ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ದೇಶದಲ್ಲಿ ಹೆಣ್ಣು ಮತ್ತು ಅಸ್ಪಶ್ಯರ ಧ್ವನಿ, ಭಾಷೆಗಳನ್ನು ಧಮನ ಮಾಡಲಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಪ್ರೊ.ಬಿ.ಎನ್. ಪುಟ್ಟಯ್ಯ ಹೇಳಿದರು.
ಕುವೆಂಪು ವಿವಿಯ ಕನ್ನಡ ಭಾರತಿ ವಿಭಾಗ ಬಸವ ಭವನದಲ್ಲಿ ಆಯೋಜನೆ ಮಾಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ ದೊರಕಿದ್ದರೂ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯಿಂದ ಹೆಣ್ಣುಮಕ್ಕಳ ದನಿ ಹಾಗೂ ಉಳ್ಳವರ, ವರ್ಗಗಳ ಮೇಲಾಟದಿಂದ ಶೋಷಿತರ, ಬಡವರ ದನಿಗಳು ಮುನ್ನಲೆಗೆ ಬರದೇ ಸಾಯುತ್ತಿವೆ. ಭಾಷೆ ಒಂದು ಸಮಾಜದ ಸಂಸ್ಕೃತಿ ಮತ್ತು ಜೀವನ ವಿಧಾನವೇ ಆಗಿದ್ದಾಗ ಕೇವಲ ಬಲಾಢ್ಯರ ಭಾಷೆಗೆ ನೆಲೆ ದೊರೆತರೆ ಅದು ಪರಿಪೂರ್ಣವಾಗುವುದಿಲ್ಲ. ಎಲ್ಲ ಕಾಲಗಳಲ್ಲಿಯೂ ಈ ಸಮಸ್ಯೆ ಉಲ್ಬಣವಾಗುತ್ತ ಬರುತ್ತಿರುವುದು ಭಾಷೆಗಳು ವೈವಿಧ್ಯತೆಯನ್ನೊಳಗೊಳ್ಳುವ ಅವಕಾಶದಿಂದ ವಂಚಿತವಾಗುತ್ತಿವೆ ಎಂದರು.
ಭಾಷೆ ಹಾಗೂ ಸಾಹಿತ್ಯಎರಡಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಕನ್ನಡ ಭಾಷೆಯನ್ನು ಸಾಹಿತ್ಯಕ್ಕೆ ಹೋಲಿಸಬಾರದು. ದೇಶದಲ್ಲಿ ಕನ್ನಡದ ಜೊತೆಗೆ ಬೇರೆ ಭಾಷೆಗಳೂ ಇವೆ. ಆದರೆ ಭಾಷೆ ಎಂದಿಗೂ ಅಸ್ತಿತ್ವಕ್ಕಾಗಿ ಜಗಳವಾಡಿಲ್ಲ, ಬದಲಿಗೆ ಭಾಷಿಗರು ಜಗಳವಾಡಿದ್ದಾರೆ. ಕನ್ನಡ ಸೃಜನಶೀಲ ಭಾಷೆ, ಹೊಸತನಕ್ಕೆ ಒಗ್ಗಿಕೊಳ್ಳುವ ಭಾಷೆ. ಅನಕ್ಷರಸ್ಥರಜನಪದ ನುಡಿಗಳಿಂದ ಆರಂಭವಾಗಿ ಆಧುನಿಕ ದಿನಮಾನಗಳವರೆಗೆ ಭಾಷೆ ಉಳಿದು ಬೆಳೆಯುತ್ತಿರುವ ಬಗೆಯೇ ಉತ್ತಮ ನಿದರ್ಶನ ಎಂದು ತಿಳಿಸಿದರು.
ಕುವೆಂಪು ವಿವಿ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಜನರು ಪಾಶ್ಚಿಮಾತ್ಯ ಸಂಸ್ಕೃತಿಯೆಡೆಗೆ ಆಕರ್ಷಿತರಾಗುತ್ತಿರುವುದರ ಪರಿಣಾಮವಾಗಿ ಇಂಗ್ಲೀಷ್ ಭಾಷೆ ಕನ್ನಡದ ಮೇಲೆ ಪ್ರಭಾವ ಬೀರಿದೆ. ತಂದೆ-ತಾಯಿಗಳೇ ಮಕ್ಕಳಲ್ಲಿ ಮಾತೃಭಾಷೆಯ ಬದಲಾಗಿ ಇಂಗ್ಲೀಷ್ ವ್ಯಾಮೋಹವನ್ನು ಬಿತ್ತುತ್ತಿರುವುದು ನಿಜಕ್ಕೂ ವಿಷಾದಕರ ಸಂಗತಿ ಎಂದ ಅವರು, ಭಾಷೆಗೆ ಎಂದಿಗೂ ಗಡಿ ಇಲ್ಲ. ಒಂದು ಭಾಷೆಯ ಜನ ಇನ್ನೊಂದು ಭಾಷೆಯ ನೆಲದಲ್ಲಿ ಬೇರೂರಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಭಾಷೆಯಾರಿಗೂ ಬೇಧ-ಭಾವ ಮಾಡದೇ ಎಲ್ಲರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡುತ್ತದೆ ಎಂದು ಆಭಿಪ್ರಾಯಿಸಿದರು.
ಕುಲಸಚಿವ ಎಸ್. ಎಸ್. ಪಾಟೀಲ್ ಮಾತನಾಡಿ, ಭಾಷೆ ಕೇವಲ ಸಂವಹನದ ಸಾಧನವಲ್ಲ, ಅದು ಭಾವನೆಗಳನ್ನು ಬೆಸೆಯುವ ಕೊಂಡಿ. ಮಾತೃ ಭಾಷೆಯಲ್ಲಿ ಭಾವನೆಗಳು ಪರಿಣಾಮಕಾರಿಯಾಗಿ ತಲುಪಿದಷ್ಟು ಬೇರೆ ಭಾಷೆಗಳಲ್ಲಿ ತಲುಪುವುದಿಲ್ಲ. ಆದ್ದರಿಂದಲೇ ಮಕ್ಕಳಿಗೆ ಮಾತೃ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಕೂಗು ಯಾವಾಗಲೂ ಕೇಳುತ್ತದೆ. ಹೊಸ ಶಿಕ್ಷಣ ನೀತಿ ಈ ಕೂಗಿಗೆ ಸ್ಪಂದಿಸಿ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ಪಡೆಯುವ ಅವಕಾಶ ನೀಡಿದೆಎಂದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಪಿ. ಕಣ್ಣನ್, ಕನ್ನಡ ಭಾರತಿ ನಿರ್ದೇಶಕರಾದ ಪ್ರೊ. ಕೆ. ಕೇಶವಶರ್ಮ, ಕನ್ನಡ ಭಾರತಿ ಪ್ರಾಧ್ಯಾಪಕ ಪ್ರೊ. ಜಿ. ಪ್ರಶಾಂತ ನಾಯಕ ಮಾತನಾಡಿದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಸುರಕ್ಷತಾ ಮಾರ್ಗಸೂಚಿ ಅನುಸರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉದ್ಘಾಟನಾಕಾರ್ಯಕ್ರಮದ ನಂತರಉತ್ಸವದಲ್ಲಿ ಕವಿಗೋಷ್ಟಿ, ಗೀತಗಾಯನ ಹಾಗೂ ಪ್ರಹಸನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post