊರೋನಾ ಸಮಸ್ಯೆ ಮೊದಲಿದ್ದ ಹಾಗೆ ಈಗ ಇಲ್ಲ. ಇಂತಹ ಸಂದರ್ಭದಲ್ಲಿ ಇನ್ನಷ್ಟು ಧೈರ್ಯದಿಂದ ಎದುರಿಸಿದಲ್ಲಿ ಕೊರೋನಾ ನಾಶವಾಗಿ ಹೋಗಲಿದೆ. ಎಲ್ಲವೂ ಸರಿಯಾಗಿ ಸುಖ, ಸಂತೋಷ ಹಾಗೂ ಆರೋಗ್ಯದಿಂದ ಬಾಳುವಂತಾಗಲಿ ಎಂದು ಪ್ರಾರ್ಥಿಸೋಣ ಎಂದರು.
ಇದೇ ಸಂದರ್ಭದಲ್ಲಿ ರಾವಣನ ಪ್ರತಿಕೃತಿ ದಹಿಸಿ, ಪಟಾಕಿ ಸಿಡಿಸಲಾಯಿತು.
ನೆರೆದಿದ್ದ ಸೀಮೀತ ಜನರಿಗೆ ಬನ್ನಿ ಪತ್ರೆ ವಿತರಿಸಲಾಯಿತು. ಉಳಿದಂತೆ ನಗರದ ಎಲ್ಲ ದೇವಾಲಯಗಳಿಗೆ ಬನ್ನಿ ಪತ್ರೆಯನ್ನು ತಲುಪಿಸಿ, ಅಲ್ಲಿಯೇ ಆಚರಣೆ ಮಾಡುವಂತೆ ಸೂಚಿಸಲಾಗಿತ್ತು. ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಸಹಾಯಕ ಅರ್ಚಕ ಶ್ರೀನಿವಾಸ್ ಅವರು ಎಲ್ಲ ಧಾರ್ಮಿಕ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು.
ನಗರಸಭೆ ಆಯುಕ್ತ ಮನೋಹರ್, ಲೆಕ್ಕಾಧಿಕಾರಿ ಮೊಹಮದ್ ಅಲಿ, ಆರ್’ಒ ರಾಜಕುಮಾರ್, ಅಧಿಕಾರಿಗಳಾದ ಸುಹಾಸಿನಿ, ನರಸಿಂಹ ಮೂರ್ತಿ, ಶೃತಿ, ಈಶ್ವರಪ್ಪ, ದಸರಾ ಕಾರ್ಯಕ್ರಮಗಳಲ್ಲಿ ಮುಂದಾಳತ್ವ ವಹಿಸಿದ್ದ ನರಸಿಂಹಾಚಾರ್ ಹಾಗೂ ರಮಾಕಾಂತ್, ಶಾಸಕರ ಪುತ್ರ ಗಣೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post