ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತುಂಗಭದ್ರಾ ಅಭಿಯಾನವು #Tunga Bhadra Abhiyana ಪಕ್ಷಾತೀತವಾಗಿ ಆಗಬೇಕು. ಹಾಗಾಗಿ ಎಲ್ಲರೂ ಮಲಿನ ತಡೆಯುವ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯ ವಿವೇಕ್ ತ್ಯಾಗಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ, ಶಿವಮೊಗ್ಗ ಪರ್ಯಾವರಣ ಟ್ರಸ್ಟ್ನಿಂದ ನಿರ್ಮಲ ತುಂಗಭದ್ರಾ ಅಭಿಯಾನದ ಬೃಹತ್ ಜಲಜಾಗೃತಿ-ಜನಜಾಗೃತಿ ಪಾದಯಾತ್ರೆ ಅಂಗವಾಗಿ ಆಯೋಜಿಸಿದ್ದ ಪ್ರಬುದ್ಧರ ಸಭೆಯಲ್ಲಿ ಮಾತನಾಡಿದರು.
ದೇಶದಲ್ಲಿ ಹಲವು ನದಿಗಳು ಮಲಿನಗೊಂಡಿವೆ. ಅದನ್ನು ತಡೆಯುವ ಅದನ್ನು ತಡೆಯುವ ಕೆಲಸ ತುರ್ತಾಗಿ ಆಗಬೇಕಿದೆ. ದೇಶಾದ್ಯಂತ ನರ್ಮದಾ, ಯಮುನಾ ಮತ್ತು ಗಂಗಾ ನದಿಗಳ ಉಳಿವಿಗಾಗಿ ದೊಡ್ಡಮಟ್ಟದಲ್ಲಿ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ನದಿಗಳು ನಿರೀಕ್ಷೆ ಮೀರಿ ಮಲಿನವಾಗಿದ್ದು. ನಾವೆಲ್ಲರೂ ಎಚ್ಚೆತ್ತುಕೊಳ್ಳುವುದು ಅಗತ್ಯ ಎಂದರು.
ದೇಶದಲ್ಲಿ ನದಿಗಳ ಉಳಿವಿಗಾಗಿ ಹೋರಾಟಗಳು ನಡೆಯುತ್ತಿದೆ. ಅನೇಕರು ಈ ಒಂದು ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಮುಖ್ಯವಾಗಿ ಗಂಗಾ ನದಿಗಾಗಿ ಒಂದು ಹೋರಾಟ ಆರಂಭಿಸಿದ್ದೆವು. ಪ್ರತಿಭಟನೆ, ಹೋರಾಟದ ಮೂಲಕ ಜಾಗೃತಿ ಮಾಡದೆ ಜನರ ಜತೆ ಚೆರ್ಚೆ ಮಾಡಿ ಅರಿವು ಮೂಡಿಸಿದ್ದೆವು. ನಮ್ಮ ಹೋರಾಟಕ್ಕೆ ಅನೇಕ ಯುವಕರು ಬಂದಿದ್ದರು. ಗಂಗಾ ನದಿ ನಮ್ಮದೆನ್ನುವುದೇ ಜನರಿಗೆ ಗೊತ್ತಿರಲಿಲ್ಲ. ಯಮುನಾ ನದಿಗೆ ಕೂಡ ಚರಂಡಿ ನೀರು ಬಂದು ಸೇರುತ್ತಿದ್ದು, ನದಿ ಪರಿಸ್ಥಿತಿ ತುಂಬ ಕೆಟ್ಟದಾಗಿದೆ. ಅದನ್ನು ಕೂಡ ಸ್ವಚ್ಛಗೊಳಿಸುವ ಕಾರ್ಯ ನಡೆಯಬೇಕಿದೆ ಎಂದರು.
ತುಂಗಾ ನದಿ ಎಲ್ಲರಿಗಾಗಿ ಇದೆ. ನದಿಗಳ ಉಳಿವಿಗಾಗಿ ಕೇವಲ ಸರ್ಕಾರವನ್ನು ದೂಷಿಸುವುದು ಸರಿಯಲ್ಲ. ಸಾರ್ವಜನಿಕರ ಪಾತ್ರವೂ ಮಹತ್ವದ್ದಾಗಿದೆ. ನಾವು ಅಭಿಯಾನದ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಶೃಂಗೇರಿ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಚಾಲನೆ ನೀಡಿರುವುದು ಅಭಿಯಾನಕ್ಕೆ ಮತ್ತಷ್ಟು ಬಲ ಸಿಕ್ಕಿದೆ ಎಂದರು.
