ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಎನ್’ಆರ್ ಪುರ ರಸ್ತೆಯ ಮಂಡೇನಕೊಪ್ಪದಲ್ಲಿ ಆರಂಭಿಸಲಾಗಿರುವ ಸುರಭಿ ಗೋಶಾಲೆಯ ಗೋ ಪ್ರವೇಶೋತ್ಸವನ್ನು ನ.30 ರಂದು ಸಂಜೆ 5.53ಕ್ಕೆ ಗೋಧೂಳಿ ಮುಹೂರ್ತದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್ ತಿಳಿಸಿದರು.
ಈ ಕುರಿತಂತೆ ಮಾತನಾಡಿ, ತೀರ್ಥಹಳ್ಳಿ ತಾಲೂಕು ಬಾಳಗಾರು ಆರ್ಯ ಅಕ್ಷೋಭ್ಯ ತೀರ್ಥಮಠದ ಶ್ರೀ ರಘುಭೂಷಣ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಉಪಮೇಯರ್ ಸುರೇಖಾ ಮುರಳೀಧರ್, ಜಿಪಂ ಸದಸ್ಯೆ ಹೇಮಾವತಿ ಶಿವಲಿಂಗಪ್ಪ, ತಾಪಂ ಸದಸ್ಯ ಮುನಿರತ್ನ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್, ಗಾಯತ್ರಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಚ್.ವಿ. ಸುಬ್ರಮಣ್ಯ ಪಾಲ್ಗೊಳ್ಳಲಿದ್ದಾರೆ ಎಂದರು.
ಪ್ರಸ್ತುತ ಗೋವುಗಳ ಪಾಲನೆ ಕ್ಷೀಣಿಸುತ್ತಿದೆ. ಬೇರೆ ಬೇರೆ ಕಾರಣಗಳಿಂದಾಗಿ ಗೋವು ಸಾಕಣೆ ಕಷ್ಟವೆಂದು ಹೇಳಲಾಗುತ್ತಿದೆ. ಆದರೂ ಕೂಡ ಬ್ರಾಹ್ಮಣ ಸಂಘ ಇದಕ್ಕೆ ಮುಂದಡಿ ಇಟ್ಟಿದ್ದು, ಬೀಡಾಡಿ ದನಗಳು, ವಯಸ್ಸಾದ, ಅನಾರೋಗ್ಯಕ್ಕೆ ತುತ್ತಾದ, ಕಸಾಯಿ ಖಾನೆಗೆ ಸಾಗಾಣಿಕೆಯಾಗುವ ಗೋವುಗಳನ್ನು ತಂದು ಸಾಕಲಾಗುತ್ತಿದೆ. ಹಸುಗಳ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಗೋಶಾಲೆ ತೆರೆಯಲಾಗಿದೆ ಎಂದರು.
ಇದಕ್ಕಾಗಿ 9 ಎಕರೆ ಭೂಮಿಯನ್ನು ಗುತ್ತಿಗೆ ಪಡೆಯಲಾಗಿದೆ. ಎರಡು ಸುಸಜ್ಜಿತ ಕೊಟ್ಟಿಗೆಗಳನ್ನು ನಿರ್ಮಿಸಲಾಗಿದೆ. ಶುದ್ಧ ಗೋಮೂತ್ರ ಸಂಗ್ರಹ ಹಾಗೂ ಸಾವಯವ ಗೊಬ್ಬರ ಸಂಗ್ರಹಣೆಗೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 70 ಹಸುಗಳು ಈಗ ಇದ್ದು, ಮುಂದಿನ ದಿನಗಳಲ್ಲಿ 300 ಹಸುಗಳನ್ನು ಇಲ್ಲಿ ಪಾಲನೆ ಮಾಡುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಸುಮಾರು 2 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆ ಇದೆ ಎಂದರು.
ಗೋಸೇವೆಗೆ ಸಹಾಯ ನೀಡಬಹುದಾಗಿದ್ದು, ಶಂಕರ ಮಠ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್‌ನಲ್ಲಿ ಜಿಲ್ಲಾ ಬ್ರಾಹ್ಮಣ ಮಹಾಸಭಾ, ಖಾತೆ ಸಂಖ್ಯೆ 7452500100789901, ಐಎಫ್‌ಎಸ್‌ಸಿ ಕೆಎಆರ್‌ಬಿ0000745 ಈ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ ಎಂದರು.
ಸಮಾಜದ ಪ್ರಮುಖರಾದ ಕೆ. ಬಾಲಸುಬ್ರಹ್ಮಣ್ಯ, ಸುರೇಖಾ ಮುರಳೀಧರ್, ಕೇಶವಮೂರ್ತಿ, ಶಂಕರನಾರಾಯಣ, ಉಷಾ ಅರುಣ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post