ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಪನ್ಯಾಸದಲ್ಲಿ ಅರಿವಿನ ಪ್ರಪಂಚವನ್ನು ವಿಸ್ತರಿಸುವ ಕಾರ್ಯ ನಿರಂತರವಾಗಿ ನಡೆಯಬೇಕಾಗಿದೆ. ಭಾಷೆ, ಸಾಹಿತ್ಯ, ಸಂಸ್ಕೃತಿ, ಪರಿಸರದಿಂದ ನಾವು ಕಲಿಯಬೇಕಾದುದು ಬಹಳಷ್ಟಿದೆ. ಪ್ರಕೃತಿ ಸತ್ಯಗಳನ್ನು ನಮಗೆ ಸಾಹಿತ್ಯದ ಪರಿಭಾಷೆಯಲ್ಲಿ ತೆರೆದು ತೋರಿಸಿದವರು ಪೂರ್ಣಚಂದ್ರ ತೇಜಸ್ವಿ ಎಂದು ಡಿವಿಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಎಚ್.ಟಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ವಿಭಾಗದ ನುಡಿ ಮಂಟಪದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ, ತೇಜಸ್ವಿ ನೆನಪು ಮತ್ತು ಎನ್.ಎಸ್.ಎಸ್. ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಕಂಪ್ಯೂಟರ್ ಪ್ರವೇಶಿಸುವುದಕ್ಕಿಂತ ಮೊದಲೇ ಹಡಗಿನಲ್ಲಿ ಕಂಪ್ಯೂಟರ್ ತರಿಸಿಕೊಂಡಿದ್ದರು. ನಿಸರ್ಗದ ನಿಗೂಢತೆಯನ್ನು ಅರಿಯುವ ಕುತೂಹಲವನ್ನು ತೇಜಸ್ವಿಯವರ ಬರಹಗಳಲ್ಲಿ ಕಾಣಬಹುದು. ವಿದ್ಯಾರ್ಥಿಗಳು ತೇಜಸ್ವಿಯವರನ್ನು ಓದಬೇಕು. ನಮ್ಮ ಸುತ್ತಮುತ್ತಲ ಪರಿಸರವನ್ನು ಪ್ರೀತಿಸುವುದು ಹೇಗೆನ್ನುವುದನ್ನು ಕಲಿಯಬೇಕು. ಸ್ಥಳೀಯ ಜ್ಞಾನ ಪರಂಪರೆಯ ಮೂಲಗಳನ್ನು ಯಾವತ್ತೂ ಉಪೇಕ್ಷಿಸಬಾರದು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಶಿವಮೊಗ್ಗ ಜಿಲ್ಲೆಗೆ ಉನ್ನತ ಸ್ಥಾನವಿದೆ. ಈಸೂರು ಹೋರಾಟದ ಕಥನವನ್ನು ನಾವು ಸದಾ ನೆನಪಿಸಿಕೊಳ್ಳಬೇಕು. ಹೋರಾಟದ ಕಿಚ್ಚು ಹೊತ್ತಿಸಿಕೊಂಡ ನಮ್ಮ ಹಿರಿಯರ ಬದುಕು ನಮಗೆ ಆದರ್ಶಪ್ರಾಯವಾದುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಡಾ. ಎಂ.ಕೆ. ವೀಣಾ ಮಾತನಾಡಿ, ಸಾಹಿತ್ಯ ನಮ್ಮ ಬದುಕಿನ ಭಾಗ. ಯಾರು ಸಾಹಿತ್ಯವನ್ನು ಪ್ರೀತಿಸುತ್ತಾರೋ ಅವರು ಜೀವನವನ್ನು ಪ್ರೀತಿಸುತ್ತಾರೆ ಎಂದೆ ಅರ್ಥ. ಜೀವನದಲ್ಲಿ ಯಾವುದಾದರೊಂದು ಆದರ್ಶವನ್ನು ನಾವು ರೂಢಿಸಿಕೊಳ್ಳಬೇಕು. ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪುಸ್ತಕದಿಂದ ಮಸ್ತಕದ ಜ್ಞಾನ ಬೆಳೆಯುತ್ತದೆ. ಉತ್ತಮ ಗ್ರಂಥಗಳು ನಮ್ಮನ್ನು ಅನುಭವಶಾಲಿಯಾಗಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ಪ್ರಾಧ್ಯಾಪಕ ಡಾ. ಕುಂದನ್ ಬಸವರಾಜ, ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ. ಎ. ಶಿವಮೂರ್ತಿ, ಕಾರ್ಯಕ್ರಮಾಧಿಕಾರಿ ಡಾ. ಶುಭಾ ಮರವಂತೆ, ಪರಶುರಾಮ, ವಿದ್ಯಾರ್ಥಿ ಪ್ರತಿನಿಧಿಗಳಾದ ಸುಚಿತ್ ಶಾಸ್ತ್ರಿ, ಕಾರ್ತಿಕ್, ಕು. ಸುಷ್ಮಾ, ಕು. ಹರ್ಷಿತಾ ಉಪಸ್ಥಿತರಿದ್ದರು.
ಸ್ವರೂಪ ಹಾಗೂ ಕು. ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಕು. ನಯನ ಪ್ರಾರ್ಥನೆ ಮಾಡಿದರು. ಸಿದ್ಧಾರೂಢ ಎಂ.ಐ ಸ್ವಾಗತಿಸಿದರು. ಕು. ಭೂಮಿಕಾ ವಂದಿಸಿದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















