ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2020-21ನೆಯ ಸಾಲಿನಿಂದ ಅನ್ವಯವಾಗುವಂತೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಏರಿಕೆ ಮಾಡಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವ ಆಯುಕ್ತ ಚಿದಾನಂದ ವಟಾರೆ ಅವರು, ಶಿವಮೊಗ್ಗ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 2002ರ ಏಪ್ರಿಲ್ ಮಾಹೆಯಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ದತಿ ಅನುಷ್ಠಾನದಲ್ಲಿದೆ. ಕರ್ನಾಟಕ ಪೌರ ನಿಗಮಗಳ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ತೆರಿಗೆಯನ್ನು ಕನಿಷ್ಟ ಶೇ.15ರಿಂದ 30ರವರೆಗೆ ಹೆಚ್ಚಿಸುವುದು ಪದ್ಧತಿಯಾಗಿದೆ ಎಂದಿದ್ದಾರೆ.
ಅಂತೆಯೇ ಹಿಂದಿನ ನಾಲ್ಕು ಬ್ಲಾಕ್‌ಗಳ ಅವಧಿಯಲ್ಲಿ ಅಂದರೆ 2008-09, 2011-12, 2014-15 ಮತ್ತು 2017-18ನೇ ಸಾಲುಗಳಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗಿದೆ. ಈ ಕಾಯ್ದೆಯನ್ವಯ 2020-21ನೇ ಸಾಲಿನಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಆಸ್ತಿ ತೆರಿಗೆಯನ್ನು ಶೇ.15ರಷ್ಟು ಹೆಚ್ಚಿಸಿ ಕಾರ್ಯಾನುಷ್ಠಾನಕ್ಕೆ ತರಲಾಗಿದೆ ಎಂದಿದ್ದಾರೆ.

2017ರಿಂದ 2020ರ ಮಾರ್ಚ್ ಮಾಹೆಯವರೆಗೆ ವಸತಿ ಉದ್ದೇಶದ ಕಟ್ಟಡಗಳಿಗೆ ಶೇ.20, ವಾಣಿಜ್ಯ ಕಟ್ಟಡಗಳಿಗೆ ಶೇ.25, ಕೈಗಾರಿಕಾ ಉದ್ದೇಶದ ಕಟ್ಟಡಗಳಿಗೆ ಶೇ.28 ಹಾಗೂ ಖಾಲಿ ನಿವೇಶನಗಳಿಗೆ ಶೇ.30ರಷ್ಟಿದ್ದ ಆಸ್ತಿ ತೆರಿಗೆಯನ್ನು 2020-21ನೇ ಸಾಲಿನಿಂದ ಆಸ್ತಿ ತೆರಿಗೆ ಮೇಲೆ ಶೇ.15ರಷ್ಟು ಹೆಚ್ಚಿಸಿ ಪರಿಷ್ಕೃತ ತೆರಿಗೆಯನ್ನು ಅನುಷ್ಠಾನಗೊಳಿಸಿದೆ ಎಂದು ತಿಳಿಸಿದ್ದಾರೆ.
ನಗರದ ಸರ್ವಾಂಗೀಣ ಅಭಿವೃಧ್ಧಿ ಹಾಗೂ ಪಾಲಿಕೆಯ ಸಂಪನ್ಮೂಲ ಕ್ರೋಢೀಕರಣ ದೃಷ್ಠಿಯಿಂದ 2020-21ನೇ ಸಾಲಿಗೆ ಆಸ್ತಿ ತೆರಿಗೆಯ ಮರುಪರಿಷ್ಕರಣೆ ಅವಶ್ಯವಾಗಿರುತ್ತದೆ. ಆದ್ದರಿಂದ ಆಸ್ತಿ ಮಾಲೀಕರು ಪರಿಷ್ಕರಿಸಿದ ಆಸ್ತಿ ತೆರಿಗೆಯನ್ನು ಪಾವತಿಸಿ ನಗರಪಾಲಿಕೆಯೊಂದಿಗೆ ಸಹಕರಿಸುವಂತೆ ಹಾಗೂ ಈ ಮೂಲಕ ನಗರದ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುವಂತೆ ಆಯುಕ್ತರು ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post