ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ನಟ ಸುದೀಪ್, ಇವನ್ನು ಖಾಸಗಿ ಶಾಲೆಗಳ ಗುಣಮಟ್ಟಕ್ಕೆ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡುವ ಮೂಲಕ ಎಲ್ಲ ಸೆಲೆಬ್ರೆಟಿಗಳಿಗೆ ಮಾದರಿಯಾಗಿದ್ದಾರೆ.
ಹೌದು… ಸಾಗರ ತಾಲೂಕಿನ ಆವಿಗೆ, ಹಾಳಸಸಿ(ಹಾಲಸಸಿ) ಎಸ್.ಎನ್. ಬಡಾವಣೆ ಹಾಗೂ ಎಂಎಲ್ ಹಳ್ಳಿಯ ನಾಲ್ಕು ಸರ್ಕಾರಿ ಶಾಲೆಗಳನ್ನು ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಕಾನೂನಾತ್ಮಕವಾಗಿ ದತ್ತು ಪಡೆದುಕೊಂಡಿದ್ದು, ಅತಿ ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಗಳನ್ನು ಆರಂಭ ಮಾಡಲಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಅಧ್ಯಕ್ಷರಾದ ರಮೇಶ್ ಕಿಟ್ಟಿ, ಸುದೀಪ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಯೋಜನೆಯ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.
ಖಾಸಗಿ ಶಾಲೆಗಳಂತೆ ಅಭಿವೃದ್ಧಿ
ಶಿಕ್ಷಣ ಇಲಾಖೆಯ ನಿಯಮಾವಳಿಯಂತೆ ಈ ನಾಲ್ಕು ಶಾಲೆಯ ಶಿಕ್ಷಕರ ವೇತನ ಹೊರತುಪಡಿಸಿ ಉಳಿದ ಸಂಫೂರ್ಣ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ.
ಶಾಲಾ ಕಟ್ಟಡ ನವೀಕರಣ, ಶಿಕ್ಷಣದ ಡಿಜಿಟಲೀಕರಣ, ಉತ್ತಮ ಗುಣಮಟ್ಟದ ಪೀಠೋಪಕರಣ, ಪಾಠೋಪಕರಣ, ಬಾಲಕ-ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು, ಕ್ರೀಡಾ ಉಪಕರಣ, ದಾಖಲೆಗಳನ್ನು ಇರಿಸಲು ಲಾಕರ್ ವ್ಯವಸ್ಥೆ, ಸಮವಸ್ತ್ರ, ಮ್ಯಾಪ್, ಸುಸಜ್ಜಿತವಾದ ಅಡುಗೆ ಕೋಣೆ, ಸಿಸಿ ಕ್ಯಾಮೆರಾ, ರಂಗಮಂದಿರ ಸೇರಿದಂತೆ ಸಂಫೂರ್ಣ ಅಭಿವೃದ್ದಿ ಮಾಡಲಾಗುತ್ತದೆ.
ದೇಶಕ್ಕೊಬ್ಬ ವಿಶ್ವೇಶ್ವರಯ್ಯ, ಒಬ್ಬ ಅಬ್ದುಲ್ ಕಲಾಂರಂತಹ ಸಾಧಕರು ದೊರೆತು ಎಷ್ಟೋ ದಶಕಗಳಾಯಿತು. ನಮ್ಮ ದೇಶಕ್ಕೆ ಸಾಧಕರು ಬೇಕಾಗಿದೆ. ಇಂತಹ ಸಂದರ್ಭದಲ್ಲಿ ದೇಶಕ್ಕಾಗಿಯೇ ಕೊಡುಗೆ ನೀಡುವ ಮಕ್ಕಳನ್ನು ನಾವು ಗುರುತಿಸಿ ಅವರಿಗೆ ಸಂಪೂರ್ಣ ಸಹಕಾರ ನೀಡುವ ಅಗತ್ಯವಿದೆ ಎನ್ನುವುದು ಸುದೀಪ್ ಸರ್ ಮನದಾಳದ ಅಭಿಪ್ರಾಯ. ಹೀಗಾಗಿ, ಈ ನಾಲ್ಕು ಶಾಲೆಗಳನ್ನು ದತ್ತು ಪಡೆದಿದ್ದೇವೆ. ಈ ನಾಲ್ಕು ಶಾಲೆಗಳಿಂದ ನಾಲ್ವರು ಮಕ್ಕಳು ದೇಶಕ್ಕೆ ಕೊಡುಗೆಯಾಗಿ ದೊರೆತರೆ ನಮ್ಮ ಉದ್ದೇಶ ಸಾರ್ಥಕವಾಗುತ್ತದೆ. ಅಕ್ಷರ ಕ್ರಾಂತಿಯೊಂದಿಗೆ ನಾವು ನಮ್ಮ ದೇಶಕ್ಕೆ ನಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುವುದು ಸುದೀಪ್ ಸರ್ ಹಾಗೂ ನಮ್ಮ ಸೊಸೈಟಿಯ ಉದ್ದೇಶ.
