ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರತಿ ಜಿಲ್ಲೆಯಲ್ಲಿ ಸ್ಥಳೀಯ ಭಾಷೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದತ್ತ ಗಮನ ಹರಿಸಬೇಕು ಎಂದು ನ್ಯಾಕ್ ನಿರ್ದೇಶಕ ಡಾ.ಎಸ್.ಸಿ. ಶರ್ಮಾ ಹೇಳಿದರು.
ಉನ್ನತ ಶಿಕ್ಷಣದ ಸವಾಲುಗಳು ಕುರಿತು ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.
ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವತ್ತ ಸರ್ಕಾರ ಗಮನ ಹರಿಸಬೇಕು. ದೇಶದಲ್ಲಿ ಅಂತರ್-ಶಿಸ್ತೀಯ ವಿಶ್ವವಿದ್ಯಾಲಯಗಳ ಸಂಖ್ಯೆಗಿಂತ ಬಹುಶಿಸ್ತೀಯ ವಿಶ್ವವಿದ್ಯಾಯಲಗಳ ಸಂಖ್ಯೆ ಏರಿಕೆಯಾಗಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ ಕೂಡ ಇದನ್ನೇ ಪ್ರತಿಪಾದಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯಗಳು ಕೈಗೊಳ್ಳುತ್ತಿರುವ ಸಂಶೋಧನೆಗಳ ಗುಣಮಟ್ಟ ಮತ್ತು ಪ್ರಭಾವ ಕುರಿತು ಮಾತನಾಡಿ, ಉನ್ನತ ಶಿಕ್ಷಣ ಸಂಸ್ಥೆಗಳು ಸಂಶೋಧನೆ ಮತ್ತು ಅನ್ವೇಷಣೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸಮಾಜದ ಅಗತ್ಯತೆಗಳ ಕುರಿತು ಇನ್ನೂ ಹೆಚ್ಚಿನ ಪ್ರಾಯೋಗಿಕ ಸಂಶೋಧನೆಗಳು ನಡೆಯಬೇಕು ಎಂದು ಹೇಳಿದರು.

ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಮಾತನಾಡಿ, ದೇಶದ ಉನ್ನತ ಶಿಕ್ಷಣ ವ್ಯವಸ್ಥೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ಪ್ರಮುಖವಾದದ್ದು ಸಮಗ್ರ ದಾಖಲಾತಿ ಪ್ರಮಾಣ(ಜಿಇಆರ್). ಸರ್ಕಾರಗಳು ಕೂಡ ದಾಖಲಾತಿ ಪ್ರಮಾಣ ಹೆಚ್ಚಿಸುವುದರತ್ತ ಗಮನಹರಿಸುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಹೊರತಂದಿರುವ ಹೊಸ ಶಿಕ್ಷಣ ನೀತಿ ಕೂಡ ಇದನ್ನು ಪ್ರತಿಪಾದಿಸುತ್ತಿದೆ. ವಿಶೇಷವಾಗಿ ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕರೆತರುವ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದೆ. ಕುವೆಂಪು ವಿವಿ ಇದನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದು ಹೇಳಿದರು.
ಪ್ರಸ್ತುತ ಭಾರತದ ಜಿಇಆರ್ ಶೇ. 26.3 ರಷ್ಟಿದ್ದು, 2035ರ ಹೊತ್ತಿಗೆ ಈ ಪ್ರಮಾಣವನ್ನು ಶೇ.50ಕ್ಕೆ ತಲುಪಿಸುವ ಗುರಿಯನ್ನು ಹೊಸ ಶಿಕ್ಷಣ ನೀತಿ ಹೊಂದಿದೆ. ಬ್ರೆಜಿಲ್ (51.3%), ಚೀನಾ (49.1%) ಮತ್ತಿತರ ದೇಶಗಳಿಗೆ ಹೋಲಿಸಿದರೆ ಭಾರತ ಇನ್ನೂ ಬಹುದೂರ ಸಾಗಬೇಕಿದೆ ಎಂದರು.
ವೆಬಿನಾರ್‌ನಲ್ಲಿ ಕುವೆಂಪು ವಿವಿ ಕುಲಸಚಿವ ಪ್ರೊ. ಎಸ್. ಎಸ್. ಪಾಟೀಲ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಬಿ. ಧನಂಜಯ, ಕಾಲೇಜಿನ ನ್ಯಾಕ್ ಸಂಚಾಲಕ ಡಾ. ಸಿರಾಜ್ ಅಹ್ಮದ್ ಎಸ್ ಹಾಗೂ ಇತರ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
















