ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಮೈತ್ರೇಯಿ ಆದಿತ್ಯಪ್ರಸಾದ್ |
ಒಬ್ಬ ವಿದ್ಯಾರ್ಥಿ ಇದ್ದ ಆತ ಹಳ್ಳಿಯ ಶಾಲೆಯೊಂದರಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿ, ಪ್ರೌಢಶಾಲಾ ಶಿಕ್ಷಣಕ್ಕಾಗಿ ನಗರಕ್ಕೆ ಬಂದ. ಒಮ್ಮೆ ಗಣಿತಶಾಸ್ತ್ರ #Mathematics ಬೋಧಿಸುವ ಶಿಕ್ಷಕರು ಪಾಠ ಮಾಡುತ್ತಿದ್ದಾಗ ಒಂದು ಲೆಕ್ಕದ ಕುರಿತಾಗಿ ಹೇಳುತ್ತಿದ್ದರು. ಆಗ ತರಗತಿಯಲ್ಲಿದ್ದ ಆ ವಿದ್ಯಾರ್ಥಿಯು ತನಗೆ ಸರಿಯಾಗಿ ಅರ್ಥವಾಗುತ್ತಿಲ್ಲವೆಂದು ಕೇಳಿದಾಗ ಆ ಶಿಕ್ಷಕರು ಗದರುತ್ತಲೇ “ನೀನು ಉದ್ಧಾರವಾಗುವುದಿಲ್ಲ ಬಿಡು, ನಿನಗೇನು ಅರ್ಥವಾಗೋದಿಲ್ಲ” ಎಂದಾಗ ಆ ವಿದ್ಯಾರ್ಥಿಗೆ ಒಂದು ಕ್ಷಣ ಮನಸ್ಸಿಗೆ ಬಹಳ ನೋವಾದರೂ, ಮನೆಗೆ ಬಂದ ಕೂಡಲೇ ಅಂದೇ ಒಂದು ಸಂಕಲ್ಪ ಮಾಡಿದ್ದ. ಅದೇನೆಂದರೆ “ತಾನು ಚೆನ್ನಾಗಿ ಓದಿ ಶಿಕ್ಷಕನಾಗಲೇಬೇಕು” ಎಂದು.
ಅದೊಂದು ಛಲ ಬೆಳೆದು ಚೆನ್ನಾಗಿ ಅಧ್ಯಯನ ಮಾಡಿ ವಿಜ್ಞಾನದಲ್ಲಿ #Science ಪದವಿ ಪಡೆದು ನಂತರ ರಾಸಾಯನಶಾಸ್ತ್ರ ವಿಷಯದಲ್ಲಿ ಉನ್ನತ ಅಧ್ಯಯನ ಮುಗಿಸಿದ ಆ ವಿದ್ಯಾರ್ಥಿಗೆ ಅಚ್ಚರಿ ಕಾದಿತ್ತು. ಏನೆಂದರೆ ತಾನು ಅವಮಾನಿತವಾದ ಪ್ರೌಢಶಾಲೆಯ ಆವರಣದಲ್ಲಿ ಇರುವ ಪದವಿಪೂರ್ವ ಕಾಲೇಜಿಗೇ ಉಪನ್ಯಾಸಕನಾಗಿ ಆಯ್ಕೆಯಾಗಿದ್ದ. ನಂತರ ಆತ ತನಗೆ ಈ ಸ್ಥಿತಿಗೆ ಏರಲು ಸಹಕರಿಸಿದವರ ಸ್ಮರಣೆಗಾಗಿ ಮೊದಲು ಓಡಿ ಹೋಗಿದ್ದೇ ತನ್ನ ಪ್ರೌಢಶಾಲೆಯ ಗಣಿತ ಶಿಕ್ಷಕರ ಬಳಿ. ಅವರ ಕಾಲಿಗೆರಗಿ ಕೃತಜ್ಞತೆಯ ನಮನವನ್ನೂ ಸಲ್ಲಿಸಿದ. ಆತನನ್ನು ಗುರುತು ಹಿಡಿಯದ ಶಿಕ್ಷಕರ ಬಳಿ ತಾನೇ ತನ್ನ ಪರಿಚಯ ಮಾಡಿಕೊಂಡು – “ಅಂದು ನೀವು ನನಗೆ ತರಗತಿಯಲ್ಲಿ ಹಾಗೆ ಹೇಳದೇ ಹೋಗಿದ್ದರೆ ಇಂದು ತಾನು ಈ ಸ್ಥಿತಿಗೇರಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿ ಕೃತಜ್ಞತಾ ಪೂರ್ವಕ ನಮಸ್ಕಾರ ಸಲ್ಲಿಸಲು ಬಂದಿದ್ದೇನೆ” ಎಂದು ಹೇಳಿ ಆಶೀರ್ವಾದ ಪಡೆದು ಮುಂದೆ ಹೊರಟ ವಿದ್ಯಾರ್ಥಿ, ತನ್ನ ವೃತ್ತಿ ಜೀವನದಲ್ಲಿ ಅಪಾರವಾದ ಸಾಧನೆಗೈದನು. ಅತ್ಯುತ್ತಮ ಉಪನ್ಯಾಸಕ, ರಾಸಾಯನಶಾಸ್ತ್ರದ ಲೆಜೆಂಡ್ ಅನ್ನಿಸುವ ಮಟ್ಟಿಗೆ ತಮ್ಮ ಕ್ಷೇತ್ರದಲ್ಲಿ ಮೇರು ಸಾಧನೆಗೈದನು.

