ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬನಗರದ ಕೆಳದಿ ಚೆನ್ನಮ್ಮ ರಸ್ತೆಯ ವಿನ್ಯಾಸ ಟ್ರೇಡರ್ಸ್ ನ ಮುಂಭಾಗದ ಪಾಲಿಕೆ ಜಾಗದಲ್ಲಿ ದಿನನಿತ್ಯ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಸದರಿ ಜಾಗವನ್ನು ಸಾಕಷ್ಟು ದುರುಪಯೋಗ ಮಾಡಿಕೊಳ್ಳುತ್ತಿದೆ. ಇದರಿಂದ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಸದರಿ ಜಾಗದಲ್ಲಿ ಫೆನ್ಸಿಂಗ್ ಅನ್ನು ಅಳವಡಿಸಬೇಕಾಗಿ ಇಂದು ಕೆಳದಿ ಚೆನ್ನಮ್ಮ ವಿನೋಬನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪಾಲಿಕೆ ಮೇಯರ್ ಸುನಿತಾ ಅಣ್ಣಪ್ಪ ಅವರಿಗೆ ವಿನಂತಿಸಲಾಯಿತು.
ನಗರದ ಕೆಳದಿ ಚೆನ್ನಮ್ಮ ರಸ್ತೆಯಲ್ಲಿನ ಚಾನೆಲ್ ಸೇತುವೆ ಪಕ್ಕದಲ್ಲಿನ ವಿನ್ಯಾಸ ಟ್ರೇಡರ್ಸ್ ನ ಮುಂಭಾಗದ ಪಾಲಿಕೆ ಜಾಗದಲ್ಲಿ ದಿನನಿತ್ಯ ಮಧ್ಯಾಹ್ನದಿಂದ ಕುಡುಕರ ಹಾವಳಿ ಹೆಚ್ಚಾಗಿದ್ದು, ನಿವಾಸಿಗಳ ಮನೆಯ ಮುಂಭಾಗದಲ್ಲಿ ಆಟೋಗಳಲ್ಲಿ ಕುಡಿಯುತ್ತಾ ಕೂರುತ್ತಾರೆ. ಹಾಗೂ ಸಂಜೆಯಾಗುತ್ತಿದ್ದಂತೆ ಕುಡಿದು ಕೂಗಾಡುವುದು ಗಲಾಟೆ ಮಾಡುವುದು ಮಾಡುತ್ತಿದ್ದಾರೆ. ಇದರಿಂದ ಸಂಜೆ ಹೊತ್ತಿನಲ್ಲಿ ಬಡಾವಣೆ ಹೆಣ್ಣು ಮಕ್ಕಳು ಓಡಾಡುವುದೇ ಕಷ್ಟವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಚರಂಡಿಯಲ್ಲಿ ಬಿದ್ದು ಮೃತನಾಗಿದ್ದಾನೆ. ಇದರಿಂದ ನಿವಾಸಿಗಳು ನೆಮ್ಮದಿಯ ಬದುಕು ಬಾಳುವುದು ಕಷ್ಟವಾಗಿದೆ. ದಯವಿಟ್ಟು ಈ ಕೂಡಲೇ ತಾವು ಸೂಕ್ತ ಕ್ರಮವನ್ನು ತೆಗೆದುಕೊಂಡು ಸದರಿ ಜಾಗವನ್ನು ಅಭಿವೃದ್ಧಿಪಡಿಸುವ ತನಕ ಅಲ್ಲಿ ಫೆನ್ಸಿಂಗ್ ಅನ್ನು ಅಳವಡಿಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ನಿವಾಸಿಗಳ ಸಂಘದ ಮೂಲಕ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ನಿವಾಸಿಗಳ ಸಂಘದ ಗೌರವ ಸಲಹೆಗಾರರಾದ ಬಲರಾಮ್, ಪ್ರಧಾನ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ಮತ್ತು ಸಂಘದ ಹೆಚ್. ಕುಮಾರ್, ಆರ್. ರವಿ, ಶ್ರೀಕಾಂತ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post