ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ 20 ಜನ ವಸತಿ ರಹಿತರನ್ನು ಆಯಾ ಕ್ಷೇತ್ರದ ಶಾಸಕರು ಆಯ್ಕೆ ಮಾಡಿ ಪಟ್ಟಿ ಕಳಿಸಲು ಸರ್ಕಾರ ಹೊರಡಿಸಿರುವ ಆದೇಶವನ್ನು ಹಿಂಪಡೆದು ಗ್ರಾಮಸಭೆಯಲ್ಲಿಯೇ ಆಯ್ಕೆಗೊಂಡ ಫಲಾನುಭವಿಗಳಿಗೆ ವಸತಿ ಯೋಜನೆಯ ಸೌಲಭ್ಯ ಕಲ್ಪಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸಾಗರ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಜಿ.ಪಂ.ಅಧ್ಯಕ್ಷರಿಗೆ ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಪ್ರಮುಖ ಚರ್ಚಿತ ವಿಷಯವಾಗಿತ್ತು. ಈ ವಿಷಯಕ್ಕೆ ಜಿ.ಪಂ.ಸದಸ್ಯ ಕಲಗೋಡು ರತ್ನಾಕರ್, ಶಾಸಕ ಆರ್.ಪ್ರಸನ್ನಕುಮಾರ್ ಅವರು ದನಿಗೂಡಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಮಾತನಾಡಿ, ಗ್ರಾಮ ಸಭೆಯಲ್ಲಿ ಮಂಡಿಸಿ ಆಯ್ಕೆಯಾಗದ ಫಲಾನುಭವಿಗಳ ಪಟ್ಟಿಯನ್ನು ಹಿಂದಿರುಗಿಸಿ ಸರ್ಕಾರದ ನಿಯಮಾನುಸಾರ ಪರಿಶಿಷ್ಟರು-12, ಇತರೆ-5, ಅಲ್ಪಸಂಖ್ಯಾತ -3 ಫಲಾನುಭವಿಗಳು ಆಯ್ಕೆ ಮಾಡಬೇಕು. ಇಲ್ಲದಿದ್ದಲ್ಲಿ ಅಂತಹ ಪಟ್ಟಿಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟ್ಟಪಡಿಸಿದರು.
ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಶೌಚಾಲಯ ರಹಿತ 2306 ನೂತನ ಮನೆಗಳನ್ನು ಗುರುತಿಸಲಾಗಿದೆ. ಅಂತಹ ಮನೆಗಳು ಸರ್ಕಾರದ ಯಾವುದೇ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಂಡಿದ್ದರೆ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಡಲಾಗುವುದು. ಅದಕ್ಕಾಗಿ ಸರ್ಕಾರ 8.19ಕೋಟಿ ಅನುದಾನ ಮಂಜೂರು ಮಾಡಿದೆ ಎಂದರು.
ಕಳೆದ ಕೆಲವು ವಷಗಳಿಂದ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾಗಿದ್ದ ಸುಮಾರು 15560 ಫಲಾನುಭವಿಗಳು ಅವಕಾಶದಿಂದ ವಂಚಿತರಾಗಿದ್ದಾರೆ. ಅಂತಹ ವಸತಿ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಅವಕಾಶ ನೀಡಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡುವಂತೆ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್ ಅವರು ಸಭೆಯ ನಿರ್ಣಯವನ್ನು ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದರು.
ಅರಣ್ಯ ಇಲಾಖೆಯು ಜಿಲ್ಲೆಯ ವಿವಿಧೆಡೆಗಳಲ್ಲಿ ಪರಿಸರಕ್ಕೆ ಹಾನಿಕರವಾಗಿರುವ ಅಕೇಶಿಯ, ನೀಲಗಿರಿ ನೆಡುತೋಪುಗಳಿಂದಾಗಿ ಅಂತರ್ಜಲ ಕುಸಿತ, ಪ್ರಾಣಿಪಕ್ಷಿ ಸಂಕುಲಗಳ ನಾಶ, ವನ್ಯಜೀವಿ ಜೀವ ವೈವಿದ್ಯತೆಗೆ ಧಕ್ಕೆ ಆಗುತ್ತಿದೆ. ಈ ವಿಷಯದ ಕುರಿತು ಪರಿಸರ ವಾದಿಗಳು ತೀವ್ರ ತರಹದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಪಶ್ಚಿಮಘಟ್ಟ ಉಳಿಸುವ ನಿಟ್ಟಿನಲ್ಲಿ ಸಮಿತಿಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ನಿರ್ಣಯವನ್ನು ಸಲ್ಲಿಸುವಂತೆ ಅಧ್ಯಕ್ಷರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್ ಅವರು ಮಾತನಾಡಿ, ಈ ವಿಷಯದ ಕುರಿತು ವಿಸ್ತ್ರತವಾಗಿ ಚರ್ಚಿಸಲು ವಿಶೇಷ ಸ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಸೇರಿದಂತೆ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಗಳ ಅಧ್ಯಕ್ಷರು, ಜಿ.ಪಂ.ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post