ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವಕರಲ್ಲಿ ಸದ್ಭಾವ ಸಹಬಾಳ್ವೆ ಸಹಜೀವನದ ಪರಿಕಲ್ಪನೆಯನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವಪೂರ್ಣವಾದದ್ದು ಎಂದು ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿಗಳಾದ ಡಾ. ಪರಿಸರ ನಾಗರಾಜ್ ಹೇಳಿದರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಆಶ್ರಯದಲ್ಲಿ ಚಿಕ್ಕದಾನವಂದಿ ಗ್ರಾಮದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯುವಕರಲ್ಲಿ ಸದ್ಭಾವ ಸಹಬಾಳ್ವೆ ಸಹಜೀವನದ ಪರಿಕಲ್ಪನೆಯನ್ನು ಬೆಳೆಸುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಮಹತ್ವಪೂರ್ಣವಾದದ್ದು. ಗ್ರಾಮೀಣ ಪರಿಸರದೊಂದಿಗೆ ಬರೆಯುವ ಮೂಲಕ ಇಲ್ಲಿಯ ಕಷ್ಟ-ಸುಖಗಳನ್ನು ವಿದ್ಯಾರ್ಥಿಗಳಿಗೆ ಅರಿವು ಮಾಡಿಕೊಡುವ ಉದ್ದೇಶದಿಂದ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ನಮ್ಮ ಉದ್ದೇಶಗಳು ಉದಾತ್ತವಾಗಿ ಇದ್ದಾಗ ಉತ್ತಮ ಕಾರ್ಯಗಳು ನಮ್ಮಿಂದ ಸಾಧ್ಯವಾಗುತ್ತವೆ ಎಂದರು.
ಕಾಲೇಜಿನ ಪ್ರಾಚಾರ್ಯರಾದ ಡಾ ವೀಣಾ ಎಂ.ಕೆ. ಮಾತನಾಡಿ, ಜನಪದ ಸಂಸ್ಕೃತಿಯು ನಮ್ಮ ಜೀವಾಳವಾಗಿದೆ. ಜನಪದ ಆಚರಣೆಗಳನ್ನು ನಾವು ಅನುಸರಿಸುವ ಮೂಲಕ ಅವುಗಳನ್ನು ಉಳಿಸಿಕೊಳ್ಳುವ ಕೆಲಸ ನಮ್ಮಿಂದ ಆಗಬೇಕು. ಜಗತ್ತು ಹಿಂದೂ ಯುದ್ಧದ ತಲ್ಲಣವನ್ನು ಅನುಭವಿಸುತ್ತಿದೆ. ಇಂಥ ಸಂದರ್ಭದಲ್ಲಿ ದ್ವೇಷದ ಕಳೆಗಳನ್ನು ಕಿತ್ತೊಗೆದು ಪ್ರೀತಿಯ ಬೀಜಗಳನ್ನು ಬಿತ್ತಬೇಕು. ಯುವಜನರಲ್ಲಿ ಸಂಸ್ಕೃತಿ ಪ್ರೀತಿ ಅಭಿಮಾನ ಬೆಳೆಯ ಬೇಕಾಗಿರುವುದು ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಜಯ, ಶಿಕ್ಷಕರಾದ ಹನುಮಂತಪ್ಪ, ಪಿ. ರಾಘವೇಂದ್ರ, ವಿದ್ಯಾರ್ಥಿ ಕ್ಷೇಮದಿಂದ ಡಾ. ಶಿವಮೂರ್ತಿ ಎ., ಸಹಾಯಕ ಕುಲಸಚಿವರಾದ ಚಂದ್ರಕಾಂತ್ ಎಂ., ಉಪನ್ಯಾಸಕರಾದ ಕುಮಾರಿ ಪ್ರತಿಮಾ, ಕಿಶನ್, ಶರತ್ ಬಂಗಾರಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮ ಅಧಿಕಾರಿಗಳಾದ ಎಂ. ಪರಶುರಾಮ ಎಂ. ಸ್ವಾಗತಿಸಿ, ಡಾ. ಶುಭಾ ಮರವಂತೆ ಅವರು ಪ್ರಗತಿಯ ವರದಿಯನ್ನು ವಾಚಿಸಿದರು. ಕುಮಾರಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post