ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಮ್ಮ ಸಮಾಜದಿಂದ ಕುಲವೆಂಬುದನ್ನು ತೆಗೆದು ಹಾಕಿ, ಜಾತಿ ವ್ಯವಸ್ಥೆಯಿಂದ ಹೊರ ಬರಬೇಕೆಂದು ಕನಕದಾಸರು ಸುಮಾರು 535 ವರ್ಷಗಳ ಹಿಂದೆಯೇ ಸಾರಿದ್ದರು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗ ಕುರುಬರ ಸಂಘದ ಸಂಯುಕ್ತಾಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ವಿಶ್ವಮಾನವ, ಸಂತ ಹಾಗೂ ಶ್ರೇಷ್ಟ ಕವಿ ಶ್ರೀ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ, ಕುಲದಿಂದ ಹೊರ ಬರಬೇಕು ಎಂದ ಅವರು ಹಿಂದುತ್ವದ ಮೊದಲ ಪ್ರತಿಪಾದಕರಾಗಿದ್ದರು ಎಂಬುದರಲ್ಲಿ ಸಂಶಯವಿಲ್ಲ. ಆದರೆ ಇಂದಿಗೂ ಜಾತಿ ವ್ಯವಸ್ಥೆ ಮುಂದುವರೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪ್ರಪಂಚ ಇದನ್ನು ಗೌರವಿಸುವುದಿಲ್ಲ. ಇದೇ ವ್ಯವಸ್ಥೆ ಮುಂದುವರಿದರೆ ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲದ ಹಾಗೆ ಆಗುತ್ತದೆ. ಆದ್ದರಿಂದ ನಾವುಗಳು ಕನಕದಾಸರಂತಹ ಮಹಾನ್ ಪುರುಷರ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು, ಒಟ್ಟಾಗಿ ಒಗ್ಗಟ್ಟಿನಿಂದ ಮುನ್ನಡೆಯೋಣ ಎಂದು ಕರೆ ನೀಡಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಎನ್ನುವ ಮೂಲಕ ಜಾತಿ ವ್ಯವಸ್ಥೆಯಿಂದ ಹೊರ ಬಂದು ಮಾನವ ಕುಲ ಒಂದೇ ಎಂಬ ಚಿಂತನೆ ನೀಡಿದ್ದು ಅದನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಕನಕದಾಸರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದರು.
ಕಾಗಿನೆಲೆ ಶ್ರೀಗಳು ಕನಕದಾಸರ ಜಯಂತಿಯಂದು ಎಲ್ಲರೂ ಸಕ್ರಿಯವಾಗಿ ಸರ್ಕಾರದ ಕೆಲಸಗಳನ್ನು ಮಾಡೋಣ. ಆದ್ದರಿಂದ ರಜೆ ಬೇಡವೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಇಂದು ವೀರ ಮಹಿಳೆ ಒನಕೆ ಓಬವ್ವರವರ ಜಯಂತಿ ಸಹ ಇದೆ. ಮಹಿಳಾ ಧ್ವನಿಯಾದ ಶೌರ್ಯವಂತೆ ಓಬವ್ವರವರು ಶತ್ರುಗಳ ವಿರುದ್ದ ದಿಟ್ಟತನದಿಂದ ಹೋರಾಡಿ ನಮಗೆಲ್ಲ ಮಾದರಿಯಾಗಿದ್ದಾರೆ. ಇಂತಹ ಮಹಾನ್ ಚೇತನಗಳ ವೀರತನ ಮತ್ತು ತತ್ವ ಗಳನ್ನು ಅಳವಡಿಸಿಕೊಳ್ಳೋಣ ಎಂದರು.
ಮಾಜಿ ವಿಧಾನ ಪರಿಷತ್ ಶಾಸಕ ಪ್ರಸನ್ನ ಕುಮಾರ್ ಮಾತನಾಡಿ, ದಾಸರ ತತ್ವಗಳನ್ನು ಅವಲೋಕಿಸಿ, ಅಳವಡಿಸಿಕೊಂಡು ಜಾತಿ ವ್ಯವಸ್ಥೆಯಿಂದ ಹೊರ ಬಂದು ಒಟ್ಟಾಗಿ ಹೋಗೋಣ ಎಂದು ಆಶಿಸಿದರು.
ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರನಾಯ್ಕ್, ಪಾಲಿಕೆ ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್, ಪಾಲಿಕೆ ಸದಸ್ಯರು, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್’ಪಿ ಮಿಥುನ್ ಕುಮಾರ್, ಎಡಿಸಿ ನಾಗೇಂದ್ರ ಹೊನ್ನಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post