ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಹಲವು ಸಾಮಾಜಿಕ ಏರುಪೇರುಗಳ ನಡುವೆಯೂ ಮಹಿಳೆ ದೃಢತೆಯಿಂದ ಮುನ್ನಡೆದಿದ್ದು, ಸಮಚಿತ್ತದಿ ಎಲ್ಲರನ್ನೂ ಮುನ್ನಡೆಸುವ ಸ್ವಯಂಪ್ರಕಾಶ ಪ್ರಭೆಯೂ ಹೌದು. ಸಮಾಜವನ್ನು ಬೆಳಗುವ ನಂದಾ ದೀಪವೂ ಹೌದು ಎಂದು ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಶ್ರೀರಂಜಿನಿ ದತ್ತಾತ್ರಿ ಹೇಳಿದರು.
2021-22ನೇ ಸಾಲಿನ ಇನ್ನರ್ ವ್ಹೀಲ್ ಕ್ಲಬ್ ಶಿವಮೊಗ್ಗದ ನೂತನ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತವರ ತಂಡದವರಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಮಹಿಳೆಯ ಸ್ಪಂದನೆ, ಸ್ಪೂರ್ತಿ ಇಲ್ಲದಿದ್ದರೆ ಈ ಜಗತ್ತು ಜಡತ್ವದತ್ತ ಸಾಗುತ್ತಿತ್ತು. ಮಹಿಳೆ ಧೈರ್ಯ, ಸಾಹಸ, ಸಾಧನೆ, ಕಲ್ಪನೆ, ಕೌಶಲ್ಯ ಸಂವರ್ಧನೆ, ಆತ್ಮಸ್ಥೈರ್ಯ, ಅಮಿತ ಉತ್ಸಾಹ, ಅವಿರತ ದುಡಿಮೆಯ ಯೋಗಿನಿ ಮಾತ್ರವಲ್ಲ. ದೃಢ ಚಿತ್ತದಿ, ಸಮಚಿತ್ತದಿ ಎಲ್ಲರನ್ನೂ ಮುನ್ನಡೆಸುವ ಸ್ವಯಂಪ್ರಕಾಶ ಪ್ರಭೆಯೂ ಹೌದು. ಸಮಾಜವನ್ನು ಬೆಳಗುವ ನಂದಾ ದೀಪವೂ ಹೌದು ಎಂದರು.
ಇಂದು ಪ್ರಪಂಚದಾದ್ಯಂತ ಹಲವಾರು ಮಹಿಳಾ ಸಂಘಟನೆಗಳು ಅದರದ್ದೇ ಆದ ಧ್ಯೇಯ ಮತ್ತು ಉದ್ದೇಶದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಆದರೆ ಅಂತಾರಾಷ್ಟ್ರೀಯ ಮಟ್ಟದ ಇನ್ನರ್ ವ್ಹೀಲ್ ಸಂಸ್ಥೆ ಸ್ನೇಹ ಮತ್ತು ಸೇವೆಯೊಂದಿಗೆ 104 ದೇಶಗಳು, ಒಂದು ಲಕ್ಷಕ್ಕೂ ಹೆಚ್ಚು ಸದಸ್ಯಿನಿಯರು, 3,895 ಕ್ಕೂ ಹೆಚ್ಚು ಕ್ಲಬ್’ಗಳನ್ನು ಹೊಂದಿ 96 ವರ್ಷಗಳ ನಿರಂತರ ಪ್ರಭೆಯಾಗಿ ಹೊಮ್ಮುತ್ತಿರುವುದು ಈ ಸಂಸ್ಥೆಯ ಮಹಿಳೆಯರ ಅಂತಸತ್ವಕ್ಕೆ, ಕಾರ್ಯಕ್ಷಮತೆಗೆ ಸಾಕ್ಷಿ ಎಂದರು.
