ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು/ಶಿವಮೊಗ್ಗ: ನಗರದಿಂದ 13 ಕಿಮೀ ದೂರದಲ್ಲಿರುವ ಮುದ್ದಿನಕೊಪ್ಪ ಟ್ರೀಪಾರ್ಕ್’ನ್ನು ದೇಶದಲ್ಲೇ ಮಾದರಿ ಹಸಿರುತಾಣವನ್ನಾಗಿ ಅಭಿವೃದ್ಧಿಪಡಿಸುವ ಮಹತ್ವದ ಪ್ರಸ್ತಾವನೆಯೊಂದು ಇಂದು ಸಲ್ಲಿಕೆಯಾಗಿದೆ.
ವಿಧಾನಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅರಣ್ಯ ಮತ್ತು ಪರಿಸರ ಜೀವಿ ಶಾಸ್ತ್ರ ಸಚಿವ ಆನಂದ ಸಿಂಗ್ ಅವರೊಂದಿಗೆ ಈ ಕುರಿತಂತೆ ಮಹತ್ವ ಸಭೆಯನ್ನು ಇಂದು ಮುಂಜಾನೆ ನಡೆಸಿದ್ದು, ವಿಶೇಷ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಈಶ್ವರಪ್ಪ, ಶಿವಮೊಗ್ಗ ನಗರದ ಕೇಂದ್ರದಿಂದ ಕೇವಲ 13 ಕಿಮೀ ದೂರ ಇರುವ ಮುದ್ದಿನಕೊಪ್ಪ ಟ್ರೀ ಪಾರ್ಕ್ ಅನ್ನು, ವಿಶೇಷವಾಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಈ ಪತ್ರದೊಂದಿಗೆ ಸಚಿವರಿಗೆ ಸಲ್ಲಿಸಲಾಗಿದೆ. ಪ್ರಸ್ತಾವನೆಯಲ್ಲಿರುವ ಯೋಜನೆಗಳು, ಪರಿಸರ ಸಂಬಂಧಿತ ಸತ್ಪರಿಣಾಮಗಳ ಜೊತೆಗೆ, ಶಿವಮೊಗ್ಗ ಜಿಲ್ಲೆಗೆ ಹಲವು ರೀತಿಯಿಂದ ಉದ್ಯೋಗ ಸೃಷ್ಟಿಸಿಕೊಡುವುದು ಅಲ್ಲದೇ, ಅನೇಕ ಆರ್ಥಿಕ ಲಾಭ ತರುವ ಆಯಾಮಗಳನ್ನು ಹೊಂದಿರುವುದನ್ನು ತಾವು ಮನಗಾಣಬಹುದು ಎಂದರು.
ಪ್ರಸ್ತಾವಿತ ಯೋಜನೆ, ಶಿವಮೊಗ್ಗ ಜಿಲ್ಲೆಯ ಸಮಸ್ತ ವಯೋಮಾನದ ವಿದ್ಯಾರ್ಥಿಗಳಿಗೆ, ರೈತರಿಗೆ, ಜನರಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಪ್ರವಾಸೋದ್ಯಮ ಹೆಚ್ಚಿಸುವ, ಪಶ್ಚಿಮಘಟ್ಟ ಅರಿಯುವ, ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ದೊರಕುವ, ಜೇನು ಹಾಗು ಚಿಟ್ಟೆಗಳ ಬಗ್ಗೆ ಮಾಹಿತಿ ಪಡೆಯುವ, ಅರಣ್ಯೋತ್ಪನ್ನಗಳ ಬಗ್ಗೆ ಮಾಹಿತಿ ದೊರಕುವ, ಸರ್ಕಾರ ಪರಿಸರದ ಬಗ್ಗೆ ಜನರಿಗೆ ಮನಮುಟ್ಟುವಂತೆ ತಲುಪಿಸುವ ವ್ಯವಸ್ಥೆ ಹೊಂದಬಹುದಾದಂತಹ, ಹಲವು ಆಯಾಮಗಳನ್ನು ಹೊಂದಿದ ಯೋಜನೆಯಾಗಿದೆ ಎಂದರು.