ಪುಸ್ತಕದಿ ದೊರೆತರೆವು ಮಸ್ತಕದಿ ತಳೆದಮಣಿ
ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ
ವಸ್ತು ಸಾಕ್ಷಾತ್ಕಾರ ಅಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ ಮಂಕುತಿಮ್ಮ
ಎಂಬ ಡಿ.ವಿ.ಜಿ.ಯವರ ಕಗ್ಗದ ಸಾಲುಗಳು ಶಿಕ್ಷಣ ಎಂದರೆ ಕೇವಲ ಪುಸ್ತಕ ಜ್ಞಾನವಲ್ಲ. ನಮ್ಮ ಮನಸ್ಸನ್ನು ಬುದ್ಧಿಯೊಂದಿಗೆ ಸಂಸ್ಕರಿಸಬೇಕು. ನಮ್ಮ ವ್ಯಕ್ತಿತ್ವದಲ್ಲಿನ ದೋಷಗಳನ್ನು ನಾವು ಗುರುತಿಸಿ ಅವುಗಳನ್ನು ತಿದ್ದಿಕೊಳ್ಳುವಂತಹ ಮನೋಭಾವವನ್ನು ಬೆಳೆಸಬೇಕು. ಅಂತಹ ವಿನಯವಂತಿಕೆ ನಮ್ಮಲ್ಲಿರಬೇಕೇ ಹೊರತು ಅಹಂ ಭಾವವವಲ್ಲ. ಆ ಬಗೆಯ ಸಂಸ್ಕಾರವು ನಮ್ಮ ಪ್ರೊ.ಬಿ.ಎನ್.ವಿ. ಯವರಿಗೆ ಸಿಕ್ಕಿದ್ದು ಅವರ ತಂದೆಯವರಾದ ಶ್ರೀಯುತ ನಾಗಪ್ಪ ಹಾಗೂ ತಾಯಿ ಶ್ರೀಮತಿ ವೀರಮ್ಮ ಇವರಿಂದ. ಇವರು ಜನಿಸಿದ್ದು12-12-1948ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಎಂಬ ಪುಟ್ಟ ಪಟ್ಟಣದಲ್ಲಿ.