-ರಮೇಶ್ ಕಿಟ್ಟಿ
ಅಧ್ಯಕ್ಷರು, ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್
Click below link to watch video:
https://www.facebook.com/KalpaNews/videos/1034028727032363/?t=1
ಶಾಲೆ ಮಾತ್ರವಲ್ಲ ಪೂರಕ ಸೌಕರ್ಯ ಅಭಿವೃದ್ಧಿ
ಅತ್ಯಂತ ಪ್ರಮುಖವಾಗಿ, ಆವಿಗೆಯಂತಹ ಗ್ರಾಮದ ಶಾಲೆಗೆ ಪ್ರತಿದಿನ 8 ಕಿಲೋ ಮೀಟರ್ ದೂರದ ದುರ್ಗಮ ಹಾದಿಯಲ್ಲಿ ನಡೆದುಕೊಂಡೇ ಬರುವ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ, ಇವರ ಕಷ್ಟವನ್ನು ಅರಿತ ಸೊಸೈಟಿ ಸರ್ಕಾರದೊಂದಿಗೆ ಕೈಜೋಡಿಸಿ ಈ ರಸ್ತೆಯ ಅಭಿವೃದ್ಧಿ ಮಾಡುವುದು ಹಾಗೂ ದೂರದಿಂದ ಆಗಮಿಸುವ ವಿದ್ಯಾರ್ಥಿಗಳಿಗೆ ವಾಹನದ ವ್ಯವಸ್ಥೆ ಮಾಡುವ ಯೋಜನೆಯನ್ನೂ ಸಹ ಹೊಂದಿರುವುದು ನಿಜಕ್ಕೂ ಪ್ರಶಂಸನೀಯ.
ವಿಶೇಷ ಅನುಮತಿಯೊಂದಿಗೆ ಅತಿಥಿ ಶಿಕ್ಷಕರ ನೇಮಕ
ಬಹಳಷ್ಟು ಹಿಂದುಳಿದಿರುವ ಸಾಗರ ತಾಲೂಕಿನ ಆವಿಗೆ ಗ್ರಾಮದಲ್ಲಿ ಶಿಕ್ಷಕರ ಕೊರತೆಯಿದ್ದು ಇದು ಸದಾ ಕಾಲ ಇಲ್ಲಿನ ಸಮಸ್ಯೆಯಾಗಿದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಲಾಗಿದೆ. ಸರ್ಕಾರದಿಂದ ವಿಶೇಷ ಅನುಮತಿ ಪಡೆದುಕೊಂಡು ಸೊಸೈಟಿ ವೆಚ್ಚದಲ್ಲಿ ಅತಿಥಿ ಉಪನ್ಯಾಸಕರನ್ನು ಆ ಶಾಲೆಗೆ ಕಳುಹಿಸಿ, ಅವರಿಗೆ ಅಗತ್ಯವಿರುವ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿಕೊಂಡುವಂತಹ ಯೋಜನೆ ಹಾಕಿಕೊಳ್ಳಲಾಗಿದೆ.
ಸಂಪೂರ್ಣ ಕಾನೂನಾತ್ಮಕವಾಗಿ ದತ್ತು
ಇನ್ನು, ಈ ನಾಲ್ಕು ಶಾಲೆಗಳ ಕುರಿತಾಗಿ ವಿಚಾರ ತಿಳಿದುಕೊಂಡ ನಂತರ ಬಿಇಒ ಹಾಗೂ ಡಿಡಿಪಿಐ ಅವರ ಮೂಲಕ ಸರ್ಕಾರಕ್ಕೆ ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ಸಂಪರ್ಕಿಸಿ, ಶಾಲೆಗಳನ್ನು ದತ್ತು ನೀಡುವಂತೆ ಮನವಿ ಸಲ್ಲಿಸುತ್ತದೆ. ಇದಕ್ಕೆ ಅಗತ್ಯವಾಗಿರುವ ಎಲ್ಲ ರೀತಿಯ ದಾಖಲಾತಿಗಳನ್ನು ಸಲ್ಲಿಸಿ, ಅನುಮತಿ ಪಡೆದುಕೊಂಡಿದೆ.
ವೆಚ್ಚ ಎಷ್ಟು?
ನಾಲ್ಕು ಶಾಲೆಗಳ ಅಭಿವೃದ್ಧಿಗೆ ಮೊದಲ ಹಂತದಲ್ಲಿ 30 ಲಕ್ಷ ರೂ.ಗಳ ಯೋಜನೆಯನ್ನು ರೂಪಿಸಿಕೊಂಡಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ. ಆನಂತರ ಹಂತ ಹಂತವಾಗಿ ಈ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತದೆ.
