ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಹಲವು ಕಾರಣಗಳಿಂದ ಹೈರಾಣಾಗಿರುವ ರೈತರನ್ನು ಕಾಪಾಡಿ ಹಾಗೂ ಮಲೆನಾಡನ್ನು ಸುಸ್ಥಿರವಾಗಿ ಉಳಿಸಿಕೊಂಡು ಅಭಿವೃದ್ಧಿಗೆ ಸಹಕಾರ ನೀಡಿ ಎಂದು ತಾಲೂಕು ಪರಿಸರ ಜಾಗೃತಿ ಟ್ರಸ್ಟ್ ಮನವಿ ಮಾಡಿದೆ.
ಈ ಕುರಿತಂತೆ ತಾಲೂಕು ಪರಿಸರ ಜಾಗೃತಿ ಟ್ರಸ್ಟ್ ವತಿಯಿಂದ ತಹಶೀಲ್ದಾರ್ ಶಿವಾನಂದಪ್ಪ ರಾಣೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟ್‌ನ ಉಪಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಶಿವಮೊಗ್ಗ ಜಿಲ್ಲೆಯ ಮಲೆನಾಡು ರೈತರು ಹಲವು ಸಂಕಷ್ಟಗಳಿಗೆ ಸಿಲುಕಿದ್ದಾರೆ. ಅಡಿಕೆ ಕೊಳೆರೋಗ, ವನ್ಯಪ್ರಾಣಿಗಳಿಂದ ಬೆಳೆಹಾನಿ, ಕಾಳು ಮೆಣಸಿಗೆ ಕಟ್ಟೆ ರೋಗ, ಬೇಸಿಗೆಯಲ್ಲಿ ನೀರಿಲ್ಲ, ಕೃಷಿ ಕಾರ್ಮಿಕರ ಅಭಾವ, ಕೃಷಿ ವೆಚ್ಛ ಅತಿ ದುಬಾರಿ, ಹೈನುಗಾರಿಕೆ ಅವಕಾಶವಿಲ್ಲ, ಅತಿ ರಾಸಾಯನಿಕ ಔಷಧ ಬಳಕೆ, ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ಹಲವು ಕಾರಣಗಳಿಂದಾಗಿ ಮಲೆನಾಡಿನ ರೈತರು ಹೈರಾಣಾಗಿದ್ದಾರೆ. ಇವೆಲ್ಲವುಗಳಿಗೆ ಪರಿಹಾರ ಕಲ್ಪಿಸುವಲ್ಲಿ ಮಲೆನಾಡು ಸಮೃದ್ಧಿಯನ್ನು ಉಳಿಸಿಕೊಂಡು ಇಲ್ಲಿನ ರೈತರ ಬದುಕಿಗೆ ಬಲ ನೀಡುವ ಸುಸ್ಥಿರ ತೋಟಗಾರಿಕೆ, ಕೃಷಿ, ಅರಣ್ಯ ಅಭಿವೃದ್ಧಿ ಕುರಿತಂತೆ ಸಮಗ್ರ ಯೋಜನೆಯೊಂದನ್ನು ರೂಪಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ಪರಿಸರ ತಜ್ಞರು, ಕಾರ್ಯಕರ್ತರು, ಯಶಸ್ವಿ ಬೆಳೆಗಾರರು, ರೈತರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಾಗರದಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ಇಂತಹ ಮಲೆನಾಡು ಸುಸ್ಥಿರ ಅಭಿವೃದ್ಧಿ ಬಗ್ಗೆ ಚರ್ಚೆಯಾಗಿದ್ದು, ಶಿವಮೊಗ್ಗ ಜಿಲ್ಲೆಯ ಮಲೆನಾಡು ತಾಲೂಕುಗಳಾದ ಸಾಗರ, ಸೊರಬ, ಹೊಸನಗರ, ತೀರ್ಥಹಳ್ಳಿ ತಾಲೂಕುಗಳಲ್ಲಿ ಈ ಕಾರ್ಯ ಯೋಜನೆ ಜಾರಿಯಾಗುವಂತೆ ಮನವಿ ಸಲ್ಲಿಸಿದೆ ಎಂದರು.
