ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಶ್ವದ ಆರೋಗ್ಯ ಕಾಪಾಡುವಲ್ಲಿ ಫಾರ್ಮಸಿಸ್ಟ್ ಪಾತ್ರ ಪ್ರಮುಖವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ಸೋಮವಾರ ಸಂಜೆ ರಾಷ್ಟ್ರೀಯ ಔಷಧ ಮಹಾವಿದ್ಯಾಲಯ ವತಿಯಿಂದ ವಿಶ್ವ ಔಷಧಿಕಾರರ ದಿನಾಚರಣೆ ಹಾಗೂ ಎನ್.ಎಸ್.ಎಸ್ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಂದ ಆರೋಗ್ಯ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯಕರ ಜಗತ್ತಿಗಾಗಿ ಫಾರ್ಮಸಿ ಪ್ರಕ್ರಿಯೆಯಲ್ಲಿ ಒಂದುಗೂಡುವ ಘೋಷ ವಾಕ್ಯದೊಂದಿಗೆ, ಪ್ರಪಂಚದಾದ್ಯಂತ ಆರೋಗ್ಯದ ಮೇಲೆ ಔಷಧಾಲಯಗಳ ಸಕಾರಾತ್ಮಕ ಪರಿಣಾಮವನ್ನು ಪ್ರದರ್ಶಿಸಲು ಮತ್ತು ವೃತ್ತಿಯ ನಡುವೆ ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದ್ದು, ಈ ಮೂಲಕ ಆರೋಗ್ಯ ಕ್ಷೇತ್ರದಲ್ಲಿನ ಅನೇಕ ಕ್ರಾಂತಿಕಾರಿ ಬದಲಾವಣೆಗಳಿಗೆ ಫಾರ್ಮಸಿ ಕ್ಷೇತ್ರ ಸಾಕ್ಷಿಯಾಗಲಿದೆ ಎಂದು ಹೇಳಿದರು.
ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಮಾತನಾಡಿ ಫಾಮರ್ಸಿ ಕಲ್ಪನೆಯ ಅರಿವು ಜನರಿಗೆ ಮೂಡಿಸುವಲ್ಲಿ ಇಂತಹ ಜಾಥಾಗಳು ಪರಿಣಾಮಕಾರಿಯಾಗಿ ನಿಲ್ಲಲಿದೆ. ಸಾರ್ವಜನಿಕವಾಗಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಫಾರ್ಮಸಿಸ್ಟ್ ಮೂಲಕ ಸಮಾಜಮುಖಿ ಚಿಂತನೆಗಳು ಹೊರಹೊಮ್ಮಲಿ ಎಂದು ಆಶಿಸಿದರು
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಸಿದ್ದಲಿಂಗಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾಲೇಜಿನ ಆವರಣದಿಂದ ಹೊರಟ ವಿದ್ಯಾರ್ಥಿಗಳ ಜಾಥಾ ಮಹಾವೀರ ವೃತ್ತ, ಗೋಪಿ ವೃತ್ತ, ಜೈಲ್ ರಸ್ತೆ, ನೆಹರು ಕ್ರೀಡಾಂಗಣ ಮೂಲಕ ಹಾದು ಕಾಲೇಜಿನ ಆವರಣದಲ್ಲಿ ಅಂತ್ಯಗೊಂಡಿತು.
Also read: ಸ್ವಾಯತ್ತತೆ ಉಳಿಸಿಕೊಳ್ಳುವುದೇ ಸರ್ಕಾರಿ ವಿವಿಗಳಿಗೆ ದೊಡ್ಡ ಸವಾಲು: ಪ್ರೊ. ಎಂ. ವೆಂಕಟೇಶ್ವರಲು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post