ವ್ಯಕ್ತಿಯಿಂದ ಸಮಾಜ, ಸಮಾಜದಿಂದ ವ್ಯಕ್ತಿ, ವ್ಯಕ್ತಿಯ ವಿರಾಟ್ ರೂಪವೇ ಸಮಾಜ. ಸಮಾಜದ ಹ್ರಸ್ವ ಸ್ವರೂಪವೇ ವ್ಯಕ್ತಿ. ವ್ಯಕ್ತಿಗಳಿಲ್ಲದೆ ಸಮಾಜವಿಲ್ಲ. ಹಾಗೆ ಸಮಾಜ ವ್ಯಕ್ತಿ ಕೇಂದ್ರಿತವೂ ಅಲ್ಲ. ಸಂಘಟನೆಗಳಿಗೆ ವ್ಯಕ್ತಿಗಳು ಬರುತ್ತಾರೆ ಹೋಗುತ್ತಾರೆ. ಆದರೆ ಸಂಘಟನೆ ಮುನ್ನಡೆಯುತ್ತದೆ. ಆದರೆ ನಮ್ಮ ಅವಧಿಯಲ್ಲಿ ನಡೆಸಿದ ಸಾರ್ಥಕ ಸೇವೆಯನ್ನು ಗುರುತಿಸಿ ಸಂಘಟನೆ ಸದಾ ನಮ್ಮನ್ನು ಸ್ಮರಿಸುವ ಕೆಲಸವನ್ನು ಅಧಿಕಾರ ವಹಿಸಿಕೊಂಡವರು ಮಾಡಬೇಕಾದುದು ಅತೀ ಅವಶ್ಯಕ ಎಂದು ಹೇಳಿದರು.
ಜವಾಬ್ದಾರಿ ಎನ್ನುವುದು ಹುದ್ದೆ, ಯಶಸ್ಸು, ಖ್ಯಾತಿ ಮಾತ್ರವಲ್ಲ ಸಂಸ್ಥೆಯ ಒಳಗಿರುವವರನ್ನು, ಸಮಾಜದ ಬಂಧುಗಳನ್ನು ಒಗ್ಗೂಡಿಸಿಕೊಂಡು ಹೋಗುವ ಕಲೆಯನ್ನು ತಿಳಿಸುವ ವ್ಯವಸ್ಥೆ. ಇದನ್ನು ನಿರ್ವಹಿಸುವ ಜವಾಬ್ದಾರಿ ಆ ಸಾಲಿನ ಅಧ್ಯಕ್ಷರು ಕಾರ್ಯದರ್ಶಿಯ ಮೇಲಿರುತ್ತದೆ. ನಾಯಕತ್ವ, ಸಾಮಾಜಿಕ ಕೌಶಲ್ಯ, ಸಮಾಜದಲ್ಲಿ ಸೇವೆ ನೀಡುವ ಅವಕಾಶ, ಸ್ನೇಹ ಸಂಪಾದಿಸುವ ಸದಾವಕಾಶ, ಸೇವೆ ನೀಡಿದಾಗ ಸಿಗುವ ಅದಮ್ಯ ಆನಂದ, ನಿಮ್ಮ ಸೇವೆ ಗುರುತಿಸಿ ಶ್ಲಾಘಿಸುವ ಸಮಾಜ, ನಿಮ್ಮ ಕ್ರಿಯಾಶೀಲತೆಗೆ ವೇದಿಕೆ ಇವೆಲ್ಲವೂ ಈ ಒಂದು ಅವಧಿಯಲ್ಲಿ ಸಿಗುತ್ತದೆ. ಇದೆಲ್ಲವನ್ನು ಮನದಲ್ಲಿರಿಸಿಕೊಂಡು, ಸದಸ್ಯರೊಂದಿಗೆ ಹಿತಮಿತ ಮಾತು, ಸಮಯ, ನಂಬಿಕೆ, ಸಂಬಂಧ ಇವುಗಳನ್ನು ಉಳಿಸಿಕೊಂಡು ನಿಮ್ಮ ಅವಧಿಯಲ್ಲಿ ವಿಶೇಷ ಕೆಲಸಗಳನ್ನು ಮಾಡಿ ಸಾರ್ಥಕತೆ ಅನುಭವಿಸಿರಿ ಎಂದು ಸಲಹೆ ನೀಡಿದರು.