ಕಾನು ಸಂರಕ್ಷಣೆ ಅಭಿವೃದ್ಧಿ, ಕೃಷಿ ತೋಟಗಾರಿಕೆ, ಜೇನು ಅಭಿವೃದ್ಧಿ, ಸೋಲಾರ್ ಸಬ್ಸಿಡಿ, ಸೋಲಾರ್ ಬೇಲಿ, ಮಂಗಗಳ ಹಾವಳಿಗೆ ಪರಿಹಾರ. ಹೈನುಗಾರಿಕೆ ಅಭಿವೃದ್ಧಿ, ಕೃಷಿ ಹೊಂಡ, ಹನಿ ನೀರಾವರಿ, ಕೆರೆಗಳ ಪುನಶ್ಚೇತನ, ಶಿವಮೊಗ್ಗ ಸ್ಪೈಸ್ ಪಾರ್ಕ್ ಪೂರಕವಾಗಿ ಸಾಗರದಲ್ಲಿ ನೆಟ್ ವರ್ಕ್ ಕೇಂದ್ರ, ಸಾಂಬಾರು ಮಂಡಳಿ, ಬಿದಿರು ಅಭಿವೃದ್ಧಿ, ಅಪ್ಪೆಮಿಡಿ ಮಾವು ಅಭಿವೃದ್ಧಿ, ರೈತರಿಗೆ ಡ್ರೆûಯರ್ ಯಂತ್ರ, ಮೆಣಸು ಅಡಿಕೆ ಮರ ನಾಶಕ್ಕೆ ಪರಿಹಾರ, ಇಂತಹ ಎಲ್ಲ ಸುಸ್ಥಿರ ಅಭಿವೃದ್ಧಿಯ ಪ್ರಾತ್ಯಕ್ಷಿಕೆಯನ್ನು ಇರುವಕ್ಕಿ ಕೃಷಿ ವಿವಿ ವ್ಯಾಪ್ತಿಯಲ್ಲಿ ನಡೆಸುವಂತೆ ಕೋರಲಾಗಿದೆ ಎಂದರು.
ದೇಶಕ್ಕೆ ಮಾದರಿ ಆಗಬಹುದಾದ ಇಂತಹ ಪೈಲಟ್ ಪ್ರಾಜೆಕ್ಟ್‌ನಿಂದ ಸುಮಾರು 5000 ರೈತ ಕುಟುಂಬಗಳು ಯೋಜನೆಯ ಫಲಾನುಭವಿಗಳಾಗುತ್ತಾರೆ. ಸುಮಾರು 20,000 ಕೃಷಿ ಕಾರ್ಮಿಕರು ಉದ್ಯೋಗ ಪಡೆಯುತ್ತಾರೆ. ಈ ಅಭಿವೃದ್ಧಿ ಪ್ಯಾಕೇಜಿಗೆ ಕೇವಲ 25 ಕೋಟಿ ರೂ. ಅಂದಾಜು ವೆಚ್ಛ ಆಗಬಹುದಾಗಿದೆ ಎಂದು ಅಂದಾಜಿಸಲಾಗಿದ್ದು. ಮಲೆನಾಡು ಸುಸ್ಥಿರ ಅಭಿವೃದ್ಧಿ ಅಜೆಂಡಾವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಜಾರಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಈ ಮಾದರಿ ಯೋಜನೆಯ ಗೌರವ ಅಧ್ಯಕ್ಷರಾಗಿ ಇರಬೇಕು. ಸಂಸದರು ಕಾರ್ಯಾಧ್ಯಕ್ಷರಾಗಿ ಇರಬೇಕು. ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಗೌರವ ಸಂಚಾಲಕರಾಗಿ ಇರಬೇಕು. ಜಿಲ್ಲಾಧಿಕಾರಿಗಳು/ಸಿಇಒ ಅವರು ಕಾರ್ಯದರ್ಶಿಗಳಾಗಿದ್ದು, 2021-22 ರಲ್ಲಿ ಈ ಎಲ್ಲಾ ಕ್ರಿಯಾ ಯೋಜನೆಗಳು ಕಾಲಮಿತಿಯಲ್ಲಿ ಜಾರಿ ಆಗಬೇಕು ಎಂಬ ಆಶಯ ಇರಿಸಿಕೊಳ್ಳಲಾಗಿದೆ. ಇದೊಂದು ಹಸಿರು-ಅಭಿವೃದ್ಧಿ ಪ್ರಸ್ತಾವನೆ. ಮಲೆನಾಡು ಅಭಿವೃದ್ಧಿ ಮಂಡಳಿ, ರಾಷ್ಟ್ರೀಯ ಬಂಬೂ ಮಿಷನ್, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ ಈ ಮಾದರಿ ಯೋಜನೆಗೆ ಅನುದಾನ ನೀಡಬೇಕು ಎಂದು ಈ ಮೂಲಕ ಮನವಿ ಮಾಡುತ್ತೇವೆ ಎಂದಿದ್ದಾರೆ.
ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸಿ.ಪಿ. ಈರೇಶ ಗೌಡ, ಮೋಹನ ಸುರಭಿ, ರಾಘವೇಂದ್ರ ಬಾಪಟ್, ರಾಜಪ್ಪ ಚಿಕ್ಕಚೌಟಿ ಇನ್ನಿತರರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post