ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ನಿರ್ಧಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸ್ಪೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಗುರುವಾರ ರಾತ್ರಿ ಹುಣಸೋಡು ಕಲ್ಲುಕ್ವಾರೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದಲ್ಲಿ ಇದುವರೆಗೆ 6 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಹೈದರಾಬಾದ್‌ನಿಂದ ಆಗಮಿಸಿದ ಡೈರೆಕ್ಟರ್ ಆಫ್ ಎಕ್ಸ್‌ಪ್ರೋಸಿವ್ಸ್ ತಂಡ ಈಗಾಗಲೇ ಪ್ರಾಥಮಿಕ ತನಿಖೆಯನ್ನು ಕೈಗೊಂಡಿದೆ. ಸ್ಥಳೀಯವಾಗಿ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ತಂಡ ಘಟನೆಯ ತನಿಖೆಯನ್ನು ನಡೆಸುತ್ತಿದೆ ಎಂದಿದ್ದಾರೆ.ದುರ್ಘಟನೆಯಲ್ಲಿ ಸಾವಿಗೀಡಾದ ಮೃರ ಕುಟುಂಬಗಳಿಗೆ ಈಗಾಗಲೇ 5 ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದೆ. ಘಟನೆಯಲ್ಲಿ ಸ್ಫೋಟಕದ ಬಳಕೆ, ಅದು ಎಲ್ಲಿಂದ ಬಂತು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದರು.
ಈ ಪ್ರದೇಶದಲ್ಲಿರುವ ಎಲ್ಲಾ ಕ್ರಶರ್‌ಗಳು ಪರವಾನಿಗೆ ಪಡೆದುಕೊಂಡು ಕಾರ್ಯನಿರ್ವಹಿಸುತ್ತಿವೆ. ಆದರೆ ಇಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ಇರುವುದಿಲ್ಲ. ಇದು ಪರಿಸರ ಸೂಕ್ಷ್ಮ ಪ್ರದೇಶವಾಗಿದ್ದು, ಈ ಕುರಿತು ಸರ್ಕಾರ ಮರು ಪರಿಶೀಲನೆ ನಡೆಸಲಿದೆ ಎಂದರು.
ಘಟನೆಯ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಲಾಗಿದ್ದು, ತನಿಖೆಯ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ. ನಿಷ್ಪಕ್ಷವಾದ ತನಿಖೆಯಿಂದ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post