ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದಲ್ಲಿ ನೆನ್ನೆ ರಾತ್ರಿಯಿಡಿ ಭಾರೀ ಮಳೆಯಾಗಿದ್ದು, ಇಂದು ಬೆಳಿಗ್ಗೆನಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. ಮತ್ತೊಂದೆಡೆ, ನಗರದ ಮೂಲಕ ಹಾದು ಹೋಗಿರುವ ತುಂಗಾ #Tunga ನದಿಯು ಮೈದುಂಬಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಆಗುಂಬೆ, ತೀರ್ಥಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 2 ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಇದರಿಂದ ತುಂಗಾ ಡ್ಯಾಂಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ನಿರಂತರವಾಗಿ ಏರಿಕೆ ಕಂಡುಬರುತ್ತಿದೆ. ತೀರ್ಥಹಳ್ಳಿ, ಶೃಂಗೇರಿ ಭಾಗದಲ್ಲಿ ವರ್ಷಧಾರೆ ರಮಣೀಯತೆಯನ್ನು ಪಡೆದುಕೊಂಡಿದ್ದು, ಮಳೆಯ ರಭಸಕ್ಕೆ ತುಂಗಾ ನದಿಯ ಉಪನದಿಗಳೆಲ್ಲಾ ಉಕ್ಕೇರಿವೆ. ಜೊತೆಯಲ್ಲಿ ತುಂಗೆಯು ಸಹ ಕಳೆಗಟ್ಟಿದೆ. ತುಂಗಾನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಪುರಾಣ ಪ್ರಸಿದ್ಧ ರಾಮೇಶ್ವರ ದೇವಸ್ಥಾನದ ಸಮೀಪ ಇರುವ ರಾಮಕೊಂಡ ಬಹುತೇಕ ಮುಳುಗಿದೆ.

ವಿಶೇಷವಾಗಿ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ಮಂಟಪ ಮುಳುಗಿದೆ. ಇನ್ನೂ ಮಳೆಯು ಹೆಚ್ಚಾಗಿ ಹರಿಯುವ ನೀರಿನ ಕ್ಯೂಸೆಕ್ಸ್ ಪ್ರಮಾಣ ಹೆಚ್ಚಾದರೆ ವಿದ್ಯಾನಗರದ ಭಾಗದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಲಿದೆ. ಏಕೆಂದರೆ ತುಂಗಾ ನದಿಯ ಈ ಭಾಗದಲ್ಲಿ ಬೃಹತ್ ತಡೆಗೋಡೆ ನಿರ್ಮಿಸಲಾಗಿದೆ. ಹೀಗಾಗಿ ಹರಿಯುವ ನೀರು ಇನ್ನೊಂದು ಭಾಗಕ್ಕೆ ಒತ್ತುವುದರಿಂದ ಆ ಕಡೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ. ಇನ್ನೂ ಇತ್ತಾ ಬೀಬಿ ಸ್ಟ್ರೀಟ್ ಸೀಗೇಹಟ್ಟಿ ಭಾಗದಲ್ಲಿ ರಾಜಕಾಲುವೆ ಇರುವ ಸುತ್ತಮುತ್ತ ನದಿ ನೀರು ಉಕ್ಕುವ ಸಾಧ್ಯತೆ ಇದೆ.

Also read: ಶಿವಮೊಗ್ಗ | ನಿಮಗೆ ರೇಡಿಯೋ RJ ಆಗುವ ಕನಸಿದೆಯೇ? ಹಾಗಾದರೆ ಇಲ್ಲಿದೆ ಅವಕಾಶ
ಮತ್ತೊಂದೆಡೆ, ತುಂಗೆಯ ಹರಿವು ಹೆಚ್ಚಾಗಿರುವುದರಿಂದ ನದಿಯಂಚಿನ ತಗ್ಗು ಪ್ರದೇಶಗಳಲ್ಲಿ ಜಲಾವೃತದ ಭೀತಿ ಎದುರಾಗಿದೆ. ಈಗಾಗಲೇ ಪಾಲಿಕೆ ಆಡಳಿತವು ತಗ್ಗು ಪ್ರದೇಶಗಳ ಜನತೆಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಹಾಗೆಯೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಮಾಡಿಕೊಂಡಿದೆ.

ಶಿವಮೊಗ್ಗ 52 ಮಿ.ಮೀ., ಭದ್ರಾವತಿ 26.40 ಮಿ.ಮೀ., ತೀರ್ಥಹಳ್ಳಿ 120.90 ಮಿ.ಮೀ., ಸಾಗರ 129.10 ಮಿ.ಮೀ., ಶಿಕಾರಿಪುರ 57. 90 ಮಿ.ಮೀ., ಸೊರಬ 58.50 ಮಿ.ಮೀ. ಹಾಗೂ ಹೊಸನಗರದಲ್ಲಿ 133.60 ಮಿ.ಮೀ. ಮಳೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









Discussion about this post