ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದೇಶದ ಕೃಷಿ ಮಾರುಕಟ್ಟೆಯನ್ನು ಕಬಳಿಸಲು ಹಲವಾರು ಬೃಹತ್ ಕಂಪೆನಿಗಳು ಸಾಲುಗಟ್ಟಿ ನಿಂತಿವೆ ಎಂದು ರೈತ ಮುಖಂಡ ರಾಕೇಶ್ ಟೀಕಾವತ್ ಟೀಕಿಸಿದರು.
ನಗರದಲ್ಲಿ ನಡೆದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಕೃಷಿ ಮಾರುಕಟ್ಟೆಯ ಮೇಲೆ ಗದಾಪ್ರಹಾರ ನಡೆಸಿ, ಅದನ್ನು ಕಬಳಿಸಲು ಬಹಳಷ್ಟು ಕಂಪೆನಿಗಳು ಯತ್ನಿಸುತ್ತಿದ್ದು, ಇದರ ವಿರುದ್ಧ ಹೋರಾಡಬೇಕಾದ ಅನಿವಾರ್ಯತೆಯಿದೆ ಎಂದರು.
ಕೃಷಿ ಕಾಯ್ದೆಯ ನಂತರ ಅನೇಕ ಕಾನೂನುಗಳು ಜಾರಿಗೊಳ್ಳುತ್ತಿದೆ. ಇದನ್ನು ತಡೆಯುವುದಕ್ಕೆ ರೈತರು ಬೀದಿಗಿಳಿದಿದ್ದಾರೆ. ಇದು ಮೇ ತಿಂಗಳಲ್ಲಿ ಮುಗಿಯಲಿದೆ ಎಂದು ತಿಳಿದಿದ್ದೆವು. ಆದರೆ ಈಗ ನೋಡಿದರೆ ಇದು ಅನೇಕ ತಿಂಗಳು ಅಥವಾ ವರ್ಷಗಳನ್ನೇ ತೆಗೆದುಕೊಳ್ಳಬಹುದು. ಇದರ ಹೋರಾಟಕ್ಕೆ ನಾವು ಸಿದ್ದವಾಗಿದ್ದೇವೆ. ಕನಿಷ್ಟ ಬೆಂಬಲ ಬೆಲೆಯ ಮೇಲೆ ಕಾನೂನು ರಚಿಸಿದ್ದರೆ ರೈತರ ಹೋರಾಟ ನಡೆಯುತ್ತಿರಲಿಲ್ಲ. ಹಿಂದೆಯೂ ಎಂಎಸ್’ಪಿ ಇತ್ತು, ಈಗಲೂ ಇದೆ ಹಾಗೆಯೇ, ಮುಂದೆಯೂ ಇರುತ್ತದೆ ಎಂದು ಪ್ರಧಾನಿಯವರ ಹೇಳುತ್ತಾರೆ. ಆದರೆ, ಯಾವ ರೈತನು ತನ್ನ ಬೆಳೆಗಳನ್ನ ಮಾರುಕಟ್ಟೆಗೆ ಮಾರಲು ಬರುವವನಿಗೆ ಕನಿಷ್ಠ ಬೆಲೆಗೆ ಖರೀದಿಸಬೇಕು. ಅದನ್ನು ಕಾನೂನು ಮಾಡಬೇಕೆಂಬುದು ನಮ್ಮ ಬೇಡಿಕೆ ಎಂದರು.
ಇನ್ನೋರ್ವ ಮುಖಂಡ ಯುದ್ಧವೀರ್ ಸಿಂಗ್ ಮಾತನಾಡಿ, ಕೃಷಿ ಕಾಯ್ದೆಯಿಂದ ಯುವಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ಸರ್ಕಾರದ ನೀತಿಯಿಂದ ರೈತರು ಬೀದಿ ಪಾಲಾಗುವ ಸಾಧ್ಯತೆಯಿದ್ದು, ಇದಕ್ಕಾಗಿ ನಮಗೆ ಹೋರಾಟ ಅನಿವಾರ್ಯವಾಗಿದೆ. ಇದಕ್ಕಾಗಿ ಸಂಯುಕ್ತ ಮೋರ್ಚಾದಿಂದ ಮಾರ್ಚ್ 26 ರಂದು ಭಾರತ್ ಬಂದ್’ಗೆ ಕರೆಯಲಾಗಿದೆ. ನಮ್ಮ ಹೋರಾಟ ಯಾವುದೇ ಕಾರಣಕ್ಕೂ ರಾಜಕೀಯ ಪಕ್ಷಗಳು ನಮ್ಮ ಹೋರಾಟದಲ್ಲಿ ಪಾಲ್ಗೊಳ್ಳಬಹುದು ಎಂದು ಕರೆ ನೀಡಿದರು.
ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ. ಗಂಗಾಧರ್, ಹೆಚ್.ಆರ್. ಬಸವರಾಜಪ್ಪ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post