Also Read>> ರಾಜ್ಯದ ಬಡ ಜನತೆಯ ಏಳ್ಗೆಗೆ ಗ್ಯಾರಂಟಿ ಯೋಜನೆ ಸಹಕಾರಿ: ಸಚಿವ ಮಧು ಬಂಗಾರಪ್ಪ
ಚಿತ್ರದುರ್ಗದ #Chitradurga ಸರ್ಕಾರಿ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣ ಪೂರೈಸಿದ ಶ್ರೀಯುತರು ಮೈಸೂರಿನ ಮಾನಸಗಂಗೋತ್ರಿಯಲ್ಲಿ ರಾಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು 4ನೇ ರ‍್ಯಾಂಕ್ ಗಳಿಸುವುದರೊಂದಿಗೆ ಪೂರೈಸಿದರು. ನಂತರ 1971 ರಿಂದ 73ರ ವರೆಗೆ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 25-6-1973ರಿಂದ ತಮ್ಮ ಸೇವೆಯನ್ನು ಕೋಲಾರದ ಸರ್ಕಾರಿ ಕಾಲೇಜಿನಲ್ಲಿ ಆರಂಭಿಸಿ 19 ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ, ಶಿವಮೊಗ್ಗದ #Shivamogga ಪ್ರತಿಷ್ಠಿತ ಸಹ್ಯಾದ್ರಿ ಕಾಲೇಜಿನಲ್ಲಿ 23 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಂತರ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಶಿವಮೊಗ್ಗ ವಿದ್ಯಾಭಾರತಿ ಪದವಿಪೂರ್ವ ಕಾಲೇಜಿನಲ್ಲಿ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. 2009ರಲ್ಲಿ ಮಾನ್ಯ ಕೆ.ಎಸ್. ಈಶ್ವರಪ್ಪನವರ ಕನಸಿನ ಕೂಸಾದ ಪ್ರಜ್ಞಾ ಅಕಾಡೆಮಿ ಫಾರ್ ಕೆರಿಯರ್ ಎಕ್ಸಲೆನ್ಸ್ನ ಉಪಾಧ್ಯಕ್ಷರಾಗುವುದರೊಂದಿಗೆ, ಪೇಸ್ ಕಾಲೇಜಿನ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ 54 ವರ್ಷಗಳ ಸುದೀರ್ಘ ಶಿಕ್ಷಣ ಸೇವೆ ಸಲ್ಲಿಸುತ್ತಾ ಬಂದಿದ್ದು ನಿಜವಾಗಿಯೂ 75ರಲ್ಲೂ ಬತ್ತದ ಅವರ ಉತ್ಸಾಹದ ಪ್ರತೀಕ.

ಒಮ್ಮೆ ಅವರ ಸಹೋದ್ಯೋಗಿ ಮಿತ್ರರಾದ ಆಂಗ್ಲ ಉಪನ್ಯಾಸ ಮಾಡುವ ಶ್ರೀ ಪಾಟೀಲ್ ಅವರು – ನಿನಗೆ ನಿನ್ನ ಶಿಷ್ಯರು ಕರ್ನಾಟಕದೆಲ್ಲೆಡೆ ಸಿಗಬಹುದು ಆದ್ರೆ ಇಲ್ಲಿ ಸಿಗಲ್ಲ ನೋಡು ಎಂದು ಶಿಮ್ಲಾಗೆ ಹೋದಾಗ ಹೇಳಿದ್ದರಂತೆ. ಆದ್ರೆ ಅಂದೇ ವಿಮಾನ ನಿಲ್ದಾಣದಿಂದ ಹೊರಬರುವಾಗ ಒಬ್ಬ ಬಂದು “ನಮಸ್ಕಾರ ಸರ್ ನಾ ನಿಮ್ಮ ಶಿಷ್ಯ” ಎಂದಾಗ ಪಾಟೀಲ್‌ರು ಒಮ್ಮೆ ಅವಾಕ್ಕಾದರಂತೆ.
ತನ್ನ ಇಡೀ ಕುಟುಂಬವನ್ನು ಬಹು ಅಕ್ಕರೆಯಿಂದ ನೋಡಿಕೊಂಡ ಪ್ರೇಮ ಜೀವಿ. ಸಹ್ಯಾದ್ರಿಯಲ್ಲಿ ಉಪನ್ಯಾಸಕರಾದಾಗ ಬಹು ದಿನಗಳ ವರೆಗೆ ನಡೆದೇ ಹೋಗಿ ನಂತರ ಸೈಕಲ್ ಹಾಗೂ ಚೇತಕ್ ಸ್ಕೂಟರ್ ತೆಗೆದು ಕೊಂಡರಂತೆ ಎಂದು ಅವರೇ ಹೇಳಿಕೊಳ್ಳುತ್ತಾರೆ.
BACE ಪಬ್ಲಿಕೇಶನ್’ಗೆ #BACEPublication ಪಿ.ಯು ವಿದ್ಯಾರ್ಥಿಗಳಿಗಾಗಿ ರಾಸಾಯನ ಶಾಸ್ತ್ರ ಪುಸ್ತಕ ಬರೆದು ಅದು ಪ್ರಸಿದ್ಧಿಯಾಗಿದ್ದಿದು ಈಗ ಇತಿಹಾಸ. ಇವರ ಪುಸ್ತಕ ರಚನಾ ಸಮಿತಿಯಲ್ಲಿ ಖ್ಯಾತ ವಾಗ್ಮಿಗಳಾದ ಡಾ. ಗುರುರಾಜ ಕರ್ಜಗಿ ಕೂಡ ಇದ್ದರು. ಇದೇ ಪುಸ್ತಕವನ್ನು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಅನುವಾದ ಮಾಡಿಕೊಡುವಲ್ಲಿಯೂ ಸಹ ನಮ್ಮ ಬಿಎನ್ ವಿ ಯವರು ಮಹತ್ತರ ಪಾತ್ರ ವಹಿಸಿದ್ದಾರೆ.
