ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಗರ: ಸಿಗಂಧೂರು ವಿವಾದವನ್ನು ಈಡಿಗರ ಸಂಘದ ಹೆಸರಿನಲ್ಲಿ ಕಾಂಗ್ರೆಸ್ಸೀಕರಣ ಮಾಡಲಾಗುತ್ತಿದೆ ಎಂದು ಎಂಎಸ್’ಐಎಲ್ ಅಧ್ಯಕ್ಷ, ಶಾಸಕ ಎಚ್. ಹಾಲಪ್ಪ ವಾಗ್ದಾಳಿ ನಡೆಸಿದ್ದಾರೆ.
ವರದಹಳ್ಳಿ ರಸ್ತೆಯಲ್ಲಿರುವ ಈಡಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಸಿಗಂಧೂರು ವಿವಾದದ ಸತ್ಯ ಸಂಗತಿಗಳನ್ನು ತಿಳಿಸಲು ಈಡಿಗ ಸಮಾಜದ ಪ್ರಮುಖರ ಸಭೆ ನಡೆಸಿ ಅವರು ಮಾತನಾಡಿದರು.ಸಿಗಂಧೂರ ದೇವಸ್ಥಾನವನ್ನು ಸರ್ಕಾರ ಯಾವುದೇ ಕಾರಣಕ್ಕೂ ಮುಜರಾಯಿಗೆ ಸೇರಿಸುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೂ ಸಹ ಕೆಲ ಅವಕಾಶವಾದಿಗಳು ಸಮಾಜದಲ್ಲಿ ಗೊಂದಲ ಸೃಷ್ಟಿಸಲು, ಧರ್ಮದರ್ಶಿಗಳಾದ ಡಾ.ರಾಮಪ್ಪನವರ ಮುಗ್ದತೆಯನ್ನು ಉಪಯೋಗಿಸಿಕೊಂಡು ತಮ್ಮ ಬೆಳೆ ಬೇಯಿಸಿಕೊಂಡು, ಅಸ್ತಿತ್ವ ಉಳಿಸಿಕೊಳ್ಳುವ ಹುನ್ನಾರ ನಡೆಸುತ್ತಿದಾರೆ ಎಂದು ಕಿಡಿ ಕಾರಿದರು.
ಸಿಗಂಧೂರು ವಿವಾದವನ್ನು ಈಡಿಗರ ಸಂಘದ ಹೆಸರಿನಲ್ಲಿ ದುರುಪಯೋಗ ಪಡೆಸಿಕೊಂಡು ಕಾಂಗ್ರೆಸ್ಸಿಕರಣ ಮಾಡುತ್ತಿದ್ದಾರೆ. ದೇವಸ್ಥಾನದಲ್ಲಿ ನಡೆದ ಹಲವು ಬಿನ್ನಮತದ ಘಟನೆಗಳನ್ನು ಜಿಲ್ಲಾಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ, ನಂತರ ಸಲಹಾ ಸಮಿತಿ ರಚಿಸಿದ್ದಾರೆ ಹೊರತು ಇದರಲ್ಲಿ ನಾನು ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದರು.
ರಾಮಪ್ಪನವರನ್ನು ಹಾಗೂ ಶೇಷಗಿರಿ ಭಟ್ಟರನ್ನು ಉಳಿಸಿಕೊಂಡು ಯಾವುದೇ ತೀರ್ಮಾನ ಕೈಗೊಳ್ಳಬೇಕು ಎಂಬುದು ನನ್ನ ನಿಲುವು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ದೇವಸ್ಥಾನದ ಹೆಸರಲ್ಲಿ ಅಪಪ್ರಚಾರ, ಸಮಾಜದಲ್ಲಿ ಗೊಂದಲ ಉಂಟುಮಾಡುತ್ತಿರುವ ಜನರನ್ನು ಸಿಗಂದೂರು ದೇವಿಯೇ ನೋಡಿಕೊಳ್ಳುತ್ತಾಳೆ ಎಂದರು.
ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಬೇಗುವಳ್ಳಿ ಸತೀಶ್, ರಾಜಶೇಖರ್ ಗಾಳಿಪುರ, ಚೇತನರಾಜ್ ಕಣ್ಣೂರು, ಸುರೇಶ್ ಸ್ವಾಮಿರಾವ್, ದೇವೇಂದ್ರಪ್ಪ ಯಲಕುಂದ್ಲಿ, ಸುಬ್ರಹ್ಮಣ್ಯ, ಸುವರ್ಣ ಟೇಕಪ್ಪ, ಸವಿತಾ ನಟರಾಜ್, ಕಲ್ಸೆ ಚಂದ್ರಪ್ಪ, ಗಂಗಮ್ಮ, ಕೊಟ್ರಪ್ಪ ನೆದರವಳ್ಳಿ, ಹಾಗೂ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post