ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ತಕ್ಷಣವೇ ರದ್ದು ಪಡಿಸಬೇಕು, ರೈತರ ಉತ್ಪನ್ನಗಳಿಗೆ ಡಾ. ಸ್ವಾಮಿನಾಥನ್‌ರ ವರದಿ ಪ್ರಕಾರ ಬೆಲೆ ನಿಗದಿಪಡಿಸಬೇಕು, ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಬೇಕು, ವಿದ್ಯುತ್ ಖಾಸಗೀಕರಣ ಮಾಡಬಾರದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.
ಅವರು ಭದ್ರಾವತಿ ತಾಲೂಕು ನಾಗಸಮುದ್ರದಲ್ಲಿ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಹುತಾತ್ಮರಿಗೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು.
2023ರ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ, ಡಿ.ಕೆ ಶಿವಕುಮಾರ್ ಉಪಮುಖ್ಯಮಂತ್ರಿಗಳಾಗಿ ಜೊತೆಗೆ 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಭಿನಂದಿಸುತ್ತದೆ. ಆದರೆ ಅವರು ರೈತವಿರೋಧಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ವಿಶೇಷವಾಗಿ ರೈತರು, ಕೃಷಿ ಕಾರ್ಮಿಕರು, ದುಡಿಯುವ ವರ್ಗದ ಜನರು, ಬಡವರು ಎಲ್ಲಾ ಜಾತಿಯ, ಧರ್ಮದ ಜನರು ಸರ್ಕಾರದ ಮೇಲೆ ತುಂಬಾ ಅಕಾಂಕ್ಷೆಗಳನ್ನ ಇಟ್ಟು ಮತವನ್ನು ಹಾಕಿ ಗೆಲ್ಲಿಸಿದ್ದಾರೆ. ಜನರಿಗೆ ಭರವಸೆ ಕೊಟ್ಟಂತೆ ಗ್ಯಾರಂಟಿ ಯೋಜನೆಗಳು ಜಾರಿಗೊಳಿಸುವುದು, ರೈತ ವಿರೋಧಿ ೩ಕೃಷಿ ಕಾಯ್ದೆಗಳನ್ನು ರದ್ದು ಮಾಡುವುದು, ಡಾ. ಸ್ವಾಮಿನಾಥನ್ ವರದಿ ಪ್ರಕಾರ ರೈತ ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆ ನೀಡುವುದು, ರೈತರಿಂದ ದವಸ ಧಾನ್ಯಗಳನ್ನ ಖರೀದಿ ಮಾಡಲು ಆವರ್ತನಿಧಿಯನ್ನು ಮೀಸಲಿಡುವುದು, ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ವಿತರಿಸಬೇಕು ಎಂದರು.
ಮಲೆನಾಡು ಭಾಗದ ಭೂಮಿ ಸಮಸ್ಯೆಯನ್ನ ಪರಿಹರಿಸಬೇಕು, ವಿದ್ಯುತ್ ಖಾಸಗೀಕರಣ ಮಾಡದೆ ಇರುವುದು, ಖಾಸಗೀಕರಣದ ಹುನ್ನಾರವಾಗಿರುವ ರೈತರ ಐ.ಪಿ ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆಯನ್ನು ಮಾಡಬಾರದು, ಏತ ನೀರಾವರಿ ಮತ್ತು ಬೃಹತ್ ನೀರಾವರಿ ಯೋಜನೆಗಳಿಗೆ ಹೆಚ್ಚು ಹಣ ಮೀಸಲಿಡಬೇಕು. ಜೊತೆಗೆ ಈ ಮುಂಗಾರು ಮಳೆಗೆ ಮನೆ ಹಾನಿ, ಬೆಳೆ ಹಾನಿ, ಜನ-ಜನುವಾರು ಸಾವನಪ್ಪಿದ್ದಾರೆ. ಇದಕ್ಕೆ ತಕ್ಷಣ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷ ರಾಘವೇಂದ್ರ ಕೆ., ಜಿಲ್ಲಾ ಕಾರ್ಯದರ್ಶಿ ಗುರುಶಾಂತ, ಜಿಲ್ಲಾ ಹಸಿರುಸೇನೆ ಸಂಚಾಲಕ ಎಂ.ಡಿ ನಾಗರಾಜ್, ತಾ. ಗೌರವಾಧ್ಯಕ್ಷ ಎಂ.ಹೆಚ್ ತಿಮ್ಮಪ್ಪ, ತಾ. ಅಧ್ಯಕ್ಷ ಜಿ.ಎನ್ ಪಂಚಾಕ್ಷರಿ, ತಾ. ಕಾರ್ಯದರ್ಶಿ ಜಿ.ಬಿ. ರವಿ, ರೈತ ಮುಖಂಡರಾದ ನಾಗರಾಜ್, ಎನ್.ಡಿ. ಮಲ್ಲೇಶಪ್ಪ, ಶಿವರಾಜ್, ವೀರೇಶ್, ಹಾಗೂ ಗ್ರಾಮಸ್ಥರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post