ವ್ಯಕ್ತಿತ್ವ ವಿಕಸನ ತರಬೇತಿಯನ್ನು ತಾವು ಪಡೆದು ಹುಬ್ಬಳ್ಳಿ, ದಾಂಡೇಲಿ, ಬಿಹಾರ್ ಮೊದಲಾದ ಅನೇಕ ಪದವಿ ಕಾಲೇಜುಗಳಿಗೆ ತೆರಳಿ ಎಲ್ಲರಿಗೂ ತರಬೇತಿ ನೀಡಿ ಸೈ ಎನಿಸಿಕೊಂಡಿದ್ದರು. ಅಲ್ಲದೆ ಇಲ್ಲಿ ಇನ್ನೊಂದು ವಿಷಯ ಹೇಳಲೇಬೇಕು. ತರಗತಿಗಳಲ್ಲಿ ಇವರ ಪಾಠ ಕೇಳುವುದರಿಂದ ವಂಚಿತರಾದ ವಿದ್ಯಾರ್ಥಿಗಳಿಗೆಂದೇ ಮನೆ ಪಾಠ ಮಾಡಲು ಆರಂಭಿಸಿದರು. ಅದರಲ್ಲಿಯೂ ಕೂಡ ಬಹು ಪ್ರಸಿದ್ಧಿ ಪಡೆದು, ಕಿಟಕಿಯ ಮೇಲೆ ಕುಳಿತುಕೊಳ್ಳಲು ಜಾಗ ಸಿಕ್ಕರೂ ಸಾಕು ಇವರ ಪಾಠ ಕೇಳಲೇಬೇಕು, ಎನ್ನುವ ಮಟ್ಟಿಗೆ ದುಂಬಾಲು ಬಿದ್ದು ವಿದ್ಯಾರ್ಥಿಗಳು ಇವರ ತರಗತಿಗೆ ಬರುತ್ತಿದ್ದುದು ಇವರ ಉತ್ತಮ ಶೈಲಿಯ ಪಾಠದ ಕುರಿತಾಗಿ ತಿಳಿಸುತ್ತದೆ. ಅದೂ ಅಲ್ಲದೇ ತರಗತಿಯ ಪಾಠ ಟ್ಯೂಷನ್ ಪಾಠ ಯಾವುದರಲ್ಲೂ ಒಂದಿನಿತೂ ವ್ಯತ್ಯಾಸ ಮಾಡುತ್ತಿರಲಿಲ್ಲ.
2009ರಿಂದ ಪೇಸ್ ಕಾಲೇಜಿನಲ್ಲಿ #PACECollege ಇವರನ್ನು ನೋಡಿದಾಗ ನನಗೆ ಆಶ್ಚರ್ಯವೆನಿಸಿತು. ಏಕೆಂದರೆ ಯಾರೆಲ್ಲಾ ಬಿ.ಎನ್.ವಿ. ಅವರ ವಿದ್ಯಾರ್ಥಿಗಳಾಗಿದ್ದರೋ ಅವರ ಮಕ್ಕಳೂ ಸಹ ವಿದ್ಯಾರ್ಥಿಯಾಗಲು ಬಂದಿದ್ದರು. ಎರಡು ಮೂರು ತಲೆಮಾರುಗಳಿಗೆ ಪಾಠ ಮಾಡಿ ತಮ್ಮ ಜ್ಞಾನ ಭಂಡಾರವನ್ನು ಧಾರೆಯೆರೆದು ಸಹಸ್ರಾರು ವಿದ್ಯಾರ್ಥಿಗಳ ಔನ್ನತ್ಯಕ್ಕೆ ಕಾರಣರಾಗಿದ್ದಾರೆ. ತಮಗೆ ಗೊತ್ತಿರದ ವಿಷಯವನ್ನು ತಮ್ಮ ಕಿರಿಯ ಸಹೋದ್ಯೋಗಿಗಳ ಬಳಿ ಚರ್ಚಿಸುತ್ತಿರುವುದನ್ನು ಒಮ್ಮೆ ನಾನು ನೋಡಿದೆ. ಎಲ್ಲಿಯೂ ತಾನೊಬ್ಬ ಹಿರಿಯ ಉಪನ್ಯಾಸಕ. ತಾನು ಒಬ್ಬ ಶ್ರೇಷ್ಠ ಎನ್ನುವ ಗರ್ವ ಪಡದೆ, ತಾನು ತನ್ನ ಮಕ್ಕಳಿಗೆ ಏನೇನೋ ಹೇಳಿ ಅನ್ಯಾಯ ಮಾಡಬಾರದೆಂದು ತಿಳಿದವರ ಬಳಿ ಕೇಳುತ್ತಿದ್ದುದು ಅವರ ವಿಷಯ ವಿನಯವಂತಿಕೆಗೆ ಹಿಡಿದ ಕನ್ನಡಿ. ತಮ್ಮ ಮೃದುವಾದ ಮೆಲುದನಿ, ಯಾರಿಗೂ ಹೆಚ್ಚು ಗದರಿಸದೆ, ಸಮಾಧಾನದಿಂದ ಪಾಠ ಮಾಡುವುದಷ್ಟೇ ಅಲ್ಲ, ಯಾರು ಕೆಮಿಸ್ಟ್ರಿಯಲ್ಲಿ ಅನುತ್ತೀರ್ಣರಾಗುತ್ತಾರೋ ಅವರನ್ನು ಉತ್ತೀರ್ಣಗೊಳಿಸುವಂತೆ ವಿಶೇಷವಾಗಿ ತಯಾರು ಮಾಡುವಲ್ಲಿ ಸಿದ್ಧಹಸ್ತರು.
ತಮ್ಮ ಅನುಭವಗಳ ಸರಮಾಲೆಯನ್ನು ನಮ್ಮೆದುರುಗಿಡುವಾಗ ಧ್ಯಾನವನ್ನು ಒಬ್ಬ ವಿದ್ಯಾರ್ಥಿಗೆ ಹೇಳಿಕೊಟ್ಟು ಅದರಿಂದಲೇ ಆ ವಿದ್ಯಾರ್ಥಿ ಮುಂದೊಂದು ದಿನ ತನ್ನ ಕೆಲಸದಲ್ಲಿ ಪ್ರಮೋಷನ್ಗಳಿಸಿರುವುದನ್ನು ನಮಗೆ ತಿಳಿಸಿದಾಗ ಬರೀ ಪಾಠವಷ್ಟೇ ಅಲ್ಲದೆ ಪಠ್ಯೇತರವಾದಂತಹ ಬದುಕಿಗೆ ನೆಮ್ಮದಿ ನೀಡುವಂತಹ ಅನೇಕ ಸಂಗತಿಗಳ ವಿಚಾರಧಾರೆಯನ್ನು ಎಲ್ಲರೆದುರಿಗೆ ಹಂಚಿಕೊಂಡು ಮುಂದಿನ ಪೀಳಿಗೆಯವರು ಸಹ ಚೆನ್ನಾಗಿ ಇರಬೇಕೆಂಬ ಆಶಯ ಹೊಂದಿದ ವ್ಯಕ್ತಿತ್ವ ಇವರದು. ಹೀಗೆ ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದಲೇ ಶ್ರೇಷ್ಠರಾಗಿ ತಮ್ಮ ಸುಧೀರ್ಘ ಅವದಿಯ ಸೇವೆ ಇಂದಿಗೂ ಸಲ್ಲಿಸುತ್ತಿರುವ ಎಲ್ಲ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಿಯ ಪ್ರಾಚಾರ್ಯರಾದ ನಮ್ಮ ಬಿಎನ್‌ವಿ ಸರ್ ಅವರಿಗೆ 76ನೆಯ ವರ್ಷದ ಹುಟ್ಟುಹಬ್ಬಕ್ಕೆ ಈ ಅಕ್ಷರಗಳ ಮೂಲಕ ಶುಭಾಶಯಗಳನ್ನು ಕೋರಿ ಭಗವಂತ ಇನ್ನೂ ನೂರು ಕಾಲ ಆಯುರಾರೋಗ್ಯ ನೆಮ್ಮದಿಯನ್ನು ನೀಡುವಂತಾಗಲಿ ಎಂದು ಪ್ರಾರ್ಥಿಸುತ್ತೇನೆ.









Discussion about this post