ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಕ್ಟೋಬರ್ 20ರಂದು ಬಾಗಲಕೋಟೆಯ ಚರಂತಿಮಠ ಸಮುದಾಯ ಭವನದಲ್ಲಿ ಉತ್ತರ ಕರ್ನಾಟಕದ ಸುಮಾರು ಎರಡೂವರೆ ಸಾವಿರ ಕಾರ್ಯಕರ್ತರ ಚಿಂತನ–ಮಂಥನ ಸಮಾವೇಶ ನಡೆಸಲು ಆ ಭಾಗದ ಸಾಧು ಸಂತರು ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಪಕ್ಷಾತೀತ, ಜಾತ್ಯತೀತವಾಗಿರುತ್ತದೆ. ನಾಯಕತ್ವವನ್ನು ಆ ಭಾಗದ ಸಾಧು ಸಂತರೇ ವಹಿಸಲಿದ್ದಾರೆ. ಇಲ್ಲಿ ಈ ಬ್ರಿಗೇಡ್ ಗೆ ಯಾವ ಹೆಸರು ಘೋಷಣೆ ಮಾಡಬೇಕು. ಇದರ ಮುಂದಿನ ಕಾರ್ಯಕ್ರಮಗಳೇನು ಎಂದು ಆ ಸಮಾವೇಶದಲ್ಲಿ ಘೋಷಣೆ ಮಾಡಲಾಗುವುದು ಎಂದರು.

Also read: ಅ.24-26 | ಉಡುಪಿ ಶ್ರೀಕೃಷ್ಣ ಮಠದಲ್ಲಿ ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ
ಆಗಮಿಸಿದವರ ಸಲಹೆಯನ್ನೂ ಕೂಡ ತೆಗೆದುಕೊಳ್ಳುತ್ತೇವೆ. ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದ್ದು, ಹಿಂದೆ ನಾನು ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿದಾಗ ಕೂಡ ಅದೇ ರೀತಿ ಬೆಂಬಲ ವ್ಯಕ್ತವಾಗಿತ್ತು. ಪಕ್ಷದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಅದನ್ನು ನಿಲ್ಲಿಸಿದ್ದೆ. ಆದರೆ, ನಾನು ತಪ್ಪು ಮಾಡಿದೆ ಎಂದು ಈಗ ಅನಿಸುತ್ತಿದೆ ಎಂದರು.

ಸಾವಿರಾರು ಕೋಟಿ ಆಸ್ತಿ ಕೆಲವೇ ವ್ಯಕ್ತಿಗಳ ಪಾಲಾಗಲು ಬಿಡಬಾರದು. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಈ ವರದಿ ಬಗ್ಗೆ ಗಮನಹರಿಸಲಿ ಎಂದರು.
ಹುಬ್ಬಳ್ಳಿ ಗಲಭೆಗೆ #Hubli Violence ಸಂಬಂಧಿಸಿದಂತೆ ಮುಸಲ್ಮಾನರ ಮೇಲಿರುವ ಪ್ರಕರಣವನ್ನು ರಾಜ್ಯ ಸರ್ಕಾರ ರದ್ದು ಮಾಡಬಾರದಿತ್ತು. ಮುಸ್ಲಿಮರು ಅಂದಾಕ್ಷಣ ಅವರು ಏನೂ ಮಾಡಿದರೂ ಕ್ಷಮಿಸಬೇಕು ಎಂದರೆ ಹೇಗೆ? ಪೊಲೀಸ್ ಠಾಣೆಗೆ ನುಗ್ಗಿ ಕಲ್ಲು ತೂರಾಟ ನಡೆಸಿ ಪೊಲೀಸರ ಮೇಲೆಯೇ ದಂಗೆ ಎದ್ದ 155 ಗೂಂಡಾಗಳ ಮೇಲೆ ಹಾಕಿದ ಕೇಸ್ ರದ್ದು ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಹೀಗೇ ಆದರೆ ರಾಜ್ಯ ಗೂಂಡಾ ರಾಜ್ಯವಾಗಲಿದ್ದು, ಬಾಂಗ್ಲಾ ದೇಶದ ಪರಿಸ್ಥಿತಿ ಬರುತ್ತದೆ ಎಂದರು.
ಮುಖ್ಯಮಂತ್ರಿಗಳು ಇತ್ತೀಚೆಗೆ ಭಾರಿ ದೈವಭಕ್ತರಾಗಿದ್ದಾರೆ. ಸಿದ್ಧರಾಮಯ್ಯನವರು ಇದೇ ಭಕ್ತಿಯನ್ನು ಮುಂದುವರೆಸಲಿ. ಈಗಲಾದರೂ ಅವರಿಗೆ ದೇವರ ಮೇಲೆ ಭಕ್ತಿ ಬಂದಿರುವುದು ನನಗೆ ಸಂತಸ ತಂದಿದೆ ಎಂದರು.
ದಲಿತರ ಚಾಂಪಿಯನ್ ಎಂದು ಹೇಳುವ ಅವರು 9 ವರ್ಷದ ಕೆಳಗೆ ಕಾಂತರಾಜ್ ವರದಿ ಜಾರಿಗೆ ತರಲು ನಾನು ಹಲವು ಬಾರಿ ಒತ್ತಾಯಿಸಿದ್ದರೂ ಇದುವರೆಗೂ ಜಾರಿಗೆ ತಂದಿಲ್ಲ. ಈಗ ಮುಡಾ ಹಗರಣ ಬಯಲಿಗೆ ಬಂದ ಮೇಲೆ ವರದಿ ಬಗ್ಗೆ ಮಾತನಾಡುತ್ತಿದ್ದಾರೆ. ಅ. 18ರಂದು ಜಾರಿ ಮಾಡಿಯೇ ಸಿದ್ದ ಎಂದವರು ಈಗ 25ಕ್ಕೆ ಮುಂದೂಡಿದ್ದಾರೆ. ಇದರಲ್ಲೇನೋ ಕುತಂತ್ರವಿದೆ ಎಂದರು.
ಬ್ರಿಗೇಡ್ ಸ್ಥಾಪನೆ ಹಿಂದೆ ರಾಜಕೀಯ ಉದ್ದೇಶವಿಲ್ಲ. ಅದು ರಾಜಕೀಯ ಸಂಘಟನೆಯೂ ಅಲ್ಲ, ಬ್ರಹ್ಮ ಬಂದರೂ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ಸಾಧುಸಂತರೇ ಇದರ ನಾಯಕತ್ವ ವಹಿಸುತ್ತಾರೆ ಎಂದರು.
ಸಚಿವ ನಾಗೇಂದ್ರ ಅವರಿಗೆ ಜಾಮೀನು ದೊರೆತಾಕ್ಷಣ ಅವರು ನಿರಪರಾಧಿ ಎಂದಲ್ಲ. ಕೋರ್ಟ್ ನಿರ್ದೇಶನದ ಮೇರೆಗೆ ತನಿಖೆ ನಡೆದು ಅಪರಾಧಿಗಳಿಗೆ ಶಿಕ್ಷೆ ಖಂಡಿತ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರ ಭಕ್ತರ ಬಳಗದ ಪ್ರಮುಖರಾದ ಇ. ವಿಶ್ವಾಸ್, ರಮೇಶ್ ಸರ್ಜಿಗಾರ, ಕುಬೇರಪ್ಪ, ಜಗದೀಶ್, ಮೋಹನ್ ಜಾಧವ್, ಶಂಕರ್ ನಾಯಕ್, ಬಾಲು, ಸುನಿಲ್ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 







Discussion about this post