ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕನ್ನಡ ಜೀವನದ ಭಾಷೆಯಾಗಬೇಕು, ಅದು ಸಹಜ ಬದುಕಿನ ಭಾಗವಾಗಬೇಕು, ಆಗ ನಿಜವಾಗಿ ಕನ್ನಡ ಭಾಷೆ ತನ್ನತಾನೇ ಬೆಳೆಯುತ್ತಾ ಹೋಗುತ್ತದೆ. ಅದರಲ್ಲೂ ವಿಶೇಷವಾಗಿ ಯುವಕರಲ್ಲಿ ಅಂತಹ ಪ್ರಜ್ಞೆ ಮೂಡುವಂತಾಗಬೇಕು ಎಂದು ಡಾ. ನಾಗೇಶ್ ಬಿದರಗೋಡು ಅವರು ತಿಳಿಸಿದರು.
ಇಲ್ಲಿನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಡಾ. ಎಂ.ಎಸ್. ಸ್ವಾಮಿನಾಥನ್ ಸಭಾಂಗಣದಲ್ಲಿ, ಏರ್ಪಡಿಸಲಾಗಿದ್ದ 65ನೆಯ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಆಧುನಿಕ ಹಾಗೂ ಜಾಗತೀಕರಣದ ಭರಾಟೆಯಲ್ಲಿ ಇಂದಿನ ಯುವ ಪೀಳಿಗೆ ಕನ್ನಡವನ್ನು ಮರೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅದಕ್ಕೆ ನಮ್ಮ ಹಿರಿಯರು ಕನ್ನಡದ ಆಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡವನ್ನು ಓದುವ ರುಚಿಯನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು ಎಂದು ತಿಳಿಸಿದರು.
ಕನ್ನಡದ ಉತ್ಸವಗಳು ವಿಜೃಂಭಣೆ, ಆಚರಣೆಗಷ್ಟೇ ಸೀಮಿತವಾಗದೇ ವೈಚಾರಿಕತೆ ಹಾಗೂ ಅನುಸರಣೆಯಾಗುವಂತಾಗಬೇಕು. ಇಂಟರ್‌ನೆಟ್, ಮೊಬೈಲ್, ಪೇಸ್‌ಬುಕ್, ಟ್ವಿಟರ್, ಸಾಮಾಜಿಕ ಜಾಲತಾಣಗಳು ಬಂದಿರುವ ಈ ದಿನಗಳಲ್ಲಿ ಕನ್ನಡ ಸಾಹಿತ್ಯ ಕೃತಿ ಓದುವ ಸಂಸ್ಕೃತಿ ಮರೆಯಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು. ನಮ್ಮ ಮನೆಯ ಹಿರಿಯರು ಮಕ್ಕಳಿಗೆ ಓದುವ ಸಂಸ್ಕೃತಿಯನ್ನು ಬೆಳೆಯುವಂತೆ ಪ್ರೇರೇಪಿಸಬೇಕು ಎಂದು ಅವರು ತಿಳಿಸಿದರು.
ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿಗೆ 12ನೇ ಶತಮಾನದಲ್ಲೇ ಆಗಿನ ಚಿಂತಕರ ಚಾವಡಿಯ ಮೊದಲ ಸಭಾಧ್ಯಕ್ಷ ಅಲ್ಲಮ ಪ್ರಭು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕಿದೆ. ನಾವು ಅಲ್ಲಮರ ನೇತೃತ್ವದ ಸಭಾ ಮಂಟಪಗಳಲ್ಲಿ ಕನ್ನಡದಲ್ಲಿಯೇ ಚರ್ಚೆಗಳಾಗುತ್ತಿದ್ದವು ಎಂಬುದು ಗಮನಾರ್ಹ ಸಂಗತಿ. ಅಂದರೆ 12ನೇ ಶತಮಾನದಲ್ಲಿಯೇ ಕನ್ನಡ ಭಾಷೆ ಪ್ರಜಾಪ್ರಭುತ್ವ ಭಾಷೆಯಾಗಿತ್ತು ಎಂದು ಸಮಾರಂಭದ ಅಧ್ಯಕ್ಷತೆವಹಿಸಿದ್ದ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಎಂ.ಕೆ.ನಾಯ್ಕ್ ತಿಳಿಸಿದರು.

ಈ ಸಮಾರಂಭದಲ್ಲಿ ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರಾದ ಡಾ.ಆರ್. ಗಣೇಶ್ ನಾಯಕ್ ಉಪಸ್ಥಿತರಿದ್ದು, ಡಾ. ಎಂ.ಎಸ್. ನಂದೀಶ್ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಡಾ. ಹೆಚ್.ಬಿ. ಮಲ್ಲಿಕಾರ್ಜುನ ಅವರು ಸಭೆಗೆ ವಂದನಾರ್ಪಣೆ ಮಾಡಿ,ಡಾ.ಎಂ.ಸಿ. ಮಲ್ಲಿಕಾರ್ಜುನ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post