ಸೊಸೈಟಿ ಆಯ್ದುಕೊಂಡಿರುವ ಶಾಲೆಗಳ ಪ್ರದೇಶ ಹೇಗಿದೆ ಗೊತ್ತಾ? ಸ್ಥಳ ಭೇಟಿ ಮಾಡಿದ ತಂಡದ ಮಾತಲ್ಲೇ ಕೇಳಿ:
ಅವಿಗೆ ಹಳ್ಳಿ ಸಾಗರದಿಂದ 49 ಕಿಲೋ ಮೀಟರ್ ದೂರದಲ್ಲಿದೆ. ವಿಶೇಷ ಹಾಗೂ ವಿಚಿತ್ರ ಅಂದರೆ ಈ ಶಾಲೆ ಇರುವುದು ದಟ್ಟ ಕಾಡಿನ ಮಧ್ಯೆ. ಕಾಡಿನಲ್ಲಿ ವಾಸವಿರೋ ಗುಡ್ಡಗಾಡಿನ ಕುಣಬಿ ಜನಾಂಗದವರ ಮಕ್ಕಳಿಗಾಗಿ ಸರ್ಕಾರ ಶಾಲೆ ಕಟ್ಟಿಸಿದೆ ಅದಕ್ಕೆ ಮುಖ್ಯೋಪಾಧ್ಯರನ್ನು ನೇಮಿಸಿದೆ. ಆದರೆ ಮಕ್ಕಳಿಗೆ ಪಾಠ ಮಾಡುವವರೇ ಇಲ್ಲ.
ಇಡೀ ಊರಿನಲ್ಲಿ ಹುಡುಕಿದರೆ ನಿಮಗೆ ಸಿಗೋದು ಮೂವರು ವಿದ್ಯಾವಂತರು ಅಷ್ಟೇ. ಒಬ್ಬರು ಡಿಗ್ರಿ, ಇನ್ನಿಬ್ಬರು ಪಿಯುಸಿ. ಈ ಮೂವರಲ್ಲಿ ಒಬ್ಬರು ಮಕ್ಕಳ ಪಾಲಿಗೆ ಟೀಚರ್. ಇನ್ನು ಆಶ್ಚರ್ಯ ತರಿಸೋ ಸಂಗತಿ ಅಂದರೆ ಇಲ್ಲಿ ಮಕ್ಕಳು ಪ್ರತಿ ನಿತ್ಯ 8 ಕಿಲೋ ಮೀಟರ್ ಕಾಲ್ನಡಿಯಲ್ಲಿ ಪ್ರಯಾಣ ಮಾಡಿ ಶಾಲೆಗೆ ಕಲಿಯಲು ಹೋಗುತ್ತಾರೆ. ಈ ಎಲ್ಲಾ ವಿಚಾರ ತಿಳಿದು ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿಯಿಂದ ಸ್ಥಳಕ್ಕೆ ಭೇಟಿ ಕೊಟ್ಟೆವು.
ಸಾಗರದಿಂದ ಸುಮಾರು 38 ಕಿಲೋ ನಮ್ಮ ಕಾರಿನಲ್ಲಿ ನಂತರ 8 ಕಿಲೋ ಅಲ್ಲಿಯ ಸ್ಥಳೀಯ ವಾಹನದಲ್ಲಿ ನಂತರ 3 ಕಿಲೋ ಕಾಲ್ನಡಿಗೆಯಲ್ಲಿ ಆವಿಗೆ ಸ್ಥಳಕ್ಕೆ ತಲುಪಿದೆವು. ನೋಡಿದ ನಮಗೆ ಅನ್ನಿಸಿದ್ದು ಮಕ್ಕ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಬೇಕೆಂದು. ಹಾಗಾಗಿ ಸದ್ಯ ಶಾಲೆಯನ್ನ ದತ್ತು ಪಡೆದಿದ್ದು ಈಗ ಶಾಲೆಯ ಅಭಿವೃದ್ದಿ ಜೊತೆಗೆ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರ ವ್ಯವಸ್ಥೆ ಮಾಡುವ ಆಲೋಚನೆಯಲ್ಲಿದ್ದೇವೆ. ಇಷ್ಟು ದಿನಗಳಲ್ಲಿ ದತ್ತು ಪಡೆದ ಶಾಲೆಗಳ ಪೈಕಿ ಈ ಶಾಲೆ ವಿಚಿತ್ರ ಹಾಗೂ ವಿಶೇಷ ಎನ್ನಿಸಿದೆ.
-ಕಿಚ್ಚ ಸುದೀಪ್ ಚಾರಿಟೆಬಲ್ ಸೊಸೈಟಿ ಸದಸ್ಯರು
Get In Touch With Us info@kalpa.news Whatsapp: 9481252093
Discussion about this post