2021-22ನೆಯ ಸಾಲಿನ ಇನ್ನರ್‌ವ್ಹೀಲ್ ಕ್ಲಬ್ ಶಿವಮೊಗ್ಗದ ನೂತನ ಅಧ್ಯಕ್ಷೆಯಾಗಿ ಛಾಯಾ ವೀರಣ್ಣ, ಕಾರ್ಯದರ್ಶಿಯಾಗಿ ದೀಪಾ ಚಂದನ್, ಉಪಾಧ್ಯಕ್ಷರಾಗಿ ಎನ್.ಜಿ. ಉಷಾ, ಸಹಕಾರ್ಯದರ್ಶಿಯಾಗಿ ಗಾಯತ್ರಿ ಸುಮತೀಂದ್ರ, ಖಜಾಂಚಿಯಾಗಿ ಶ್ರೀರಂಜಿನಿ ದತ್ತಾತ್ರಿ, ಐ.ಎಸ್.ಓ. ಆಗಿ ಸುಪ್ರಿಯಾ ಶಾಸ್ತ್ರೀ, ನೇಹಾ ಪತ್ರಿಕೆ ಸಂಪಾದಕರಾಗಿ ಯಶೋದಾ ಶೇಖರ್, ಸಿಸಿಸಿಸಿಯಾಗಿ ಲೋಕೇಶ್ವರಿ ಚೋಳ್ಕೆ, ಐಪಿಪಿಯಾಗಿ ಗಾಯಿತ್ರಿ ಪಾಟೀಲ್ ಅಧಿಕಾರ ವಹಿಸಿಕೊಂಡರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ಹೇಮಾ ಮೋಹನ್, ಸಹ ಪ್ರಾಧ್ಯಾಪಕರು, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು, ಸಿಮ್ಸ್ ಶಿವಮೊಗ್ಗ ಇವರು ಮಹಿಳೆ ಸಮಾಜ ಮುಖಿಯಾಗಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಬಗ್ಗೆ ತಿಳಿಸಿ, ಸ್ತ್ರೀ ಸಹಜ ಬಾದೆಗಳು, ಸ್ವಯಂ ದೇಹ ತಪಾಸಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಅಧ್ಯಕ್ಷರು ರೋ. ಕಿಶೋರ್ ಶೀರ್ನಾಳಿಯವರು ಕ್ಲಬ್ಬಿನ ಪತ್ರಿಕೆ ನೇಹಾ ಬಿಡುಗಡೆಗೊಳಿಸಿದರು. ಮಾಜಿ ಜಿಲ್ಲಾ ಛೇರ್‌ಮನ್ ಭಾರತೀ ಚಂದ್ರಶೇಖರ್, ಡಿಸ್ಟ್ರಿಕ್ಟ್ ಎಡಿಟರ್ ಶಬರೀ ಕಡಿದಾಳ್, ಸಮಸ್ಥೆಯ ಮಾಜಿ ಅಧ್ಯಕ್ಷರು, ಸದಸ್ಯರುತಗಳು ಉಪಸ್ಥಿತರಿದ್ದರು. ಸುಪ್ರಿಯಾ ಶಾಸ್ತ್ರೀ ನಿರೂಪಿಸಿ, ಪ್ರತಿಮಾ ನಾಯಕ್ ಪ್ರಾರ್ಥಿಸಿ, ಗಾಯಿತ್ರಿ ಪಾಟೀಲ್ ಸ್ವಾಗತಿಸಿ, ಯಶೋಧಾ ಶೇಖರ್ ಮತ್ತು ಶೈಲಾ ವೀರಭದ್ರಪ್ಪ ಅತಿಥಿಗಳನ್ನು ಪರಿಚಯಿಸಿ, ಗಾಯಿತ್ರಿ ಸುಮತೀಂದ್ರ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post