ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ವಾರ್ಥ ರಹಿತ ಸಂಘಟಕ ಎನ್.ಡಿ. ಸುಂದರೇಶ್ ನಿಷ್ಕಲ್ಮಶ ಮನಸ್ಸಿನ ರೈತ ಚಳುವಳಿಯ ಸೂರ್ಯ ಎಂದು ಮೈಸೂರಿನ ಖ್ಯಾತ ಹಿರಿಯ ಸಾಹಿತಿ ಡಾ.ಹಿ.ಶಿ. ರಾಮಚಂದ್ರೇಗೌಡ ಅಭಿಪ್ರಾಯಪಟ್ಟರು.
ಇಂದು ನಗರದ ಎನ್‌ಇಎಸ್ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಎನ್.ಡಿ. ಸುಂದರೇಶ ಪ್ರತಿಷ್ಟಾನ ವತಿಯಿಂದ ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕರಾದ ಎನ್.ಡಿ. ಸುಂದರೇಶ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎನ್.ಡಿ. ಸುಂದರೇಶ್ ಅವರು ಸಮಗ್ರ ವ್ಯಕ್ತಿತ್ವದ ನಿರ್ಮಲ ಮನಸ್ಸಿನ ಸಹೃದಯಿ. ಎಲ್ಲರನ್ನೂ ಆತ್ಮೀಯಗೊಳಿಸಿಕೊಳ್ಳುವ ಶಕ್ತಿ ಅವರದಾಗಿತ್ತು. ಈ ಮೂಲಕ ಇಡೀ ರೈತ ಸಂಘದ ದೊಡ್ಡ ಶಕ್ತಿಯಾಗಿದ್ದರು. 20 ನೇ ಶತಮಾನ ಕಟ್ಟುವ ಶತಮಾನವಾದರೇ 21ನೇ ಶತಮಾನ ಬಳಸಿಕೊಳ್ಳುವ ಶತಮಾನವಾಗಿದೆ. ಕಟ್ಟುವ ಕ್ರಿಯೆಯಿಲ್ಲದಿದ್ದರೆ ನಮ್ಮನ್ನು ಕಳೆದುಕೊಳ್ಳುತ್ತೇವೆ. ಕಟ್ಟುವ ಕ್ರಿಯೆ ಸಾಧ್ಯವಾಗುವುದು ವ್ಯಕ್ತಿತ್ವದಿಂದಲೇ ವಿನಃ ವ್ಯಕ್ತಿಯಿಂದಲ್ಲ. ಹಾಗಾಗಿಯೇ ನಮ್ಮ ದೇಶಕ್ಕೆ ವ್ಯಕ್ತಿತ್ವದ ಅವಶ್ಯಕತೆಯಿದೆ ಎಂದರು.
ಇಂದಿಗೂ ಭಾರತವನ್ನು ಗುರುತಿಸುವುದು ಹಲವಾರು ಮಹನೀಯರ ವ್ಯಕ್ತಿತ್ವಗಳಿಂದ. ಇಂತಹ ಹಲವಾರು ವ್ಯಕ್ತಿತ್ವಗಳನ್ನು ನಮ್ಮ ಯುವ ಸಮೂಹ ಆದರ್ಶವಾಗಿ ಇಟ್ಟುಕೊಳ್ಳದಿದ್ದರೇ ನಾವು ಕೇವಲ ಹಿರಿಯರು ಕಟ್ಟಿದ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ಸಾಮಾಗ್ರಿಗಳಾಗಿ ಉಳಿದುಬಿಡುತ್ತೇವೆ. ಹೆಚ್ಚು ವ್ಯಕ್ತಿತ್ವಗಳಿದ್ದಾಗ ಮಾತ್ರ ಸಮಾಜಕ್ಕೆ ಹೆಚ್ಚು ಬಲ ತುಂಬಲು ಸಾಧ್ಯ. ವ್ಯಕ್ತಿತ್ವವಿರುವ ಯಾವ ವ್ಯಕ್ತಿಯು ಕೂಡ ಸಂಗೊಳ್ಳಿ ರಾಯಣ್ಣನಂತಹ ಮಹನೀಯರ ಪ್ರತಿಮೆಗಳನ್ನು ವಿರೂಪಗೊಳಿಸುವುದಿಲ್ಲ. ಶಿವಮೊಗ್ಗ ಜಿಲ್ಲೆ ಹಲವಾರು ಹೋರಾಟಗಳ, ಸಾಹಿತ್ಯ ಸಾಂಸ್ಕೃತಿಕವಾಗಿ ಸಾಕ್ಷಿಯಾದ ನೆಲ. ಹಾಗಾಗೀ ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆ ಬಹಳ ಎತ್ತರದ ಸ್ಥಾನದಲ್ಲಿ ಹೊಳೆಯುತ್ತಿದೆ ಎಂದು ಹೇಳಿದರು.
ಎನ್.ಡಿ. ಸುಂದರೇಶ್ ಪ್ರತಿಷ್ಟಾನದ ಅಧ್ಯಕ್ಷರಾದ ಶೋಭಾ ಸುಂದರೇಶ್ ಮಾತನಾಡಿ, ಎನ್.ಡಿ. ಸುಂದರೇಶ್ ಅವರು ರೈತ ಸಂಘಟನೆಗಿಂತ ಮೊದಲು ಕೃಷಿಕರಾಗಿ ಹಲವು ಪ್ರಯೋಗಗಳನ್ನು ಬಹಳ ಶ್ರದ್ಧೆ ಮತ್ತು ಆಸಕ್ತಿಯಿಂದ ನಡೆಸಿದರು. ಆದರೆ ನಾವು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದಿದ್ದಾಗ ಇಡೀ ರೈತ ಸಮೂಹಕ್ಕೆ ನಿಜವಾದ ಬೆಲೆ ಸಿಗುವಂತೆ ಸಂಘಟಿಸಿದರು. ನರಗುಂದದಲ್ಲಿ ನಡೆದ ರೈತರ ಮೇಲಿನ ಗೊಲಿಬಾರ್ ಪ್ರಕರಣ ರಾಜ್ಯ ರೈತ ಸಂಘ ಉದಯವಾಗಲು ಕಾರಣವಾಯಿತು ಎಂದರು.
ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್.ಎಸ್. ರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಸುಂದರೇಶ್ ಅವರ ನಾಯಕತ್ವದಲ್ಲಿ ಗಾಂಧೀ ತತ್ವದ ಹಿನ್ನಲೆಯಲ್ಲಿ ಹಲವಾರು ಹೋರಾಟಗಳು ಪ್ರಾರಂಭಗೊಂಡಿತು. ಹಸಿರು ಶಾಲು ಚಳುವಳಿಯ ಮೂಲ ಅಸ್ತ್ರವಾಗಿ ಅನುಷ್ಟಾನವಾಯಿತು. ಸುಂದರೇಶ್ ಪ್ರತಿಷ್ಟಾನದ ಮೂಲಕ ಅವರ ಹೋರಾಟದ ಹಾದಿಗಳನ್ನು ಮತ್ತು ಅವರ ಆದರ್ಶಯುತ ಗುಣಗಳನ್ನು ಯುವ ಸಮೂಹಕ್ಕೆ ಪರಿಚಯಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಟಿ.ಆರ್. ಅಶ್ವಥನಾರಾಯಣ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಡಾ.ಚಿದಾನಂದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆಯಲ್ಲಿ ಸುಂದರೇಶ್ ಅವರ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕವಿಗಳು ಸುಂದರೇಶ್ ಅವರ ಕುರಿತು ಕವನಗಳನ್ನು ವಾಚಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post