Also read: ಹಿಂದೂಗಳಿಗೆ ಏರ್ ಇಂಡಿಯಾ ಬಿಗ್ ನ್ಯೂಸ್ | ಹಲಾಲ್ ಆಹಾರ ಕುರಿತಾಗಿ ಮಹತ್ವದ ಘೋಷಣೆ
ತುಂಗಭದ್ರಾ ನದಿಗಾಗಿ ಮಾತ್ರ ಹೋರಾಟ ಮಾಡುತ್ತಿದ್ದು ಅಭಿಯಾನ ಇಷ್ಟೊಂದು ಯಶ್ವಸಿಯಾಗುತ್ತದೆಂದು ಭಾವಿಸಿರಲಿಲ್ಲ. ನದಿಗಳ ಉಳಿವಿಗಾಗಿ ಅಭಿಯಾನವನ್ನು, ಮತ್ತಷ್ಟು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಇದೀಗ ತುಂಗಭದ್ರ ನದಿ ಉಳಿಗಾಗಿ ಅನೇಕರು ಕೈಜೋಡಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ತುಂಗಭದ್ರಾ ಪಾದಯಾತ್ರೆಯಲ್ಲಿ ಉತ್ಸಾಹದಿಂದ ಜನರು ಭಾಗವಹಿಸುತ್ತಿರುವುದು ಶುಭದ ಸಂಕೇತ. ನಮ್ಮ ಹೋರಾಟ ಜನರಿಗೆ ತಲುಪಿಸಬೇಕು. ಅವರಿಗೆ ಅರಿವು ಮೂಡಿಸಬೇಕು ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ತುಂಗಭದ್ರಾ ನದಿ ಶುದ್ದೀಕರಣವು ರಾಷ್ಟ್ರೀಯ ಮಹತ್ವದ ಯೋಜನೆ ಆಗಬೇಕು ಎಂಬುದು ಹಲವರ ಅಪೇಕ್ಷೆ. ಅದಕ್ಕೆ ಪೂರಕವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಸೇತುವೆಯಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ರಾಷ್ಟ್ರೀಯ ಆಂದೋಲನಗಳಲ್ಲಿ ತುಂಗಭದ್ರಾ ಪಾದಯಾತ್ರೆ ಕೂಡ ಒಂದಾಗಲಿದೆ. ನದಿಗಳ ಶುದ್ದೀಕರಣದಲ್ಲಿ ಎಸ್ ಟಿಪಿ (ಒಳಚರಂಡಿ ಸಂಸ್ಕರಣಾ ಘಟಕ)ಗಳ ಪಾತ್ರ ಮಹತ್ವದ್ದಾಗಿದ್ದು, ಈ ಘಟಕ ಸ್ಥಾಪನೆಗೆ ಸಾವಿರಾರು ಕೋಟಿ ರೂ. ಬೇಕಾಗುತ್ತದೆ. ರಾಜ್ಯ ಸರ್ಕಾರದ ಆಶ್ರಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಎಲ್ಲ ನಗರಗಳಲ್ಲೂ ಎಸ್ ಟಿಪಿ ಸ್ಥಾಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಅಭಿಯಾನ ಜನರ ಕಣ್ಣು ತೆರೆಸುವ ಕೆಲಸ ಮಾಡುತ್ತಿದೆ ಎಂದರು.
ಅಭಿಯಾನದ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ನದಿಗಳನ್ನು ಉಳಿಸುವ ನಿಟ್ಟಿನಲ್ಲಿ 600 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ತುಂಗಾ ನದಿಯನ್ನು ಮಲಿನ ಮಾಡಿದ್ದೇವೆ. ನದಿ ಸ್ವಚ್ಛ ಆಗಬೇಕಾದರೆ ಇನ್ಮುಂದೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಭಿಯಾನದ ಪ್ರಮುಖ ಎಂ. ಶಂಕರ್, ಪಾದಯಾತ್ರೆ ಮಾಡಿದರೆ ನದಿ ಶುದ್ಧವಾಗುವುದಿಲ್ಲ. ಇದು ಚಳವಳಿ, ಹೋರಾಟವಲ್ಲ. ಪಾದಯಾತ್ರೆ ಮೂಲಕ ನಾಗರಿಕ ಸಮಾಜ, ಸರ್ಕಾರವನ್ನು ಎಚ್ಚರಿಸುವ ಕೆಲಸ. ಚರಿತ್ರಾರ್ಹ ಪಾದಯಾತ್ರೆಯಿಂದ ಮುಂದಿನ ಮೂರು ವರ್ಷದಲ್ಲಿ ಶಿವಮೊಗ್ಗದ ಒಂದು ಹನಿ ಅಶುದ್ಧ ನೀರು ಕೂಡ ನದಿ ಸೇರುವುದಿಲ್ಲ. ಇದು ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಹೇಳಿದರು.
ಎಂಎಲ್‌ಸಿ ಡಾ.ಧನಂಜಯ ಸರ್ಜಿ, ಶಿವಮೊಗ್ಗ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಗೋಪಿನಾಥ್, ಐಎಂಎ ಶಿವಮೊಗ್ಗ ಜಿಲ್ಲಾಧ್ಯಕ್ಷ ಡಾ. ಎಸ್. ಶ್ರಿಧರ್, ಪ್ರಮುಖರಾದ ಗಿರೀಶ್ ಪಟೇಲ್, ಧಾರವಾಡ ಐಟಿಟಿ ಪ್ರಾಧ್ಯಾಪಕ ಪ್ರೊ. ಎಲ್.ಕೆ. ಶ್ರೀಪತಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post