ಮುದ್ದಿನಕೊಪ್ಪ ಟ್ರೀ ಪಾರ್ಕ್ ಪ್ರಸ್ತಾವಿತ ಯೋಜನೆದಿನೇ ದಿನೇ ನಮ್ಮ ಪರಿಸರ/ಅರಣ್ಯದ ಮೇಲಾಗುತ್ತಿರುವ ಪ್ರಹಾರದಿಂದ, ಪ್ರಪಂಚದ ಜನರು ಹಲವಾರು ತೊಂದರೆಗಳಿಗೆ ಒಳಗಾಗುತ್ತಿರುವುದನ್ನು ನಾವುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಣುತ್ತಿದ್ದೇವೆ. ಹನಿಹನಿಗೂಡಿದರೆ ಹಳ್ಳ ಎಂಬ ನಾಣ್ಣುಡಿಯಂತೆ, ಪ್ರಪಂಚ ಎದುರಿಸುತ್ತಿರುವ ಜಾಗತಿಕ ತಾಪಮಾನಕ್ಕೆ ನಮ್ಮ ಶಿವಮೊಗ್ಗ ನಗರದ ಯೋಗದಾನವೂ ಇರುವುದು ನಾವು ಒಪ್ಪಿಕ್ಕೊಳ್ಳಲೇಬೇಕಾಗಿರುವ ಕಟುಸತ್ಯ. ಒಂದೊಮ್ಮೆ ಮಲೆನಾಡ ಹೆಬ್ಬಾಗಿಲು ಎಂದು ಕರೆಯಲ್ಪಡುತ್ತಿದ್ದ ನಮ್ಮ ಶಿವಮೊಗ್ಗ, ದಿನೇದಿನೇ ತನ್ನ ಹಸಿರನ್ನು ಕಳೆದುಕೊಂಡು ತನ್ನ ನೆಲ, ಜಲ ಮತ್ತು ವಾಯುಮಾಲಿನ್ಯ ಹೆಚ್ಚಿಸಿಕೊಂಡಿರುವುದು, ಅತ್ಯಂತ ಕಳವಳಕಾರಿಯಾದ ವಿಷಯ ಎಂದರು.
ಪ್ರಸ್ತಾವಿತ ಯೋಜನೆಯನ್ನು, ಉದ್ದೇಶಿತ ಶಿವಮೊಗ್ಗೆಯ ಮುದ್ದಿನಕೊಪ್ಪ ಟ್ರೀ ಪಾರ್ಕ್‌ನಲ್ಲಿ ಮೊದಲು ಅನುಷ್ಠಾನಗೊಳಿಸಿ ನಂತರ ಉಳಿದ ಜಿಲ್ಲೆಗಳಲ್ಲೂ ಇದೇ ರೀತಿಯ ಯೋಜನೆ ಅನುಷ್ಠಾನಗೊಳಿಸಬಹುದು. ಜನರ, ನಗರದ, ರಾಜ್ಯದ ಹಾಗೂ ದೇಶದ ಜನರಿಗೆ ಒಳಿತಾಗುವ ಹಾಗು ಗರಿಮೆ ಹೆಚ್ಚಿಸುವ ಈ ಯೋಜನೆಯನ್ನು ತಾವು ಅನುಷ್ಠಾನಗೊಳಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದರು.
ಪ್ರಸ್ತಾವನೆ ಸಲ್ಲಿಕೆ ಸಂದರ್ಭದಲ್ಲಿ ಉತ್ತಿಷ್ಠ ಭಾರತ, ಮಲೆನಾಡು ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ, ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರೋಪಕಾರಮ್ ಶಿವಮೊಗ್ಗ, ಜೆಸಿಐ ಶಿವಮೊಗ್ಗ, ವಿವೇಕ್, ಶಿವಮೊಗ್ಗ ರೋಟರಿ ಪೂರ್ವ, ಪಿ.ವಿ. ಸಿಂಧು ಶಟಲ್ ಸ್ನೇಹಿತರ ಬಳ, ಎಫ್ ಬ್ಲಾಕ್ ಗೋಪಾಲಗೌಡ ಬಡಾವಣೆ, ಗೋಪಾಳ ಗೌಡ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಚೈತನ್ಯ ರೂರಲ್ ಡೆವಲಪ್ಮೆಂಟ್ ಸೊಸೈಟಿ, ಗ್ರೀನ್ ಲೈವ್ಸ್, ಗ್ರೋಗ್ರೀನ್, ಸೈಕಲ್ ಕ್ಲಬ್, ಶಬ್ಧ, ಶಿವಮೊಗ್ಗ ಹಾಗೂ ಇನ್ನಿತರ ಪರಿಸರ ಹಾಗೂ ಸಾಮಾಜಿಕ ಕಳಕಳಿ ಹೊಂದಿದ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಅಪರ ಮುಖ್ಯ ಕಾರ್ಯದರ್ಶಿಗಳಾದ ಸಂದೀಪ ದವೆ, ಸುಮಿತ್ರ ಬಿಜ್ಜೂರ ಕಾರ್ಯದರ್ಶಿಗಳು ಮತ್ತು ಪ್ರಕಾಶ್ ಜೊಡಿಯಾಕ್ ಪರಿಸರವಾದಿಗಳು, ಶಿವಮೊಗ್ಗ ನಂದನ, ಹಿರಿಯ ಛಾಯಾಗ್ರಾಹಕರು ಪರಿಸರವಾದಿಳು, ಸತೀಶ್ ಕುಮಾರ ಎಸ್.ಎಸ್. ಪರಿಸರವಾದಿಗಳೂ ಕೂಡ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post